ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಖರೀದಿಸಿ ರೈತ ಮಹಿಳೆ ಕಣ್ಣೀರು ಒರೆಸಿದ್ದು ರೈತ!

172 ಚೀಲ ಈರುಳ್ಳಿ ಖರೀದಿ ಮಾರಾಟ ಮಾಡಿದ ಸುರೇಶ್ ನಾಯಕ್‌; ಬ್ರಹ್ಮಾವರದ ಕೆವಿಕೆ ನೆರವು
Last Updated 2 ಮೇ 2020, 2:03 IST
ಅಕ್ಷರ ಗಾತ್ರ
ADVERTISEMENT
"ಸುರೇಶ್‌ ನಾಯಕ್‌, ಪ್ರಗತಿಪರ ರೈತ"

ಉಡುಪಿ: ಈರುಳ್ಳಿಗೆ ಬೆಲೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ರೈತ ಮಹಿಳೆಯ ಕಣ್ಣೀರು ಒರೆಸಿದ್ದು ವ್ಯಾಪಾರಿಯಲ್ಲ; ಸ್ವತಃ ಕಲ್ಲಂಗಡಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಜಿಲ್ಲೆಯ ಹಿರಿಯಡಕದ ಬೊಮ್ಮರಬೆಟ್ಟುವಿನ ರೈತ ಸುರೇಶ್‌ ನಾಯಕ್‌.

ಸುರೇಶ್‌ 13 ಎಕರೆಯಲ್ಲಿ ಕಲ್ಲಂಗಡಿ ಬೆಳೆದು ಲಾಕ್‌ಡೌನ್ ಅವಧಿಯಲ್ಲಿ ಮಾರಾಟ ವ್ಯವಸ್ಥೆ ಇಲಲದೆ ಸಮಸ್ಯೆಯಲ್ಲಿ ಸಿಲುಕಿದ್ದರು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಸಲಹೆಯಂತೆ ಸಾಮಾಜಿಕ ಜಾಲತಾಣವನ್ನೇ ಮಾರುಕಟ್ಟೆಯಾಗಿ ಬಳಸಿಕೊಂಡು ಕಲ್ಲಂಗಡಿ ಮಾರಾಟ ಮಾಡಿದ್ದರು. ಈಗ ಚಿತ್ರದುರ್ಗದ ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಜತೆಗೆ, ಆಕೆಯಂತೆ ಸಂಕಷ್ಟಕ್ಕೆ ಸಿಲುಕಿರುವ ಹಲವು ಜಿಲ್ಲೆಗಳ ರೈತರಿಗೂ ನೆರವಿನ ಹಸ್ತ ಚಾಚಿದ್ದಾರೆ.

ರೈತ ಮಹಿಳೆಗೆ ನೆರವಾಗಿದ್ದು ಹೇಗೆ

ರೈತ ಮಹಿಳೆ ವಸಂತ ಕುಮಾರಿ ಈರುಳ್ಳಿಗೆ ಬೆಲೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್‌’ ಆಗಿತ್ತು. ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಮಧ್ಯ ಪ್ರವೇಶಿಸಿ ಈರುಳ್ಳಿ ಖರೀದಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅದರಂತೆ ಚಿತ್ರದುರ್ಗದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದರು. ಕೆವಿಕೆ ಮುಖ್ಯಸ್ಥ ಡಾ.ಚೈತನ್ಯ ಅವರು ತಕ್ಷಣ ಪ್ರಗತಿಪರ ರೈತ ಸುರೇಶ್ ನಾಯಕ್ ಅವರನ್ನು ಸಂಪರ್ಕಿಸಿ ಈರುಳ್ಳಿ ಖರೀದಿಸುವಂತೆ ಕೋರಿದ್ದರು.

ಅದರಂತೆ, ಸುರೇಶ್‌ ರೈತ ಮಹಿಳೆ ಬೆಳೆದಿದ್ದ 172 ಚೀಲ (ಪ್ರತಿ ಚೀಲ 60 ಕೆ.ಜಿ) ಈರುಳ್ಳಿಯನ್ನು ಚೀಲಕ್ಕೆ ₹ 550 ರಂತೆ ಖರೀದಿಸಿದರು. ಅಷ್ಟೆ ಅಲ್ಲ, ಖರೀದಿಸಿದ ಬಹುತೇಕ ಈರುಳ್ಳಿಯನ್ನು ಮಾರಾಟ ಮಾಡುವಲ್ಲಿಯೂ ಯಶಸ್ವಿ ಆಗಿದ್ದಾರೆ.

ಮಾರಾಟ ಹೇಗೆ

172 ಚೀಲ ಈರುಳ್ಳಿಯನ್ನು ತರಿಸಿಕೊಂಡ ಸುರೇಶ್‌, ದಾನಿಗಳು ಹಾಗೂ ಸ್ನೇಹಿತರನ್ನು ಸಂಪರ್ಕಿಸಿ ಖರೀದಿಸುವಂತೆ ಮನವೊಲಿಸಿದರು. ಅವರ ಪ್ರಯತ್ನ ಫಲ ಕೊಟ್ಟಿತು. ಮಹಾಲಸ ಗೇರುಬೀಜ ಕಾರ್ಖಾನೆ ಮಾಲೀಕರಾದ ರೋಹಿದಾಸ್‌ ಪೈ 25 ಚೀಲ ಖರೀದಿಸಿದರೆ, ಹೆಬ್ರಿಯ ಬೆಳ್ವೆಯ ಗಣೇಶ್ ಕಿಣಿ ಅವರು 100 ಚೀಲ ಖರೀದಿಸಿ ಕಾರ್ಮಿಕರಿಗೆ ಉಚಿತವಾಗಿ ಹಂಚಿದರು.

‘ಸ್ನೇಹಿತರು, ಪರಿಚಯಸ್ಥರು ಒಂದೆರಡು ಕ್ವಿಂಟಲ್‌ನಂತೆ ಚಿಲ್ಲರೆಯಾಗಿ ಖರೀದಿಸಿದರು. ಈಗ ಸ್ವಲ್ಪ ಉಳಿದಿದ್ದು, ಒಂದೆರಡು ದಿನಗಳಲ್ಲಿ ಖಾಲಿಯಾಗುತ್ತದೆ. ₹ 550 ಖರೀದಿ ಬೆಲೆ, ₹ 97 (ಪ್ರತಿ ಚೀಲಕ್ಕೆ) ಸಾರಿಗೆ ವೆಚ್ಚ ಆಗಿದ್ದು, ಲಾಭ ಪಡೆಯದೆ ₹ 650ಕ್ಕೆ ಮಾರಾಟ ಮಾಡಿದ್ದೇನೆ’ ಎಂದು ಸುರೇಶ್‌ ನಾಯಕ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT