ಬೈಂದೂರು (ಉಡುಪಿ): ತಾಲ್ಲೂಕಿನ ಪಡುವರಿ ಗ್ರಾಮದ ತಾರಾಪತಿಯಲ್ಲಿ ಶುಕ್ರವಾರ ನಾಡದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಶನಿವಾರ ಪತ್ತೆಯಾಗಿದೆ.
‘ಜೈ ಗುರೂಜಿ’ ದೋಣಿ ಮಾಲೀಕ ಚರಣ್‌ರಾಜ್ ಖಾರ್ವಿ (25)ಅವರಶವ ಅಮ್ಮನವರ ತೊಪ್ಲು ಬಳಿ ಹಾಗೂ ಅಣ್ಣಪ್ಪ ಖಾರ್ವಿ (40)ಅವರ ಶವ ಕರ್ಕಿಕಳಿ ಬಳಿ ಸಿಕ್ಕಿದೆ.
ಶುಕ್ರವಾರ ಮೀನುಗಾರಿಕೆ ಮುಗಿಸಿ ಅಳ್ವೆಕೋಡಿಗೆ ಬರುವಾಗ ಅಲೆಗಳ ಹೊಡೆತಕ್ಕೆ ಸಿಕ್ಕು ದೋಣಿ ಮಗುಚಿತ್ತು. ಅದರಲ್ಲಿದ್ದ 7 ಮೀನುಗಾರರ ಪೈಕಿ ಇಬ್ಬರು ನಾಪತ್ತೆಯಾಗಿದ್ದರು. ವಿಜೇತ್, ಪ್ರವೀಣ್, ಸಚಿನ್, ಸುಮಂತ್, ವಾಸುದೇವ ಖಾರ್ವಿ ಅವರನ್ನು ಕರಾವಳಿ ಕಾವಲು ಪಡೆಯ ಪೋಲಿಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದರು.
ಶಾಸಕರ ಭೇಟಿ: ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಸ್ಥಳಕ್ಕೆ ಭೇಟಿನೀಡಿ, ಮೃತ ಮೀನುಗಾರರ ಕುಟುಂಬಕ್ಕೆ ಸರ್ಕಾರದಿಂದ ₹ 6 ಲಕ್ಷ ಪರಿಹಾರದ ಜತೆಗೆ ವೈಯಕ್ತಿಕ ಪರಿಹಾರ ನೀಡುವುದಾಗಿ ತಿಳಿಸಿ, ಇಂತಹ ದುರ್ಘಟನೆಗಳು ಮರುಕಳಿಸದಿರಲು ಮೀನುಗಾರರಿಗೆ ಲೈಫ್ ಜಾಕೆಟ್ ಒದಗಿಸುವ ಭರವಸೆ ನೀಡಿದರು.
ಮತ್ತೊಂದೆಡೆ, ಗಂಗೊಳ್ಳಿಯಲ್ಲಿ ಶುಕ್ರವಾರ ಪಾತಿದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ದೋಣಿ ಮಗುಚಿ ನಾಪತ್ತೆಯಾಗಿದ್ದ ದೇವೇಂದ್ರ ಖಾರ್ವಿ (35) ಅವರ ಶವ ಶನಿವಾರ ಇಲ್ಲಿನ ಪಂಚಗಂಗಾವಳಿ ನದಿ ತೀರದ ಕಳವಿನ ಬಾಗಿಲು ಬಳಿ ದೊರೆತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.