ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ‘ಕೋವಿಡ್ ಸೋಂಕಿನ ಭಯವಿಲ್ಲ; ಎಚ್ಚರಿಕೆಯೇ ಅಸ್ತ್ರ’

ಜಿಲ್ಲಾ ಆಸ್ಪತ್ರೆಯ ಐಸೊಲೇಷನ್‌ ವಾರ್ಡ್‌ನಲ್ಲಿ ಕೆಲಸ ಮಾಡುವ ಶುಶ್ರೂಷಕಿ ಶೈಲಾ
Last Updated 30 ಜೂನ್ 2020, 18:30 IST
ಅಕ್ಷರ ಗಾತ್ರ

ಉಡುಪಿ: ‘ಐಸೊಲೇಷನ್‌ ವಾರ್ಡ್‌ನಲ್ಲಿ ಪಿಪಿಇ ಕಿಟ್‌ ಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಉಸಿರುಗಟ್ಟಿದ ಅನುಭವವಾಗಿದ್ದುಂಟು. ಒಮ್ಮೆ ಧರಿಸಿದ ಕಿಟ್‌ ಬಿಚ್ಚಿದರೆ, ಮರು ಬಳಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹಲವು ಬಾರಿ ಉಸಿರು ಬಿಗಿಹಿಡಿದು ಚಿಕಿತ್ಸೆ ನೀಡಿದ್ದೇನೆ. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲ; ರೋಗಿಗಳ ಆರೈಕೆ ಶೂಶ್ರೂಷಕರ ಕರ್ತವ್ಯವಲ್ಲವೇ ಎಂದು ವೃತ್ತಿ ಸಾರ್ಥಕತೆಯ ಮಂದಹಾಸ ಬೀರಿದರು ಶೈಲಾ ಆರ್.ದೇವಾಡಿಗ.

ಶೈಲಾ ಅವರಿಗೆ 23 ವರ್ಷಗಳ ಸುಧೀರ್ಘ ವೃತ್ತಿ ಅನುಭವವಿದೆ. ಜಿಲ್ಲಾ ಆಸ್ಪತ್ರೆಯಲ್ಲಿ20 ವರ್ಷಗಳಿಂದ ನರ್ಸ್‌ ಆಗಿದ್ದಾರೆ. ಸದ್ಯ ಶಂಕಿತ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಐಸೊಲೇಷನ್‌ ವಾರ್ಡ್‌ನಲ್ಲಿ ರೋಗಿಗಳ ಆರೈಕೆ ಮಾಡುವ ಮುಖ್ಯ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ ಕೋವಿಡ್‌ ವಾರಿಯರ್‌ ಶೈಲಾ.

ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುವ ಕಡೆಯಲ್ಲಿ ಸ್ವಲ್ಪವೂ ದೃತಿಗೆಡದೆ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಶೈಲಾ ಅವರು ‘ಪ್ರಜಾವಾಣಿ’ ಜತೆ ಅನುಭವ ಹಂಚಿಕೊಂಡರು.

‘ಏಡ್ಸ್‌, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಕೋವಿಡ್‌ ಒಂದು ಸಾಂಕ್ರಮಿಕ ಸೋಂಕು ಅಷ್ಟೆ. ಸ್ವಲ್ಪ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಷ್ಟೆ. ರೋಗಿಗಳ ಆರೈಕೆ ಮಾಡುವ ಶುಶ್ರೂಷಕಿಯರೇ ಕೊರೊನಾಗೆ ಹೆದರಿ ಹಿಂದೆ ಸರಿಯುವುದು ಸರಿಯಲ್ಲ. ರೋಗದ ವಿರುದ್ಧ ಹೋರಾಡುವುದು ಕೋವಿಡ್‌ ವಾರಿಯರ್ಸ್‌ಗಳ ಕರ್ತವ್ಯವಲ್ಲವೇ’ ಎಂದರು ಶೈಲಜಾ.

ಕೋವಿಡ್‌ ಸೋಂಕು ತಗುಲಿದವರಿಗೆ ಚಿಕಿತ್ಸೆಗಿಂತ ಆತ್ಮಸ್ಥೈರ್ಯ ತುಂಬುವುದು ಬಹಳ ಮುಖ್ಯ. ನನ್ನ ಸುಧೀರ್ಘ ವೃತ್ತಿ ಜೀವನ ಕಲಿಸಿದ ಪಾಠ ಅದು. ಎಂಥಹ ಮಾರಣಾಂತಿಕ ರೋಗವಿದ್ದರೂ, ರೋಗಿಯ ಮಾನಸಿಕ ಬಲ ಕುಗ್ಗದಂತೆ ನೋಡಿಕೊಂಡರೆ ಅರ್ಧ ಕಾಯಿಲೆ ವಾಸಿಯಾದಂತೆ’ ಎಂದು ತಮ್ಮ ಅನುಭವವನ್ನು ತೆರೆದಿಟ್ಟರು ಅವರು.

ಶಂಕಿತ ಕೊರೊನಾ ಸೋಂಕಿತರು ಆಸ್ಪತ್ರೆಗೆ ಬಂದಾಗ ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡಲು ಸಜ್ಜಾಗುತ್ತೇನೆ. ದೀರ್ಘಕಾಲ ಪಿಪಿಇ ಕಿಟ್‌ ಧರಿಸಿದಾಗ ಆಮ್ಲಜನಕ ಪೂರೈಕೆ ಕಡಿಮೆಯಾಗಿ ಉಸಿರಾಡಲು ಕಷ್ಟವಾಗುತ್ತದೆ. ಮೈಯೆಲ್ಲ ಬೆವರಿ ಕಿರಿಕಿರಿಯಾಗುತ್ತದೆ. ರೋಗಿಗಳು ಸಾವು ಬದುಕಿನ ಮಧ್ಯೆ ಹೋರಾಡುವಾಗ ಇಂತಹ ಸಮಸ್ಯೆಗಳನ್ನು ಸಹಿಸಿಕೊಳ್ಳುವುದು ಕಷ್ಟವಲ್ಲ ಎಂದರು ಶೈಲಾ.

ರೋಗಿಗಳಿಗೆ ಚಿಕಿತ್ಸೆಯ ಜತೆಗೆ, ಆತ್ಮೀಯವಾಗಿ ಬೆರೆತು ಕಷ್ಟ, ಸುಖಗಳನ್ನು ವಿಚಾರಿಸುತ್ತೇನೆ. ಸೋಂಕಿಗೆ ಭಯಪಡದಂತೆ ಧೈರ್ಯ ತುಂಬುತ್ತೇನೆ. ಮಕ್ಕಳು ಹಠ ಹಿಡಿದಾಗ ಸಂತೈಸುತ್ತೇನೆ. ಇದೇ ಕಾರಣಕ್ಕೆ ರೋಗಿಗಳು ಗುಣಮುಖರಾಗಿ ಮನೆಗೆ ಹೋದರೂ ಹೊರಗೆ ಸಿಕ್ಕಾಗ ಆತ್ಮೀಯವಾಗಿ ಮಾತನಾಡುತ್ತಾರೆ ಎಂದರು.

ಕರ್ತವ್ಯ ಮುಗಿದ ಕೂಡಲೇ ಆಸ್ಪತ್ರೆಯಲ್ಲಿಯೇ ಬಿಸಿನೀರಿನ ಸ್ನಾನ ಮುಗಿಸಿ ಮನೆಗೆ ಹೋಗುತ್ತೇನೆ. ಅಲ್ಲಿ ಮತ್ತೊಮ್ಮೆ ಸ್ನಾನ ಮಾಡುತ್ತೇನೆ. ಸೋಂಕಿನ ಬಗ್ಗೆ ಭಯವಿಲ್ಲ. ಆದರೆ, ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಬೇಕು ಎನಿಸುವಾಗ ಮನಸ್ಸಿನೊಳಗೆ ಅಳಕು ಕಾಡುತ್ತದೆ ಎಂದು ಕಣ್ಣಂಚಿನಲ್ಲಿದ್ದ ನೀರು ಒರೆಸಿಕೊಂಡರು ಶೈಲಜಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT