ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳ ಶೇ 50 ಬೆಡ್ ಕೋವಿಡ್‌ಗೆ ಮೀಸಲು

ಜಿಲ್ಲಾಧಿಕಾರಿ ಜಿ.ಜಗದೀಶ್
Last Updated 19 ಏಪ್ರಿಲ್ 2021, 12:51 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆನೀಡಲು ಶೇ 50ರಷ್ಟು ಬೆಡ್‌ಗಳನ್ನು ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಪಿಎಂಇ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಲಭ್ಯವಿರುವ ಬೆಡ್‌ಗಳ ಸಂಖ್ಯೆಯ ಸಂಪೂರ್ಣ ವಿವರವನ್ನು ಆರೋಗ್ಯ ಇಲಾಖೆಗೆ ನೀಡಬೇಕು. ಐಸಿಯು, ಆಮ್ಲಜನಕ ವ್ಯವಸ್ಥೆ ಆಧಾರಿತ ಬೆಡ್‌ಗಳು, ಐಎಫ್ಎನ್ ಬೆಡ್‌ಗಳು ಸೇರಿದಂತೆ ಎಲ್ಲ ರೀತಿಯ ಬೆಡ್‌ಗಳಲ್ಲಿ ಶೇ 50 ಬೆಡ್‌ಗಳನ್ನು ಜಿಲ್ಲಾಡಳಿತದಿಂದ ಶಿಫಾರಸು ಪಡೆದು ದಾಖಲಾಗುವ ಸೋಂಕಿತರ ಚಿಕಿತ್ಸೆಗೆ ಬಲಸಬೇಕು ಎಂದು ನಿರ್ದೇಶನ ನೀಡಿದರು.

ಆಸ್ಪತ್ರೆಗಳಲ್ಲಿ ವೈದ್ಯಕೀಯ ಯಂತ್ರಗಳು, ಉಪಕರಣಗಳು ಸರಿ ಇಲ್ಲ ಎಂದು ಸಬೂಬು ಹೇಳುವಂತಿಲ್ಲ. ಎಲ್ಲ ಯಂತ್ರಗಳು ಹಾಗೂ ಉಪಕರಣಗಳು ಸುಸ್ಥಿತಿಯಲ್ಲಿರುವಂತೆ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ಬೆಡ್ ನಿರ್ವಹಣಾ ವ್ಯವಸ್ಥೆಯಡಿ ಆಸ್ಪತ್ರೆಗಳು ಲಭ್ಯವಿರುವ ಬೆಡ್‌ಗಳ ಸಂಖ್ಯೆ ಮತ್ತು ದಾಖಲಾಗಿರುವ ರೋಗಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ಇಲಾಖೆಗೆ ಸಲ್ಲಿಸಬೇಕು. ಯಾವುದೇ ರೋಗಿಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಅಥವಾ ಹೊಸ ರೋಗಿಗಳು ದಾಖಲಾದರೆ ಸಾಫ್ಟ್‌ವೇರ್‌ನಲ್ಲಿ ದಾಖಲು ಮಾಡಬೇಕು ಎಂದರು.

ಖಾಸಗಿ ಆಸ್ಪತ್ರೆಗಳಿಗೆ ಬರುವ ಐಎಲ್ಐ ಹಾಗೂ ಸಾರಿ ಪ್ರಕರಣದ ರೋಗಿಗಳ ಸ್ವಾಬ್ ಸಂಗ್ರಹಿಸಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಸ್ವಾಬ್‌ ಸಂಗ್ರಹಿಸುವಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ. ವರದಿ ನೀಡದ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸುವುದರ ಜತೆಗೆ ಸಂಬಂಧಪಟ್ಟ ಆಸ್ಪತ್ರೆಗಳ ಅಧಿಕಾರಿಗಳ ವಿರುದ್ಧ ಎಪಿಡಮಿಕ್ ಕಾಯ್ದೆಯನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೈದ್ಯಕೀಯ ತರಗತಿ ಹೊರತುಪಡಿಸಿ ಉಳಿದ ಎಲ್ಲ ತರಗತಿಗಳನ್ನು ನಿರ್ಬಂಧಿಸಲಾಗಿದೆ. ಆಸ್ಪತ್ರೆಗಳು ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ತರಗತಿ ನಡೆಸುವಂತಿಲ್ಲ. ಅಗತ್ಯವಿದ್ದಲ್ಲಿ ಆನ್‌ಲೈನ್‌ ಮೂಲಕ ತರಗತಿ ನಡೆಸಬಹುದು. ನರ್ಸಿಂಗ್ ವಿದ್ಯಾರ್ಥಿಗಳು ಕೇರಳಕ್ಕೆ ಹೋಗಿ ಬರುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಕೋವಿಡ್‌ನಿಂದ ರೋಗಿಗಳು ಮೃತಪಡದಂತೆ ವೈದ್ಯರು ಶ್ರಮ ಮೀರಿ ಕಾರ್ಯನಿರ್ವಹಿಸಬೇಕು. ಕೋವಿಡ್‌ ಸಾವುಗಳನ್ನು ತಪ್ಪಿಸುವುದು ಜಿಲ್ಲಾಡಳಿತದ ಆದ್ಯತೆಯಾಗಿದ್ದು, ಸಹಕಾರ ನೀಡಬೇಕು. ಜತೆಗೆ ಮೃತದೇಹಗಳ ವಿಲೇವಾರಿಯಲ್ಲಿ ಗೊಂದಲಗಳಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

‘ರೆಮಿಡಿಸಿವರ್ ಬಳಕೆ ಬಗ್ಗೆ ಜಾಗ್ರತೆ ಇರಲಿ’

ಜಿಲ್ಲೆಯಲ್ಲಿ ರೆಮಿಡಿಸಿವರ್ ಹಾಗೂ ಆಮ್ಲಜನಕ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ರೋಗಿಗಳಿಗೆ ಅಗತ್ಯ ಪ್ರಮಾಣದಲ್ಲಿ ಮಾತ್ರ ರೆಮಿಡಿಸಿವರ್ ಹಾಗೂ ಆಮ್ಲಜನಕ ನೀಡಬೇಕು. ಅನಗತ್ಯವಾಗಿ ಪೋಲಾಗದಂತೆ ತಡೆಯಬೇಕು. ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡುವ ಕುರಿತು ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ ತರಬೇತಿ ಆಯೋಜಿಸಬೇಕು. ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ಒಳಗಾಗದಂತೆ ಪಾಲಿಸಬೇಕಾದ ಕ್ರಮಗಳ ಕುರಿತು ತರಬೇತಿ ನೀಡಬೇಕು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್ಒ ಡಾ.ಸುದೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ ಭಟ್, ಅಧಿಕಾರಿಗಳು ಹಾಗೂ ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT