ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಎಚ್‌ಐವಿ ಗಣನೀಯ ಇಳಿಕೆ

2016ರ ಬಳಿಕ ಎಚ್‌ಐವಿ ಬಾಧಿತ ತಾಯಿಯಿಂದ ಮಗುವಿಗೆ ಸೋಂಕು ವರ್ಗಾವಣೆ ಇಲ್ಲ: ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು
Last Updated 30 ನವೆಂಬರ್ 2021, 13:45 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಜಿಲ್ಲೆಯಲ್ಲಿ 2016ರಿಂದ ಇಲ್ಲಿಯವರೆಗೂ ಎಚ್‌ಐವಿ ಬಾಧಿತ ತಾಯಿಯಿಂದ ಮಗುವಿಗೆ ಸೋಂಕು ವರ್ಗಾವಣೆಯಾಗದಂತೆ ತಡೆಯುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ತಿಳಿಸಿದರು.

ಮಂಗಳವಾರ ಡಿಎಚ್‌ಒ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭಿಣಿಯರು ತಪಾಸಣೆಗೊಳಪಡುವ ಸಂದರ್ಭ ಎಚ್‌ಐವಿ ಪತ್ತೆಯಾದರೆ ಕೂಡಲೇ ಚಿಕಿತ್ಸೆ ಆರಂಭಿಸಿ, ಸೋಂಕು ಮಗುವಿಗೆ ವರ್ಗಾವಣೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ಪ್ರಸವದ ಬಳಿಕ ಮಗುವಿಗೆ ಸೋಂಕು ತಗುಲದಂತೆ ಚುಚ್ಚುಮದ್ದು ಹಾಕಲಾಗುತ್ತದೆ. ಇದರಿಂದ ತಾಯಿಯಿಂದ ಮಗುವಿಗೆ ಸೋಂಕು ಹರಡುವಿಕೆ ಸಾದ್ಯತೆ ತೀರಾ ಕಡಿಮೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಏಡ್ಸ್‌ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾಲೇಜುಗಳಲ್ಲಿ ಹದಿ ಹರೆಯದವರಿಗೆ ಕಾರ್ಯಾಗಾರ ನಡೆಸಲಾಗಿದೆ. ಕಳೆದ ವರ್ಷ ಕುಂದಾಪುರ ತಾಲ್ಲೂಕಿನ 3 ಪ್ರೌಢಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವರ್ಷ ಕಾರ್ಕಳ ತಾಲ್ಲೂಕಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, 2018ರ ಎಚ್‌ಎಸ್‌ಎಸ್‌ ಸರ್ವೆ ಪ್ರಕಾರ ಬಾಗಲಕೋಟೆ (1.17), ಚಿತ್ರದುರ್ಗ (1.13), ರಾಯಚೂರು (0.88), ಕಲಬುರ್ಗಿ (0.75) ಕೊಪ್ಪಳ ಹಾಗೂ ಮೈಸೂರು (0.63) ಎಚ್‌ಐವಿ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ.

ದೇಶದಲ್ಲಿ ಅತಿ ಹೆಚ್ಚು ಎಚ್‌ಐವಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವ ರಾಜ್ಯಗಳಲ್ಲಿ ನಾಗಾಲ್ಯಾಂಡ್(1.66), ಮಿಜೋರಾ(0.91), ತ್ರಿಪುರಾ (0.63), ಮಣಿಪುರ (0.51), ಮೇಘಾಲಯ (0.45) ರಾಜ್ಯಗಳಿವೆ. ವಿಶ್ವದಲ್ಲಿ 3.57 ಕೋಟಿ ಎಚ್‌ಐವಿ ಸೋಂಕಿತರಿದ್ದು, 21 ಲಕ್ಷ ಸೋಂಕಿತರು 10 ರಿಂದ 19 ವರ್ಷದೊಳಗಿನವರಿದ್ದಾರೆ, 16 ಲಕ್ಷ ಸೋಂಕಿತರು ಏಡ್ಸ್‌ನಿಂದ ಮರಣ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ಸೋಂಕು ಹರುಡುವುದು ಹೇಗೆ:

ಎಚ್‌ಐವಿ ಸೋಂಕಿತ ವ್ಯಕ್ತಿಯ ಜತೆಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಪರೀಕ್ಷೆ ಮಾಡದ ರಕ್ತ ಪಡೆಯುವುದರಿಂದ, ಎಚ್‌ಐವಿ ಸೋಂಕಿತ ತಾಯಿಯಿಂದ ಮಗುವಿಗೆ, ಎಚ್‌ಐವಿ ಸೋಂಕಿತ ಸೂಚಿ, ಸಿರಿಂಜ್‌ಗಳನ್ನು ಸಂಸ್ಕರಿಸದೆ ಬಳಸುವುದರಿಂದ ಎಚ್‌ಐವಿ ಸೋಂಕು ಹರಡುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಅಗತ್ಯ ಎಂದು ಡಾ.ಚಿದಾನಂದ ಸಂಜು ತಿಳಿಸಿದರು.

ಆತ್ಮಸ್ಥೈರ್ಯದ ಮದ್ದು ಕೊಡಿ:

ಎಚ್‌ಐವಿ ಸೋಂಕಿತರು ಎಲ್ಲರಂತೆ ಜೀವನ ನಡೆಸಬಹುದು. ಭಯದಿಂದ ಏಡ್ಸ್‌ ರೋಗಿಗಳು ಮಾನಸಿಕ ಸ್ಥೈರ್ಯ ಕಳೆದುಕೊಂಡು ಊಟ, ನಿದ್ರೆ ತ್ಯಜಿಸಿ ಚಿಂತೆ ಮಾಡುತ್ತಾರೆ. ಸಮಾಜದ ನಿಂದನೆ, ಮಾನಸಿಕ ಒತ್ತಡದಿಂದ 20 ರಿಂದ 30 ವರ್ಷ ಬದುಕುವ ರೋಗಿಯು ಒಂದೆರಡು ವರ್ಷಗಳಲ್ಲಿ ಸಾವನ್ನಪ್ಪುತ್ತಾರೆ. ಎಚ್‌ಐವಿ ಸೋಂಕಿತರಿಗೆ ಆರ್ತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು, ಸಾಂತ್ವನ, ಸಮಾಲೋಚನೆ ಮೂಲಕ ಎಆರ್‌ಟಿ ಚಿಕಿತ್ಸೆ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದರು.

ಡಿ.1ರಂದು ಏಡ್ಸ್ ದಿನಾಚರಣೆ

ಅಂಬಲಪಾಡಿಯ ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಡಿ.1ರಂದು ಬೆಳಿಗ್ಗೆ 10ಕ್ಕೆ ವಿಶ್ವ ಏಡ್ಸ್ ದಿನಾಚರಣೆ ನಡೆಯಲಿದೆ. ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಉದ್ಘಾಟಿಸಲಿದ್ದಾರೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್‌.ಶರ್ಮಿಳಾ, ಡಿಎಚ್‌ಒ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ವಿದ್ಯಾರತ್ನ ಸ್ಕೂಲ್ ಹಾಗೂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಿತಾ ಸಿ.ರಾವ್‌, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ವಿ.ಗಣೇಶ್‌, ಲಯನ್ಸ್ ಕ್ಲಬ್‌ ಅಧ್ಯಕ್ಷರಾದ ರವಿರಾಜ್ ನಾಯಕ್‌, ಆಸರೆ ಚಾರಿಟಬಲ್ ಅಧ್ಯಕ್ಷ ಸಂಜೀವ ವಂಡ್ಸೆ ಉಪಸ್ಥಿತರಿರಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್ ಇದ್ದರು.

ಗ್ರಾಫಿಕ್ಸ್‌

ಜಿಲ್ಲೆಯಲ್ಲಿ ಗರ್ಭಿಣಿ ಎಚ್‌ಐವಿ ಸೋಂಕಿತರು

ವರ್ಷ–ಪರೀಕ್ಷೆ ಪ್ರಮಾಣ–ಎಚ್‌ಐವಿ ಸೋಂಕಿತರು–ಶೇಕಡವಾರು

2009–10–9846–51–ಶೇ 0.51

2010–11–11549–39–ಶೇ 0.33

2011–12–13,893–31–ಶೇ0.22

2012–13–14,540–31–ಶೇ 0.21

2013–14–15,127–18–ಶೇ 0.11

2014–15–18,798–16–ಶೇ0.08

2015–16–18548–11–ಶೇ0.59

2016–17–19,487–15–ಶೇ0.07

2017–18–20,050–10–ಶೇ0.04

2018–19–19907–6–ಶೇ0.03

2019–20–19,872–7–ಶೇ0.03

2020–21–19,012–14–ಶೇ0.07

2021–22–11889–4–ಶೇ0.03 (ಅಕ್ಟೋಬರ್‌ವರೆಗೆ)

ಗ್ರಾಫಿಕ್ಸ್‌

ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ವಿವರ

–––––––––––––––––––––––

ವರ್ಷ–ಪರೀಕ್ಷೆ ಪ್ರಮಾಣ–ಎಚ್‌ಐವಿ ಸೋಂಕಿತರು–ಶೇಕಡವಾರು

2009–10–17611–1002–ಶೇ 5..6

2010–11–18,608–1021–ಶೇ 5.4

2011–12–26,659–818–ಶೇ3.1

2012–13–27,381–691–ಶೇ 2.5

2013–14–31,468–624–ಶೇ 1.9

2014–15–31,011–473–ಶೇ1.5

2015–16–33,088–381–ಶೇ1.15

2016–17–37,108–366–ಶೇ0.98

2017–18–52,885–283–ಶೇ0.53

2018–19–60,033–336–ಶೇ0.55

2019–20–62,960–242–ಶೇ0.38

2020–21–44,791–189–ಶೇ0.42

2021–22–34,154–88–ಶೇ0.25 (ಅಕ್ಟೋಬರ್‌ವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT