ಚಿಕನ್‌ಗಿಲ್ಲ ಬೇಡಿಕೆ; ಮಟನ್ ದರ ಏರಿಕೆ

ಉಡುಪಿ: ಕೋವಿಡ್ ಕರಿ ನೆರಳು ಹಾಗೂ ಹಕ್ಕಿಜ್ವರದ ಭೀತಿ ಜಿಲ್ಲೆಯ ಕುಕ್ಕುಟೋದ್ಯಮಕ್ಕೆ ಬಲವಾದ ಪೆಟ್ಟು ಕೊಟ್ಟಿದೆ. ಕೆಲ ತಿಂಗಳ ಹಿಂದೆ (ರೆಡಿ) ಕೆ.ಜಿ.ಗೆ ₹ 200ರ ಗಡಿ ತಲುಪಿದ್ದ ಕೋಳಿ ಮಾಂಸದ ದರ ಈಗ ₹ 100ರ ಆಸುಪಾಸಿಗೆ ಇಳಿದಿದೆ. ದರ ಕಡಿಮೆ ಇದ್ದರೂ ಗ್ರಾಹಕರು ಚಿಕನ್ ಖರೀದಿಯತ್ತ ಮುಖ ಮಾಡುತ್ತಿಲ್ಲ.
ಶೇ 50ರಷ್ಟು ಕುಸಿದ ಮಾರಾಟ
ರಾಜ್ಯದಲ್ಲಿ ಕೋವಿಡ್–19 ಸೋಂಕು ಪತ್ತೆ ಹಾಗೂ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಕೋಳಿ ಮಾಂಸ ಮಾರಾಟ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹಿಂದಿಗಿಂತ ಶೇ 50ರಷ್ಟು ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಆದಿ ಉಡುಪಿಯ ಚಿಕನ್ ಸ್ಟಾಲ್ ಮಾಲೀಕರು.
ಕೋವಿಡ್ –19ಗೂ ಕೋಳಿ ಮಾಂಸ ಸೇವನೆಗೂ ಸಂಬಂಧವಿಲ್ಲ ಎಂದು ಸರ್ಕಾರ, ಮಾಧ್ಯಮಗಳು ಸ್ಪಷ್ಟನೆ ನೀಡಿದ್ದರೂ, ಜನರಲ್ಲಿ ಭಯ ದೂರವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಪರಿಣಾಮ ಉದ್ಯಮಕ್ಕೆ ಹೊಡೆತ ಬಿದ್ದು ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಅವರು.
ಮಾಂಸಕ್ಕೆ ಬೇಡಿಕೆ
ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಕುರಿ ಮಾಂಸ ಸೇವನೆ ಕಡಿಮೆ. ಬದಲಾಗಿ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆ. ಕೋವಿಡ್ ಹಾಗೂ ಹಕ್ಕಿಜ್ವರದ ಎಫೆಕ್ಟ್ ಕುರಿ ಹಾಗೂ ಆಡಿನ ಮಾಂಸಕ್ಕೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.
ತಿಂಗಳ ಹಿಂದೆ ಕುರಿ ಮಾಂಸ ಕೆ.ಜಿಗೆ ₹ 450 ಇತ್ತು. ಸದ್ಯ ₹ 550ಕ್ಕೆ ಏರಿಕೆಯಾಗಿದೆ. ₹ 500 ಇದ್ದ ಬನ್ನೂರು ಕುರಿಯ ಮಾಂಸ ₹ 650ಕ್ಕೆ ಹೆಚ್ಚಾಗಿದೆ. ಹಿಂದಿಗಿಂತ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಮಟಲ್ ಸ್ಟಾಲ್ ಮಾಲೀಕರು.
ರೆಸ್ಟೋರೆಂಟ್‌ಗಳಿಗೆ ಪ್ರತಿನಿತ್ಯ ಸರಬರಾಜಾಗುತ್ತಿದ್ದ ಕೋಳಿ ಮಾಂಸದ ಪ್ರಮಾಣ ಕುಸಿದಿದ್ದು, ಪ್ರತಿಯಾಗಿ ಕುರಿ ಮಾಂಸದ ಪ್ರಮಾಣ ಏರಿಕೆಯಾಗಿದೆ. ಮಟನ್ ಬೇಡಿಕೆ ಪೂರೈಸಲು ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಂದ ದುಬಾರಿ ಬೆಲೆಗೆ ಕುರಿಗಳನ್ನು ತರಲಾಗುತ್ತಿದೆ ಎಂದರು.
ಮಟನ್ ಖಾದ್ಯಗಳಿಗೆ ಬೇಡಿಕೆ
ನಗರದ ಪ್ರಮುಖ ರೆಸ್ಟೋರೆಂಟ್‌ಗಳಲ್ಲೂ ಚಿಕನ್ ಖಾದ್ಯಗಳನ್ನು ಹೆಚ್ಚು ಕೇಳುವವರಿಲ್ಲ. ಚಿಕನ್ ಪ್ರಿಯರು ಮಟನ್‌ನತ್ತ ವಾಲುತ್ತಿದ್ದಾರೆ. ಇನ್ನೂ ಕೆಲವರು ನಾನ್‌ವೆಜ್ ಸಹವಾಸ ಬೇಡ ಎಂದು ಸಸ್ಯಹಾರಿ ಖಾದ್ಯಗಳತ್ತ ಚಿತ್ತ ಹರಿಸಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದರು.
ಚಿಕನ್ ಬಿರಿಯಾನಿ, ಗ್ರಿಲ್, ತಂದೂರಿ, ಚಿಲ್ಲಿ ಚಿಕನ್, ಬಟರ್ ಚಿಕನ್‌ಗೆ ಬೇಡಿಕೆ ಹೆಚ್ಚಿತ್ತು. ಈಗ ಕಡಿಮೆಯಾಗಿದೆ. ಕೋವಿಡ್ ಭೀತಿಯಿಂದ ರೆಸ್ಟೋರೆಂಟ್‌ಗೆ ಬರುವ ಗ್ರಾಹಕರ ಸಂಖ್ಯೆಯೂ ಇಳಿಮುಖವಾಗಿದೆ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.