ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ರಿ | ಕೃಷಿ ಭೂಮಿಗೆ ಕಾಡುಪ್ರಾಣಿ ಲಗ್ಗೆ: ಅಪಾರ ನಷ್ಟ

ಸುಕುಮಾರ್‌ ಮುನಿಯಾಲ್
Published 23 ಮೇ 2024, 7:33 IST
Last Updated 23 ಮೇ 2024, 7:33 IST
ಅಕ್ಷರ ಗಾತ್ರ

ಹೆಬ್ರಿ: ಈ ಬಾರಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಅವಧಿ ಅತ್ಯಂತ ಸುದೀರ್ಘವಾಗಿದ್ದು, ಕೃಷಿಕರು ಪರವಾನಗಿ ಹೊಂದಿದ ತಮ್ಮ ಕೋವಿಗಳನ್ನು ಪೊಲೀಸ್‌ ಠಾಣೆಯಲ್ಲಿ ಠೇವಣಿ ಇರಿಸಿದ್ದಾರೆ. ಇದರಿಂದಾಗಿ ಕೃಷಿ ಕ್ಷೇತ್ರಕ್ಕೆ ಮಂಗಗಳ ಸಹಿತ ಕಾಡುಪ್ರಾಣಿಗಳು ಲಗ್ಗೆಯಿಟ್ಟು ವರ್ಷವಿಡೀ ಕಾಪಾಡಿಕೊಂಡು ಬಂದ ಫಸಲು ಅವುಗಳ ಪಾಲಾಗುತ್ತಿರುವುದನ್ನು ನೋಡಲಾಗದೆ ರೈತರು ಕಂಗಲಾಗಿದ್ದಾರೆ.

ಯಾವೂ ಬೆದರಿಕೆಗೂ ಬಗ್ಗದ ಮಂಗಗಳು ಹಿಂಡು ಹಿಂಡಾಗಿ ತೆಂಗು ತೋಟದ ಸಹಿತ ಕೃಷಿ ಕ್ಷೇತ್ರಕ್ಕೆ ಲಗ್ಗೆಯಿಡುತ್ತಿವೆ. ಹಾಳಾಗುತ್ತಿರುವ ಫಸಲು ನೋಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಸರ್ಕಾರದ ಕೆಲವು ಅಸಂಬದ್ಧ ನೀತಿ ನಿಯಮಗಳ ಬಗ್ಗೆ ರೈತರು ಬೇಸರ ವ್ತಕ್ತಪಡಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀತಿ ಸಂಹಿತೆಯನ್ನು ಸ್ವಲ್ಪ ಸಡಿಲಿಸಿ ಅಗತ್ಯವಿರುವ ರೈತರಿಗೆ ಠೇವಣಿ ಇಟ್ಟ ಕೋವಿಗಳನ್ನು ವಾಪಾಸು ನೀಡಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ನೀಡುತ್ತಿಲ್ಲ. ಇತ್ತೀಚೆಗೆ ಯಾರೋ ಅಧಿಕಾರಿಗಳು ಕರೆ ಮಾಡಿ ಅಗತ್ಯವಾಗಿ ಕೋವಿ ಬೇಕಾದರೆ ತಿಳಿಸಿ ವಾಪಾಸು ಕೊಡುತ್ತೇವೆ ಎಂದು ಕೇಳಿ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಈ ತನಕ ಮರಳಿ ನೀಡಿಲ್ಲ ಎಂದು ಮುನಿಯಾಲು ಕಾಡುಹೊಳೆಯ ಕೃಷಿಕ ಆನಂದ ಪೂಜಾರಿ ತಿಳಿಸಿದ್ದಾರೆ.

ಚುನಾವಣೆ ಸಂದರ್ಭ ಕೋವಿ ಸಹಿತ ಶಸ್ತ್ರಾಸ್ತ್ರ ಠೇವಣಿ ಇಡುವ ಪದ್ಧತಿಯಿಂದ ವಿನಾಯಿತಿ ಕೋರಿ ದಕ್ಷಿಣ ಕನ್ನಡ ಜಿಲ್ಲೆ ಕೃಷಿಕ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಜಿಲ್ಲಾಡಳಿತ ಮನವಿ ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಕೋವಿ ಎಲ್ಲರೂ ಠೇವಣಿ ಇಡಬೇಕೆಂದಿಲ್ಲ ಎಂದು ಆದೇಶ ನೀಡಿತ್ತು.

ಪರವಾನಗಿ ನೀಡುವಾಗಲೇ ತನಿಖೆ ನಡೆಸಿ ಅರ್ಹರಿಗೆ ಮಾತ್ರ ನೀಡಲಾಗುತ್ತದೆ. ಆದ್ದರಿಂದ ಎಲ್ಲರೂ ಠೇವಣಿ ಇಡಬೇಕು ಎಂಬ ಜಿಲ್ಲಾಧಿಕಾರಿ ಅವರ ಆದೇಶ ಸರಿಯಲ್ಲ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಕ್ರಿಮಿನಲ್‌ ಹಿನ್ನೆಲೆ ಉಳ್ಳವರ ಬಂದೂಕು ಸಹಿತ ಶಸ್ತ್ರಾಸ್ತ್ರ ಇರಿಸಿಕೊಳ್ಳಬೇಕು. ಆದರೆ ಅಧಿಕಾರಿಗಳು ಸುಲಭ ದಾರಿ ಅನುಸರಿಸುತ್ತಾರೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವನ್ಯಜೀವಿಗಳಿಂದ ಅಪಾಯ ಎದುರಿಸುತ್ತಿರುವ ದುರ್ಬಲ ಸಮುದಾಯಗಳು ಅವರ ಬೆಳೆ ರಕ್ಷಣೆ, ಹಾನಿ ಗಮನದಲ್ಲಿ ಇಟ್ಟುಕೊಳ್ಳಬೇಕು. ಇದರ ಪರಿಹಾರಕ್ಕೆ ಸ್ಕ್ರೀನಿಂಗ್‌ ಸಮಿತಿ ಅರಣ್ಯ ಬಳಿಯ ರೈತರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಚುನಾವಣಾ ಸಮಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜೊತೆಗೆ ಅರಣ್ಯದಂಚಿನ ರೈತರು, ದುರ್ಬಲ ಸಮುದಾಯಗಳು, ಮತ್ತು ವನ್ಯಮೃಗಗಳ ನಡುವೆ ನಡೆಯುವ ಸಂಘರ್ಷ ಪರಿಗಣಿಸಿ ಜನರು ಮತ್ತು ವನ್ಯಜೀವಿಗಳ ಮಧ್ಯೆ ಸಮತೋಲನಕ್ಕೆ ಸ್ಪಷ್ಟ ನಿಲುವು ತಳೆಯಬೇಕು ಎಂದು ಹೈಕೋರ್ಟ್‌ ಸೂಚಿಸಿದೆ.

ಪ್ರತಿ ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಆಯುಧ ಪರವಾನಗಿ ಹೊಂದಿದವರ ಮೌಲ್ಯಮಾಪನ ನಡೆಸಬೇಕು, ಕ್ರಿಮಿನಲ್‌ ಹಿನ್ನೆಲೆ, ಈ ಹಿಂದೆ ಚುನಾವಣೆ ಸಂದರ್ಭ ಗಲಭೆ ನಡೆಸಿದವರನ್ನು ಒಳಗೊಂಡಿರಬೇಕು. ಈ ಕ್ರಮಗಳು ಸಂಭಾವ್ಯ ಅಪಾಯ ಗುರುತಿಸಲು, ಅಗತ್ಯ ಮುಂಜಾಗರೂಕತೆ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶ ಹೊಂದಿರಬೇಕು ಹೈಕೋರ್ಟ್‌ ಅಭಿಪ್ರಾಯ ಪಟ್ಟಿದೆ. ರೈತರು ಮತ್ತು ಕೃಷಿಕರ ನೋವು ಅರಿತು ನ್ಯಾಯಾಲಯ ಆದೇಶ ನೀಡಿದೆ. ಜಿಲ್ಲಾಡಳಿತ ನ್ಯಾಯಾಲಯದ ಆದೇಶಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಂತೆಯೇ ಉಡುಪಿ ಜಿಲ್ಲೆಗೂ ಅನ್ವಯಿಸಬೇಕು, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆನಂದ ಪೂಜಾರಿ ಮನವಿ ಮಾಡಿದ್ದಾರೆ.

ಮುನಿಯಾಲಿನ ತೋಟವೊಂದರಲ್ಲಿ ಮಂಗಗಳು ಕಿತ್ತು ತಿಂದು ಹಾಕಿದ ಬೊಂಡ
ಮುನಿಯಾಲಿನ ತೋಟವೊಂದರಲ್ಲಿ ಮಂಗಗಳು ಕಿತ್ತು ತಿಂದು ಹಾಕಿದ ಬೊಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT