ಉಡುಪಿ: ದಶಕದಲ್ಲಿ 27,500 ಎಕರೆ ಭತ್ತ ಕ್ಷೇತ್ರ ಕಣ್ಮರೆ

ಉಡುಪಿ: ಕರಾವಳಿಯಲ್ಲಿ ಭತ್ತದ ಕೃಷಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ಭವಿಷ್ಯದಲ್ಲಿ ಭತ್ತದ ಕೃಷಿಯೇ ಕಣ್ಮರೆಯಾಗುವ ಆತಂಕ ಕಾಡುತ್ತಿದೆ. ಕೃಷಿ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ 11,000 ಹೆಕ್ಟೇರ್ ಭತ್ತದ ಕ್ಷೇತ್ರ ಕಡಿಮೆಯಾಗಿದೆ. ಅಂದರೆ, ಬರೋಬ್ಬರಿ 27,500 ಎಕರೆ ಭತ್ತದ ಕೃಷಿ ಭೂಮಿ ಅನ್ಯ ಉದ್ದೇಶಗಳಿಗೆ ಬಳಕೆಯಾಗಿದೆ.
2011–12ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 46,990 ಹೆಕ್ಟೇರ್‌ನಷ್ಟಿದ್ದ ಭತ್ತದ ಕೃಷಿ ಕ್ಷೇತ್ರ, 2021–22ನೇ ಸಾಲಿನಲ್ಲಿ 35,726 ಹೆಕ್ಟೇರ್‌ಗೆ ಕುಸಿತವಾಗಿರುವುದು ನಿಜಕ್ಕೂ ಆತಂಕಕಾರಿ ವಿಚಾರ. ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ.
ಕರಾವಳಿ ಪ್ಯಾಕೇಜ್ ಸ್ಥಗಿತ: ಕರಾವಳಿ ಹಾಗೂ ಮಲೆನಾಡಿನಲ್ಲಿ ಭತ್ತದ ಕೃಷಿ ಕ್ಷೇತ್ರ ಕಡಿಮೆಯಾಗುತ್ತಿರುವುದನ್ನು ತಪ್ಪಿಸಲು 2019ರಲ್ಲಿ ಅಂದಿನ ಸರ್ಕಾರ ‘ಕರಾವಳಿ ಪ್ಯಾಕೇಜ್’ ಘೋಷಿಸಿತ್ತು. ರೈತರು ಭತ್ತದ ಕೃಷಿಯಿಂದ ವಿಮುಖರಾಗಬಾರದು, ಸ್ಥಳೀಯ ಹಾಗೂ ಸಾಂಪ್ರದಾಯಿಕ ಭತ್ತದ ತಳಿಗಳ (ಕೆಂಪಕ್ಕಿ, ಕರಿ ಕಗ್ಗ, ಬಿಳಿ ಕಗ್ಗ ತಳಿ) ಸಂರಕ್ಷಣೆಯಾಗಬೇಕು, ಯಾಂತ್ರೀಕೃತ ಭತ್ತ ನಾಟಿಗೆ ಪ್ರೋತ್ಸಾಹ ಸಿಗಬೇಕು ಎಂಬುದು ಕರಾವಳಿ ಪ್ಯಾಕೇಜ್‌ನ ಉದ್ದೇಶವಾಗಿತ್ತು.
2,300 ಮಿ.ಮೀಗಿಂತ ಹೆಚ್ಚು ಮಳೆ ಬೀಳುವ ಕರಾವಳಿ ಹಾಗೂ ಮಲೆನಾಡು ವ್ಯಾಪ್ತಿಗೊಳಪಡುವ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳ ವ್ಯಾಪ್ತಿಯ ರೈತರು ಕರಾವಳಿ ಪ್ಯಾಕೇಜ್ ಅಡಿಯಲ್ಲಿ ಒಂದು ಹೆಕ್ಟೇರ್‌ಗೆ ₹ 7,500 ಪ್ರೋತ್ಸಾಹ ಧನ ಪಡೆಯಲು ಅವಕಾಶವಿತ್ತು.
ಭತ್ತ ಬೆಳೆಗಾರರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಿಸಿ, ಮನೋಸ್ಥೈರ್ಯ ಹೆಚ್ಚಿಸುವಲ್ಲಿ ನೆರವಾಗಬೇಕಾಗಿದ್ದ ‘ಕರಾವಳಿ ಪ್ಯಾಕೇಜ್’ ಅನುಷ್ಠಾನಕ್ಕೆ ಬಂದ ಒಂದೇ ವರ್ಷದಲ್ಲಿ ಸ್ಥಗಿತವಾಗಿದೆ. 2019ರಲ್ಲಿ ಜಿಲ್ಲೆಯ 705 ಹೆಕ್ಟೇರ್ ಪ್ಯಾಕೇಜ್ ವ್ಯಾಪ್ತಿಗೊಳಪಟ್ಟಿದ್ದು, 1,422 ರೈತರು ₹ 52 ಲಕ್ಷ ಪ್ರೋತ್ಸಾಹ ಧನ ಪಡೆದುಕೊಂಡಿದ್ದಾರೆ.
ಭತ್ತ ಬೆಳೆಯುವುದೇ ಸವಾಲು: ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಕರಾವಳಿಯ ಕೃಷಿ ಭೂಮಿ, ಹವಾಗುಣ ಭಿನ್ನವಾಗಿದ್ದು, ಮಳೆಗಾಲದಲ್ಲಿ ಭತ್ತದ ನೇಜಿ ಕರಗುವಷ್ಟು ಮಳೆ ಸುರಿಯುತ್ತದೆ. ಕುಂದಾಪುರ, ಹೆಬ್ರಿ, ಬೈಂದೂರು, ಉಡುಪಿ ತಾಲ್ಲೂಕುಗಳಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡಬೇಕು. ಜತೆಗೆ, ಇಲ್ಲಿ ಇಳುವರಿ ಪ್ರಮಾಣವೂ ಕಡಿಮೆ.
ಒಂದು ಎಕರೆಯಲ್ಲಿ ಭತ್ತ ಬೆಳೆಯಲು ಭೂಮಿ ಬಾಡಿಗೆ, ನಾಟಿ, ಕಳೆ, ಗೊಬ್ಬರ, ಕೊಯ್ಲು ಖರ್ಚು ಸೇರಿ ₹ 30,000 ವ್ಯಯಿಸಬೇಕು. 15 ರಿಂದ 20 ಕ್ವಿಂಟಲ್ ಬೆಳೆ ಬಂದರೂ ಮಾಡಿದ ಖರ್ಚಿಗೆ ಸಮನಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭತ್ತ ಬೆಳೆಯುವುದಕ್ಕಿಂತ ಭೂಮಿ ಹಡಿಲು ಬಿಡುವುದು ಲೇಸು ಎಂಬ ಭಾವನೆ ರೈತರಲ್ಲಿದೆ ಎನ್ನುತ್ತಾರೆ ಮುಖಂಡರು.
ಕೇರಳದಲ್ಲಿ ಕ್ವಿಂಟಲ್ ಭತ್ತಕ್ಕೆ ₹ 2,740 ಬೆಂಬಲ ಬೆಲೆ ನೀಡಲಾಗುತ್ತಿದೆ. ಕರಾವಳಿಯಲ್ಲಿ ಸದ್ಯ ಕ್ವಿಂಟಲ್‌ಗೆ ₹ 1,500 ಬೆಲೆ ಇದೆ. ತೇವಾಂಶದ ಕಾರಣ ನೀಡಿ ಚೀಲಕ್ಕೆ 5 ಕೆ.ಜಿ ಕಡಿತಗೊಳಿಸಲಾಗುತ್ತಿದೆ. ಇಂತಹ ರೈತ ವಿರೋಧಿ ನಿಲುವುಗಳಿಂದ ಕರಾವಳಿಯಲ್ಲಿ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುತ್ತಾರೆ ಜನಪರ ಹೋರಾಟ ಸಮಿತಿಯ ವಸಂತ್ ಗಿಳಿಯಾರ್.
ಜಿಲ್ಲೆಯಲ್ಲಿ ಭತ್ತ ಕೃಷಿಯ ಕ್ಷೇತ್ರ ಕುಸಿತ (ಹೆಕ್ಟೇರ್‌ಗಳಲ್ಲಿ)
ವರ್ಷ–ಭತ್ತದ ಕ್ಷೇತ್ರ
2011–12–46,990
2012–13–44,563
2013–14–44,663
2014–15–43,012
2015–16–43,210
2016–17–43,506
2017–18–42,553
2018–19–35,478
2019–20–34,514
2020–21–35,892
2021–22–35,726 (ಗುರಿ)
‘ರೈತ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆ’
ಉಡುಪಿ ಜಿಲ್ಲೆಯಲ್ಲಿ ರೈತ ಸಂಘಟನೆಗಳಲ್ಲಿ ಒಗ್ಗಟ್ಟು ಇಲ್ಲದಿರುವುದು, ರೈತ ನಾಯಕರು ಎನಿಸಿಕೊಂಡಿರುವ ಬಹುತೇಕರು ರಾಜಕೀಯ ಪಕ್ಷಗಳ ಜತೆಗೆ ಗುರುತಿಸಿಕೊಂಡಿರುವುದು ರೈತರ ಹೋರಾಟ ಶಕ್ತಿ ಕಳೆದುಕೊಳ್ಳಲು ಪ್ರಮುಖ ಕಾರಣ. ಕರಾವಳಿ ಪ್ಯಾಕೇಜ್ ಸ್ಥಗಿತವಾದಾಗ, ರೈತರ ಬೆಳೆಗೆ ಬೆಲೆ ಸಿಗದಿದ್ದಾಗ ರೈತ ಸಂಘಟನೆಗಳಿಂದ ಸಂಘಟಿತ ಹೋರಾಟ ನಡೆಯಲಿಲ್ಲ. ಹಾಗಾಗಿ, ಸರ್ಕಾರಗಳು ಕೂಡ ಕರಾವಳಿಯ ರೈತರನ್ನು ನಿರ್ಲಕ್ಷ್ಯ ಮಾಡಿದವು. ಈಗ ಪಕ್ಷಾತೀತವಾಗಿ ರೈತ ಮುಖಂಡರು, ಯುವ ನಾಯಕರು ಒಟ್ಟಾಗಿದ್ದೇವೆ. ಕ್ವಿಂಟಲ್ ಭತ್ತಕ್ಕೆ ₹ 2,500 ಬೆಂಬಲ ಬೆಲೆಗೆ ಹೋರಾಟ ಆರಂಭಿಸಿದ್ದು, ನ.5ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದೇವೆ. ಹಂತ ಹಂತವಾಗಿ ಹೋರಾಟ ತೀವ್ರಗೊಳ್ಳಲಿದೆ ಎನ್ನುತ್ತಾರೆ ಜನಪರ ಹೋರಾಟ ವೇದಿಕೆಯ ಮುಖಂಡರು.
‘ಕೃಷಿಯಿಂದ ವಿಮುಖವಾಗಲುವ ಕಾರಣ’
ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದರಿಂದ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಜತೆಗೆ ಮುಯ್ಯಾಳು ಪದ್ಧತಿ ಚಾಲ್ತಿಯಲ್ಲಿತ್ತು. ಇದರಿಂದ ಕೂಲಿಯಾಳುಗಳ ಸಮಸ್ಯೆ ಇರಲಿಲ್ಲ. ನಿರ್ವಹಣಾ ವೆಚ್ಚವೂ ಕಡಿಮೆ ಇತ್ತು. ಆಧುನಿಕತೆಯ ಪ್ರಭಾವದಿಂದ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿ, ಕೂಲಿ ಕಾರ್ಮಿಕರ ಕೊರತೆ ಉಂಟಾಯಿತು. ಯುವಕರು ಹೆಚ್ಚು ಶ್ರಮಬೇಡುವ ಕೃಷಿ ಬಿಟ್ಟು ಅನ್ಯ ಉದ್ಯೋಗಗಳತ್ತ ಆಕರ್ಷಿತರಾಗಿ ನಗರಗಳಿಗೆ ವಲಸೆ ಹೋದರು. ಭತ್ತದ ಗದ್ದೆಗಳು ತೋಟಗಳಾಗಿ ಬದಲಾದವು, ರಿಯಲ್ ಎಸ್ಟೇಟ್ ಪ್ರಭಾವದಿಂದ ಕೃಷಿ ಭೂಮಿಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಎದ್ದು ನಿಂತವು. ಮತ್ತೊಂದೆಡೆ, ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದ್ದರಿಂದ ರೈತರು ಕೃಷಿ ಭೂಮಿಯನ್ನು ಹಡಿಲುಬಿಡಬೇಕಾಯಿತು.
‘ಕರಾವಳಿ ಪ್ಯಾಕೇಜ್ ಸ್ಥಗಿತ’
2019ರಲ್ಲಿ ಸರ್ಕಾರ ಕರಾವಳಿ ಪ್ಯಾಕೇಜ್ ಘೋಷಿಸಿ ಅನುಷ್ಠಾನಕ್ಕೆ ತಂದಿತು. ಕರಾವಳಿಯ ಸಾಂಪ್ರದಾಯಿಕ ತಳಿಗಳನ್ನು ಉಳಿಸುವುದು ಹಾಗೂ ಯಾಂತ್ರೀಕೃತ ಭತ್ತ ಬೇಸಾಯಕ್ಕೆ ಪ್ರೋತ್ಸಾಹ ನೀಡಿ ರೈತರ ಆದಾಯ ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. 2019ರ ನಂತರ ಸರ್ಕಾರ ಯೋಜನೆಯನ್ನು ಕೈಬಿಟ್ಟಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್.
ಹಡಿಲು ಭೂಮಿ ಕೃಷಿ ಆಂದೋಲನ
ಕೃಷಿಗೆ ಬೆನ್ನುಮಾಡಿರುವ ರೈತರನ್ನು ಮತ್ತೆ ಕೃಷಿಯತ್ತ ಸೆಳೆಯಲು ಕೇದಾರೋತ್ಥಾನ ಟ್ರಸ್ಟ್ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಡಿಲುಭೂಮಿ ಕೃಷಿ ಅಭಿಯಾನ ನಡೆಸುತ್ತಿದ್ದು, ಈ ಹಂಗಾಮಿನಲ್ಲಿ 2,462 ಎಕರೆ ಭತ್ತದ ಕೃಷಿ ನಡೆದಿದೆ. ಇಂತಹ ಅಭಿಯಾನಗಳು ಜಿಲ್ಲೆಯಾದ್ಯಂತ ವಿಸ್ತರಿಸಬೇಕು, ಕರಾವಳಿ ಪ್ಯಾಕೇಜ್ ಮತ್ತೆ ಅನುಷ್ಠಾನವಾಗಬೇಕು, ಭತ್ತ ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ಸವಲತ್ತುಗಳನ್ನು ಕೊಡಬೇಕು ಎಂದು ಒತ್ತಾಯಿಸುತ್ತಾರೆ ರೈತ ಮುಖಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.