ಗುರುವಾರ , ಜನವರಿ 23, 2020
19 °C
ಮಾದಕ ವಸ್ತುಗಳ ಸೇವನೆ ಕುರಿತು ಕಾಲೇಜುಗಳಲ್ಲಿ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಆನ್‌ಲೈನ್‌ನಲ್ಲಿ ಮಾದಕ ವಸ್ತು ಪೂರೈಕೆ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಬಲಿಯಾಗುತ್ತಿದ್ದು, ಇದಕ್ಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಮಾದಕ ವಸ್ತು ಸೇವನೆ ನಿಷೇಧ ಕಾಯ್ದೆ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಇದುವರೆಗೆ 240ಕ್ಕೂ ಹೆಚ್ಚು ಆರೋಪಿಗಳನ್ನು ಮಾದಕ ವಸ್ತು ಪೂರೈಕೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾಕದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಡಿವೈಎಸ್‌ಪಿ ಜೈ ಶಂಕರ್ ಸಭೆಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಹಾಗೂ ಬೇರೆ ದಾರಿಗಳಲ್ಲಿ ಮಾದಕ ವಸ್ತುಗಳು ಸರಬರಾಜು ನಡೆಯುತ್ತಿರುವ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಗಾಂಜಾ ಸೇವನೆ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಕಳವಳ ವ್ಯಕ್ತಪಡಿಸಿದರು.

ಪ್ರಥಮ ದರ್ಜೆ ಕಾಲೇಜುಗಳು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಬೇಕು. ವರ್ಷವಿಡೀ ಕಾರ್ಯಕ್ರಮಗಳು ನಡೆಯಬೇಕು. ವಿದ್ಯಾರ್ಥಿಗಳು ವ್ಯಸನಕ್ಕೆ ಬಲಿಯಾಗದಂತೆ ಆಯಾ ಕಾಲೇಜಿನ ಮುಖ್ಯಸ್ಥರು ಜಾಗರೂಕತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾನಸಿಕ ತಜ್ಞರ ಮೂಲಕ ಅರಿವು ಮೂಡಿಸುವ ಅಗತ್ಯವಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಲಭ್ಯವಿರುವ ಮಾನಸಿಕ ವೈದ್ಯರ ಪಟ್ಟಿ ನೀಡುವುದಾಗಿ ಡಾ.ಪಿ.ವಿಭಂಡಾರಿ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ಕಾನೂನು ನೆರವು ನೀಡುವುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಾವೇರಿ ಹೇಳಿದರು.

ಆನ್‍ಲೈನ್ ಮೂಲಕ ಮಾದಕ ವಸ್ತು ಸರಬರಾಜಾಗುತ್ತಿರುವ ಕುರಿತು ತನಿಖೆ ನಡೆಸಬೇಕು. ಮಾದಕ ವಸ್ತುಗಳ ಸೇವನೆ ತಡೆಗೆ ಎಲ್ಲ  ಇಲಾಖೆಗಳು ಸಮನ್ವಯದಿಂದ ಕೆಲಸ ನಿರ್ವಹಿಸಿ ಎಂದು ಡಿಸಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಾ ಬಾಯಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಡಿಡಿಪಿಐ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು