ಉಡುಪಿ: ನೆರೆಯ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಸುಂದರ ಕಡಲ ತೀರಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಕಾಪು. ಮಸೀದಿ, ಮಂದಿರ, ಚರ್ಚ್‌ಗಳನ್ನು ಹೊಂದಿರುವ ಸರ್ವ ಧರ್ಮಗಳ ಜನರು ನೆಲೆಸಿರುವ ಸೌಹಾರ್ದದ ನೆಲವಾಗಿಯೂ ಕಾಪು ಗುರುತಿಸಿಕೊಂಡಿದೆ.
ಉಡುಪಿಯ ಅಷ್ಟಮಠಗಳ ಪೈಕಿ ಪಲಿಮಾರು ಮಠ, ಅದಮಾರು ಮಠ, ಶಿರೂರು ಮಠ ಹಾಗೂ ಪುತ್ತಿಗೆ ಮಠಗಳ ಮೂಲ ಮಠಗಳು ಇರುವುದು ಕಾಪು ಕ್ಷೇತ್ರದಲ್ಲಿ. ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಮಧ್ವಾಚಾರ್ಯರು ಜನಿಸಿದ ಕುಂಜಾರುಗಿರಿಯ ಪಾಜಕವೂ ಇಲ್ಲಿದೆ. ಅಷ್ಟಮಠಗಳ ಸ್ವಾಮೀಜಿಗಳು ಪರ್ಯಾಯ ಪೀಠವೇರುವ ಮುನ್ನ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತೀತಿ ಶತಮಾನಗಳಿಂದಲೂ ರೂಢಿಯಲ್ಲಿದೆ.
ಪಾದೂರಿನಲ್ಲಿರುವ ಐಎಸ್‌ಪಿಆರ್‌ಎಲ್ ಕಚ್ಚಾತೈಲ ಸಂಗ್ರಹಾಗಾರ, ಅದಾನಿ ಮಾಲೀಕತ್ವದ ಯುಪಿಸಿಎಲ್, ಪವನ ವಿದ್ಯುತ್ ಕಂಪೆನಿ ಸುಜ್ಲಾನ್ ಸೇರಿದಂತೆ ಹಲವು ಬೃಹತ್ ಸಂಸ್ಥೆಗಳು ಇಲ್ಲಿ ನೆಲೆಸಿದ್ದು ಕೈಗಾರಿಕಾ ನಗರಿಯಾಗಿಯೂ ಗುರುತಿಸಿಕೊಂಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಕಾಪು ರಾಜಕೀಯವಾಗಿಯೂ ಗಮನ ಸೆಳೆದಿರುವ ಕ್ಷೇತ್ರ.
1997ರವರೆಗೂ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಕಾಪು, ಉಡುಪಿ ಪ್ರತ್ಯೇಕ ಜಿಲ್ಲೆಯಾದ ಬಳಿಕ ಉಡುಪಿ ಜಿಲ್ಲೆಗೆ ಬಂತು. ಕಾಪು ಕ್ಷೇತ್ರದ ರಾಜಕೀಯ ಚಿತ್ರಣ ಅವಲೋಕಿಸಿದರೆ, 1957ರಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಫ್.ಎಕ್ಸ್. ಪಿಂಟೋ ಡೆನಿಸ್ ಪಿಎಸ್‌ಪಿ (ಪ್ರಜಾ ಸೋಷಿಯಲಿಸ್ಟ್ ಪಕ್ಷ) ಅಭ್ಯರ್ಥಿಯಾಗಿದ್ದ ಎಂ.ನವೀನ್ ಚಂದ್ರ ಅವರನ್ನು 11,591 ಮತಗಳ ಅಂತರದಿಂದ ಮಣಿಸಿದರು.
1962ರ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಭಾಸ್ಕರ್ ಶೆಟ್ಟಿ ಅವರು ಕಾಂಗ್ರೆಸ್‌ನ ಪಿಂಟೋ ಡೆನಿಸ್ ವಿರುದ್ಧ ಜಯಭೇರಿ ಬಾರಿಸಿದರು. 1967ರ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ರುಚಿ ನೋಡಿದ ಬಿ.ಭಾಸ್ಕರ್ ಶೆಟ್ಟಿ ಕಾಂಗ್ರೆಸ್‌ನ ಡಿ.ಆರ್.ಹೆಗ್ಡೆ ಅವರನ್ನು 7,185 ಮತಗಳ ಅಂತರದಿಂದ ಮಣಿಸಿದರು.
1972ರ ಚುನಾವಣೆಯಲ್ಲಿ ಪಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಬಂದ ಭಾಸ್ಕರ್ ಶೆಟ್ಟಿಗೆ ಅದೃಷ್ಟ ಕೈಕೊಡಲಿಲ್ಲ. ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಮುದ್ದು ಸುವರ್ಣ ಅವರನ್ನು 11,854 ಮತಗಳ ಅಂತರದಿಂದ ಮಣಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು.
1978ರ ಚುನಾವಣೆಯಲ್ಲೂ ಅವರ ಗೆಲುವಿನ ಅಭಿಯಾನಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಈ ಬಾರಿ ಕಾಂಗ್ರೆಸ್ (ಐ) ಪಕ್ಷದಿಂದ ಸ್ಪರ್ಧಿಸಿದ್ದ ಭಾಸ್ಕರ್ ಶೆಟ್ಟಿ ಜೆಎನ್‌ಪಿ ಪಕ್ಷದ ದಯಾನಾಥ ಕೆ.ಕೋಟ್ಯಾನ್ ಅವರನ್ನು 8,718 ಮತಗಳಿಂದ ಮಣಿಸಿದರು.
ವಸಂತ್ ಸಾಲಿಯಾನ್ ಪ್ರಾಬಲ್ಯ:
1983ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ವಸಂತ್ ವಿ.ಸಾಲಿಯಾನ್ ಬಿಜೆಪಿಯ ಗಂಗಾಧರ ಅವರನ್ನು 6,397 ಮತಗಳಿಂದ ಪರಾಭವಗೊಳಿಸಿ ಮೊದಲ ಗೆಲುವು ಪಡೆದರು. ಎರಡೇ ವರ್ಷಗಳಲ್ಲಿ ಎದುರಾದ 1985ರ ಚುನಾವಣೆಯಲ್ಲೂ ಗೆದ್ದು ಬೀಗಿದರು. ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭಾಸ್ಕರ್ ಶೆಟ್ಟಿ ಅವರನ್ನು 18,862 ಮತಗಳ ಭಾರಿ ಅಂತರದಿಂದ ಸೋಲಿಸಿದರು.
1989ರ ಚುನಾವಣೆಯಲ್ಲೂ ಭಾಸ್ಕರ್ ಶೆಟ್ಟಿ ಅವರನ್ನು ಮಣಿಸಿ ಹ್ಯಾಟ್ರಿಕ್ ವಿಜಯ ಸಾಧಿಸಿದರು. 1994ರ ಚುನಾವಣೆಯಲ್ಲೂ ಅವರ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿಲ್ಲ. ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಲಾಲಾಜಿ ಆರ್.ಮೆಂಡನ್ ವಿರುದ್ಧ 1,574 ಮತಗಳ ಗೆಲುವು ಪಡೆದರು.
1997ರಲ್ಲಿ ಉಡುಪಿ ಪ್ರತ್ಯೇಕ ಜಿಲ್ಲೆಯಾದ ಬಳಿಕ 1999ರಲ್ಲಿ ನಡೆದ ಮೊದಲ ಚುನಾವಣೆಯೂ ವಸಂತ್ ವಿ.ಸಾಲಿಯಾನ್ ಪಾಲಿಗೆ ಗೆಲುವಿನ ಸಿಹಿ ನೀಡಿತು. ಬಿಜೆಪಿಯ ಲಾಲಾಜಿ ಮೆಂಡನ್ ಅವರನ್ನು ಸೋಲಿಸಿದರು.
ನಿರಂತರವಾಗಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಸಂತ್ ಸಾಲಿಯಾನ್ ಅವರಿಗೆ 2004ರ ಚುನಾವಣೆ ಸೋಲಿನ ರುಚಿ ತೋರಿಸಿದವರು ಬಿಜೆಪಿಯ ಲಾಲಾಜಿ ಮೆಂಡನ್. 2 ಬಾರಿ ಸೋಲುಂಡಿದ್ದ ಲಾಲಾಜಿ 1,390 ಮತಗಳ ಅಂತರದಿಂದ ಅವರನ್ನು ಪರಾಭವಗೊಳಿಸಿದರು.
2008ರ ಚುನಾವಣೆಯಲ್ಲೂ ಬಿಜೆಪಿಯ ಲಾಲಾಜಿ ಮೆಂಡನ್ ಕಾಂಗ್ರೆಸ್‌ನ ವಸಂತ್ ಸಾಲಿಯಾನ್ ವಿರುದ್ಧ 967 ಮತಗಳ ಜಯ ಸಾಧಿಸಿದರು. ಸತತ ಎರಡು ಬಾರಿ ಸೋಲುಂಡ ವಸಂತ್ ಸಾಲಿಯಾನ್ ಅವರಿಗೆ 2013ರ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಬದಲಿಗೆ ಹೊಸ ಮುಖ ವಿನಯ ಕುಮಾರ್ ಸೊರಕೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ವಿನಯ ಕುಮಾರ್ ಸೊರಕೆ ಲಾಲಾಜಿ ಮೆಂಡನ್ ಅವರನ್ನು 1,855 ಮತಗಳಿಂದ ಮಣಿಸಿ ಗೆಲುವಿನ ಖಾತೆ ತೆರೆದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ ಅವರನ್ನು ಮಣಿಸುವ ಮೂಲಕ ಬಿಜೆಪಿಯ ಲಾಲಾಜಿ ಮೆಂಡನ್ ಸೋಲಿನ ಸೇಡು ತೀರಿಸಿಕೊಂಡರು.
ಕಾಪು ವಿಧಾನಸಭಾ ಕ್ಷೇತ್ರ: ಗೆದ್ದವರು
ವರ್ಷ–ಗೆದ್ದ ಅಭ್ಯರ್ಥಿ–ಪಕ್ಷ–ಪಡೆದ ಮತ
1957–ಎಫ್.ಎಕ್ಸ್.ಪಿಂಟೊ ಡೆನಿಸ್–ಕಾಂಗ್ರೆಸ್–18,761
1962–ಭಾಸ್ಕರ್ ಶೆಟ್ಟಿ–ಪಿಎಸ್‌ಪಿ–13,624
1967–ಭಾಸ್ಕರ್ ಶೆಟ್ಟಿ–ಪಿಎಸ್‌ಪಿ–20,956
1972–ಭಾಸ್ಕರ್ ಶೆಟ್ಟಿ–ಕಾಂಗ್ರೆಸ್–25,358
1978–ಭಾಸ್ಕರ್ ಶೆಟ್ಟಿ–ಕಾಂಗ್ರೆಸ್ (ಐ)–29,030
1983–ವಸಂತ್ ವಿ.ಸಾಲಿಯಾನ್–ಕಾಂಗ್ರೆಸ್–22839
1985–ವಸಂತ್ ಸಾಲಿಯಾನ್–ಕಾಂಗ್ರೆಸ್–27,356
1989–ವಸಂತ್ ಸಾಲಿಯಾನ್–ಕಾಂಗ್ರೆಸ್–29,823
1994–ವಸಂತ್ ಸಾಲಿಯಾನ್–ಕಾಂಗ್ರೆಸ್–17152
1999–ವಸಂತ್ ಸಾಲಿಯಾನ್–ಕಾಂಗ್ರೆಸ್–31,151
2004–ಲಾಲಾಜಿ ಆರ್.ಮೆಂಡನ್–ಬಿಜೆಪಿ–33,611
2008–ಲಾಲಾಜಿ ಆರ್.ಮೆಂಡನ್–ಬಿಜೆಪಿ– 45961
2013–ವಿನಯ ಕುಮಾರ್ ಸೊರಕೆ–ಕಾಂಗ್ರೆಸ್–52782
2018–ಲಾಲಾಜಿ ಆರ್.ಮೆಂಡನ್–ಬಿಜೆಪಿ– 75,893
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.