ಬ್ರಹ್ಮಾವರ: ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯ ಕುಂದು ಕೊರತೆ, ಬೇಡಿಕೆಗಳ ಬಗ್ಗೆ ಸಾರ್ವಜನಿಕ ಸಭೆ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಇಲ್ಲಿನ ಮಿನಿ ವಿಧಾನಸೌಧದದಲ್ಲಿ ಮಂಗಳವಾರ ನಡೆಯಿತು.
ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯಿಂದ ಅನೇಕ ಅಪಘಾತ ಸಂಭವಿಸುತ್ತಿವೆ. ಹೆದ್ದಾರಿ ಕಾಮಗಾರಿಯಿಂದ ಬಾರ್ಕೂರು ಕ್ರಾಸ್‌ನಲ್ಲಿ ವಾಹನಗಳು, ಪಾದಾಚಾರಿಗಳಿಗೆ ನಿರಂತರ ಸಮಸ್ಯೆಗಳಾಗುತ್ತಿವೆ. ಎಸ್.ಎಂ.ಎಸ್, ಮಹೇಶ್ ಆಸ್ಪತ್ರೆ, ಕ್ಯಾಟಲ್ ಪಾಸ್ ಬಳಿ ಅನೇಕ ಸಾವು ನೋವುಗಳಾಗಿವೆ. ಸರ್ವಿಸ್ ರಸ್ತೆ ಬದಿಯಲ್ಲಿ ಚರಂಡಿ ಮೇಲೆ ಹಾಕಿರುವ ಸಿಮೆಂಟ್ ಸ್ಲ್ಯಾಬ್‌ಗಳು ಕುಸಿದು ಹೋಗಿದ್ದು, ಪಾದಾಚಾರಿಗಳು ನಡೆದಾಡಲು ತೊಂದರೆಯಾಗುತ್ತಿದೆ.
ಭದ್ರಗರಿಯಿಂದ ಉಪ್ಪಿನಕೋಟೆ ತನಕ ಸರ್ವಿಸ್ ರಸ್ತೆ ಇಲ್ಲದೆ ಇರುವುದರಿಂದ ಸ್ಥಳೀಯ ವಾಹಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಚೇರಿಗಳು ಬಸ್ಸು ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿರುವುದರಿಂದ ಹೆದ್ದಾರಿ ದಾಟಿ ಹೋಗಲು ಕಷ್ಟವಾಗುತ್ತಿದೆ. ಮಿನಿ ವಿಧಾನಸೌಧದ ಬಳಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಸರ್ವಿಸ್ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಶಾಸಕರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ಬೇಡಿಕೆ ಏನು: ಭದ್ರಗಿರಿಯಿಂದ ಉಪ್ಪಿನಕೋಟೆ ತನಕ ಸರ್ವಿಸ್ ರಸ್ತೆ ನಿರ್ಮಾಣ, ಈಗಿರುವ ಸರ್ವಿಸ್ ರಸ್ತೆಯ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ, ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಾಣ, ಬಾರ್ಕೂರು ಕ್ರಾಸ್‌ನ ಅವೈಜ್ಞಾನಿಕ ರಸ್ತೆ ಸರಿಪಡಿಸುವ ಬೇಡಿಕೆಗಳನ್ನು ಸ್ಥಳೀಯರು ಶಾಸಕರ ಮುಂದಿಟ್ಟರು.
ಬೇಡಿಕೆಗೆ ಸ್ಪಂದಿಸಿದ ಶಾಸಕ ಯಶ್‌ಪಾಲ್ ಸುವರ್ಣ, ತುರ್ತಾಗಿ ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ನಿರ್ಣಯ ತೆಗೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಟ್ಟಿಸುತ್ತೇನೆ. ಉಪ್ಪೂರಿನಿಂದ ಕೆ.ಜಿ.ರೋಡ್‌ವರೆಗೆ ದಾರಿದೀಪ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರವಿ ಕುಮಾರ್ ಪ್ರತಿಕ್ರಿಯೆ ನೀಡಿ, ಸರ್ಕಾರ ಮತ್ತು ಸ್ಥಳಿಯರ ಸಹಕಾರವಿದ್ದರೆ ಆಗಬೇಕಾಗಿರುವ ಕಾಮಗಾರಿಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ಪ್ರಮುಖರಾದ ಭುಜಂಗ ಶೆಟ್ಟಿ, ರಾಜೀವ ಕುಲಾಲ, ಬಿ.ಎನ್. ಶಂಕರ ಪೂಜಾರಿ, ರಾಜೇಶ ಶೆಟ್ಟಿ ಬಿರ್ತಿ, ಜ್ಞಾನ ವಸಂತ ಶೆಟ್ಟಿ, ಅಲ್ವಿನ್ ಅಂದ್ರಾದೆ, ವಾಹನ ಮಾಲಕರ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.
ಉಪ್ಪಿನಕೋಟೆಯಿಂದ ಬೈಕಾಡಿವರೆಗೆ ಸರ್ವಿಸ್ ರಸ್ತೆ ನಿರ್ಮಿಸಲು ಒತ್ತಾಯ ಕರಾವಳಿ ಬೈಪಾಸ್ ರಸ್ತೆ ರೀತಿ ಬ್ರಹ್ಮಾವರದಲ್ಲಿ ರಚಿಸಲು ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.