ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಕೃಷ್ಣಮಠದಲ್ಲಿ ವೈಭವದ ಚೂರ್ಣೋತ್ಸವ

Published 16 ಜನವರಿ 2024, 5:44 IST
Last Updated 16 ಜನವರಿ 2024, 5:44 IST
ಅಕ್ಷರ ಗಾತ್ರ

ಉಡುಪಿ: ಶ್ರೀಕೃಷ್ಣಮಠದಲ್ಲಿ ದೇವರ ವಾರ್ಷಿಕ ಸಪ್ತೋತ್ಸವದ ಕೊನೆಯ ದಿನವಾದ ಸೋಮವಾರ ಅದ್ಧೂರಿ ಚೂರ್ಣೋರ್ತವ, ಹಗಲು ಬ್ರಹ್ಮ ರಥೋತ್ಸವ ನೆರವೇರಿತು. 

ಅಷ್ಟ ಮಠಾಧೀಶರ ಸಹಿತ ನೆರೆದಿದ್ದ ಸಾವಿರಾರು ಭಕ್ತರು ಭಕ್ತಿಭಾವದಿಂದ ರಥ ಎಳೆದು ಕೃಷ್ಣನಿಗೆ ಭಕ್ತಿ ಸಮರ್ಪಿಸಿದರು. ಉತ್ಸವದ ಆರಂಭದಲ್ಲಿ ಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ದೇವರಿಗೆ ಪೂಜೆ, ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿ ನೇರವೇರಿಸಿದ ನಂತರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಚಂಡೆ, ಮಂಗಳವಾದ್ಯ, ವೇದ ಘೋಷಗಳ ಸದ್ದಿನೊಂದಿಗೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ರಥಬೀದಿ ಸುತ್ತಲೂ ಸಾಗುತ್ತಿದ್ದಂತೆ ಯತಿಗಳು ಪ್ರಸಾದವನ್ನು ಭಕ್ತರತ್ತ ತೂರಿದರು. ಈ ಸಂದರ್ಭ ಕೃಷ್ಣನ ಪ್ರಸಾದಕ್ಕೆ ಭಕ್ತರು ಮುಗಿಬಿದ್ದರು.

ಬ್ರಹ್ಮರಥ ರಥಬೀದಿಯಲ್ಲಿ ಒಂದು ಸುತ್ತು ಪೂರೈಸಿ ಮೂಲಸ್ಥಾನಕ್ಕೆ ಮರಳಿದ ನಂತರ ಮಧ್ವ ಸರೋವರದಲ್ಲಿ ಕೃಷ್ಣ ಮುಖ್ಯಪ್ರಾಣ, ಉತ್ಸವ ಮೂರ್ತಿಗೆ ಅವಭೃತ ಸ್ನಾನ ನೆರವೇರಿಸಲಾಯಿತು. ಮಧ್ವಮಂಟಪದಲ್ಲಿ ಅಷ್ಟ ಮಠಾಧೀಶರಿಗೆ ಗೌರವ ಸಲ್ಲಿಸಿ ಮಾಲಿಕೆ ಮಂಗಳಾರತಿ ಮಾಡಲಾಯಿತು.

ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಯತಿಗಳಾದ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠಾಧೀಶರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಶೀರೂರು ಮಠಾಧೀಶರಾದ ವೇದವರ್ಧನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರತಿವರ್ಷ ಕೃಷ್ಣಮಠದಲ್ಲಿ ಸಪ್ತೋತ್ಸವ ನಡೆಯುವುದು ಸಂಪ್ರದಾಯ. ಮೊದಲ ಐದು ದಿನಗಳು ಎರಡು ರಥೋತ್ಸವ, ಆರನೇ ದಿನ ತ್ರಿರಥೋತ್ಸವಗಳು ನಡೆದು, ಏಳನೇ ಹಾಗೂ ಕೊನೆಯ ದಿನ ಬ್ರಹ್ಮರಥೋತ್ಸವ (ಚೂರ್ಣೋತ್ಸವ) ನೆರವೇರುತ್ತದೆ. ಈ ಮೂಲಕ ಸಪ್ತೋತ್ಸವಕ್ಕೆ ತೆರೆ ಬೀಳುತ್ತದೆ.

ದ್ವೈತ ಮತ ಸ್ಥಾಪಕರಾದಮಧ್ವಾಚಾರ್ಯರು ಮಕರ ಸಂಕ್ರಮಣದ ಪರ್ವಕಾಲದಲ್ಲಿ ಕಡೆಗೋಲು ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದ್ದು ಪ್ರತಿವರ್ಷ ಸಪ್ತೋತ್ಸವದ ಮೂಲಕ ಸಂಭ್ರಮಾಚರಣೆ ನಡೆಯುತ್ತದೆ.

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಪ್ರಸ್ತುತ ಪರ್ಯಾಯ ಅವಧಿಯ ಕೊನೆಯ ಸಪ್ತೋತ್ಸವ, ಚೂರ್ಣೋತ್ಸವ ಇದಾಗಿದ್ದು ಜ.18ರಂದು ಪುತ್ತಿಗೆ ಮಠಕ್ಕೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಮುಂದಿನ ಸಪ್ತೋತ್ಸವ ಪುತ್ತಿಗೆ ಮಠದ ನೇತೃತ್ವದಲ್ಲಿ ನಡೆಯಲಿದೆ.

ಚೂರ್ಣೋರ್ತವದ ಬಳಿಕ ಯತಿಗಳು ಮಧ್ವ ಸರೋವರದಲ್ಲಿ ಅವಭೃತ ಸ್ನಾನ ನೇೆರವೇರಿಸಿದರು
ಚೂರ್ಣೋರ್ತವದ ಬಳಿಕ ಯತಿಗಳು ಮಧ್ವ ಸರೋವರದಲ್ಲಿ ಅವಭೃತ ಸ್ನಾನ ನೇೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT