ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಟ್‌ ದುರಂತ ಮುಚ್ಚಿಟ್ಟ ಬಿಜೆಪಿ: ಪ್ರಮೋದ್ ಮಧ್ವರಾಜ್ ಆರೋಪ

’ಚುನಾವಣೆ ಮುಗಿದ ಬಳಿಕ ಹುಡುಕಾಡುವ ನಾಟಕ’
Last Updated 4 ಮೇ 2019, 13:52 IST
ಅಕ್ಷರ ಗಾತ್ರ

ಉಡುಪಿ: ಸುವರ್ಣ ತ್ರಿಭುಜ ಬೋಟ್‌ಗೆ ನೌಕಾಪಡೆಯ ಐಎನ್‌ಎಸ್‌ ಕೊಚ್ಚಿನ್‌ ಹಡಗು ಡಿಕ್ಕಿಹೊಡಿದಿರುವ ಬಲವಾದ ಸಂಶಯ ಇದ್ದು, ಪ್ರಕರಣದ ತನಿಖೆಗೆ ಪ್ರಧಾನಮಂತ್ರಿ, ಮಹಾರಾಷ್ಟ್ರ, ಕರ್ನಾಟಕ ಮುಖ್ಯಮಂತ್ರಿ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆಯುವುದಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣ ತನಿಖೆ ಆರಂಭಿಸಿ ಮೀನುಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತೇನೆ ಎಂದು ಪ್ರಮೋದ್ ಸ್ಪಷ್ಟಪಡಿಸಿದರು.

ಡಿಸೆಂಬರ್ 15ರಂದುಐಎನ್‌ಎಸ್‌ ಕೊಚ್ಚಿನ್‌ ಹಡಗಿಗೆ ಮಹಾರಾಷ್ಟ್ರ ಸಮುದ್ರ ವ್ಯಾಪ್ತಿಯಲ್ಲಿ ಅಪಘಾತವಾಗಿದೆ. ಅದೇ ದಿನಸುವರ್ಣ ತ್ರಿಭುಜ ಬೋಟ್‌ ಕೂಡ ಕಣ್ಮರೆಯಾಗಿದೆ. ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಎರಡು ಘಟನೆಗಳು ಸಂಭವಿಸಿರುವುದನ್ನು ನೋಡಿದರೆ ಅನುಮಾನಗಳು ಹುಟ್ಟಿಕೊಳ್ಳುತ್ತವೆ ಎಂದರು.

ನೌಕಾಪಡೆಯ ಹಡಗಿನ ತಳಭಾಗಕ್ಕೆ ಹಾನಿಯಾದಾಗ ಅಧಿಕಾರಿಗಳು ಮಹಾರಾಷ್ಟ್ರದ ಮೀನುಗಾರರನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದರು. ಆದರೆ, ಸುವರ್ಣ ತ್ರಿಭುಜ ಬೋಟ್‌ಗೆ ಹಡಗು ಡಿಕ್ಕಿಹೊಡೆದಿರಬಹುದು ಎಂಬ ಸಂಶಯ ಬರಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ನೌಕಾಪಡೆಯ ಹಡಗು ಡಿಕ್ಕಿಹೊಡೆದೇ ಸುವರ್ಣ ತ್ರಿಭುಜ ಬೋಟ್‌ ಮುಳುಗಿದೆ. ಈ ವಿಚಾರ ತಿಳಿದರೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ದುರಂತವನ್ನು ಮುಚ್ಚಿಟ್ಟು, ಚುನಾವಣೆ ಮುಗಿದ ಬಳಿಕ ಹುಡುಕಾಡುವ ನಾಟಕ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಹಿಂದೆ, ಬೋಟ್‌ ಅನ್ನು ಕಡಲ್ಗಳ್ಳರು ಅಪಹರಿಸಿರಬಹುದು. ಹೈಜಾಕ್‌ ಆಗಿರಬಹುದು ಎಂದು ಬಿಜೆಪಿ ಮುಖಂಡರು ಗಾಳಿ ಸುದ್ದಿ ಹಬ್ಬಿಸಿ ಮೀನುಗಾರರ ದಿಕ್ಕು ತಪ್ಪಿಸಿದರು. ಮೀನುಗಾರರ ಪ್ರಾಣದ ಜತೆ ಚೆಲ್ಲಾಟ ಆಡಿದರು ಎಂದು ಟೀಕಿಸಿದರು.

ನಾಲ್ಕೂವರೆ ತಿಂಗಳು ಪತ್ತೆಯಾಗದ ಬೋಟ್‌ ಅನ್ನು ಶಾಸಕ ರಘುಪತಿ ಭಟ್‌ ಹುಡುಕಿದ್ದು ಪವಾಡ ಎನಿಸುತ್ತಿದೆ. ನೇವಿ ಅಧಿಕಾರಿಗಳಿಂದ ಸಾದ್ಯವಾಗದ ಕೆಲಸವನ್ನು ಕ್ಷೇತ್ರದ ಶಾಸಕರು ಮಾಡಿದ್ದು ವಿಸ್ಮಯ ಎಂದು ಪ್ರಮೋದ್‌ ವ್ಯಂಗ್ಯವಾಡಿದರು‌.

ನೌಕಾಪಡೆಯ ಬಗ್ಗೆ ಅಪಾರ ಗೌರವ ಇದೆ. ಆದರೆ, ಮೀನುಗಾರರಿಗೆ ಅನ್ಯಾಯವಾದಾಗ ಧ್ವನಿ ಎತ್ತುವ ಅಧಿಕಾರ ಇದೆ. ಮೀನುಗಾರರ ಕುಟುಂಬಗಳಿಎ ಸೂಕ್ತ ನ್ಯಾಯ ಹಾಗೂ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪಕ್ಷದ ವಕ್ತಾರರಾದ ಭಾಸ್ಕರ್ ರಾವ್ ಕಿದಿಯೂರು, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT