ಗುರುವಾರ , ಮೇ 6, 2021
22 °C
ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದಲ್ಲಿ ಕಾರ್ಯಕ್ರಮ: ಸೃಷ್ಟಿಯಾಗಲಿದೆ ಪುಷ್ಪ ಲೋಕ

ಶನಿವಾರದಿಂದ ಫಲಪುಷ್ಪ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಫೆ.29ರಿಂದ ಮಾರ್ಚ್‌ 2ರವರೆಗೆ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದಲ್ಲಿರುವ ರೈತ ಸೇವಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್ ಹೇಳಿದರು.

ಗುರುವಾರ ತೋಟಗಾರಿಕಾ ಇಲಾಖೆಯಲ್ಲಿ ಫಲಪುಷ್ಪ ಪ್ರದರ್ಶನದ ಪೂರ್ವಭಾವಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘29ರಂದು ಸಂಜೆ 4.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಫಲಪುಷ್ಪ ಪ್ರದರ್ಶನದ ವಿಶೇಷ: ಸೀ ಹಾರ್ಸ್, ಮೆಕೆರಲ್ ಇಂಡಿಯನ್ ಫಿಶ್, ಭೂತಾಯಿ, ಆಕ್ಟೋಪಸ್, ಶೆಲ್ ಫಿಶ್, ಸ್ಟಾರ್ ಫಿಶ್‌ ಮಾದರಿಗಳನ್ನು ಹೂಗಳಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಗುಲಾಬಿ, ಸೇವಂತಿಗೆ, ಚೆಂಡು ಹೂ, ಗ್ಲಾಡಿಯೋಲಸ್, ಕಾರ್ನೇಶನ್ ಪುಷ್ಪಗಳನ್ನು ಅಲಂಕಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರು.

24 ಅಡಿ ಉದ್ದದ ಹಡಗಿನ ಕಲಾಕೃತಿ ಪ್ರದರ್ಶನದ ವಿಶೇಷ. 30,000 ಹೂಗಳನ್ನು ಬಳಸಿಕೊಂಡು ಆಕರ್ಷಕ ಮಾದರಿಗಳನ್ನು ರಚಿಸಲಾಗುತ್ತಿದೆ. ತರಕಾರಿಯಲ್ಲಿ ದಾರ್ಶನಿಕರ ಹಾಗೂ ಪ್ರಾಣಿಗಳ ಮಾದರಿ ಕೆತ್ತನೆ ಸಹ ಕಣ್ತುಂಬಿಕೊಳ್ಳಬಹುದು ಎಂದು ತಿಳಿಸಿದರು.

ಹೂ ಕುಂಡಗಳಲ್ಲಿ ಹಾಗೂ ಪಾಲಿಬ್ಯಾಗ್‍ಗಳಲ್ಲಿ ಇಡಬಹುದಾದ ಅಲಂಕಾರಿಕ ಪುಷ್ಪಗಳಾದ ಪೆಟೋನಿಯ, ಸ್ಯಾಲ್ವಿಯಾ, ಸೆಲೋಶಿಯಾ, ಕಾಕ್ಸ್ ಕೂಂಬ್, ಗಾಝೀನಿಯಾ, ಡಯಾಂತಸ್, ಥೊರೇನಿಯಾ, ಗುಲಾಬಿ, ದಾಸವಾಳ, ಸೇವಂತಿಗೆ, ಚೆಂಡು ಹೂ, ಕಳಂಚಿಯಾ ಪುಷ್ಪ ಗಿಡಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ ಎಂದರು.

ಏಷ್ಯಾಟಿಕ್ ಲಿಲ್ಲಿ ಮತ್ತು ಆಲ್‍ಸ್ಟ್ರೋಮೇರಿಯಾ ಲಿಲ್ಲಿ ಹೂಗಳು ಪ್ರಮುಖ ಆಕರ್ಷಣೆಯಾಗಿರಲಿದ್ದು, 8 ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಮಳಿಗೆಗಳು ಇರಲಿವೆ. ಇಲ್ಲಿ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಸಿಗಲಿದೆ ಎಂದು ಸಿಇಒ ಹೇಳಿದರು.

ರೈತ ಸೇವಾ ಕೇಂದ್ರದ ಹಿಂಭಾಗದಲ್ಲಿ ಸಾವಯವ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ, ನರ್ಸರಿಗಳಲ್ಲಿ ಕಸಿ ಸಸಿಗಳ ಮಾರಾಟ, ಜೇನು ಕೃಷಿ ಮಾಹಿತಿ ಹಾಗೂ ಮಾರಾಟ, ತೋಟಗಾರಿಕೆ, ಕೃಷಿ ಯಂತ್ರೋಪಕರಣ ಮಾರಾಟಕ್ಕಾಗಿ 32 ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ವಿವರ ನೀಡಿದರು.

ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ಸಸ್ಯಾಗಾರಗಳಲ್ಲಿ ಬೆಳೆಸಿರುವ ಸಸಿಗಳ ಮಾರಾಟ ಇರಲಿದೆ. ಮಾದರಿ ಮಲ್ಲಿಗೆ ತೋಟ, ತರಕಾರಿ ತೋಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಇಒ ತಿಳಿಸಿದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿದರು, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿದೀಶ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು