ಸೋಮವಾರ, ಸೆಪ್ಟೆಂಬರ್ 16, 2019
22 °C

ದೋಣಿ ದುರಂತ: ಸೂಕ್ತ ಪರಿಹಾರ ನೀಡದಿದ್ದರೆ ಸುಪ್ರೀಂ ಮೊರೆ– ಪ್ರಮೋದ್ ಮಧ್ವರಾಜ್‌

Published:
Updated:
Prajavani

ಉಡುಪಿ: ಮಲ್ಪೆಯ ಸುವರ್ಣ ತ್ರಿಭುಜ ಬೋಟ್‌ಗೆ ನೌಕಾಪಡೆಯ ಐಎನ್‌ಎಸ್‌ ಕೊಚ್ಚಿನ್‌ ಹಡಗು ಡಿಕ್ಕಿ ಹೊಡೆದಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ತಪ್ಪು ಒಪ್ಪಿಕೊಂಡು ಮೃತ ಮೀನುಗಾರರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾಪಡೆ ತಕ್ಷಣ ಸುವರ್ಣ ತ್ರಿಭುಜ ಬೋಟ್‌ನ ನಷ್ಟವನ್ನು ಭರಿಸಬೇಕು. 7 ಮೀನುಗಾರರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರ ನೀಡಬೇಕು. ಅವಘಡಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಮೋದ್ ಒತ್ತಾಯಿಸಿದರು.

ಸುವರ್ಣ ತ್ರಿಭುಜ ಬೋಟ್‌ಗೆ ನೌಕಾಪಡೆಯ ಹಡಗು ಡಿಕ್ಕಿ ಹೊಡೆದಿದೆ ಎಂಬ ಸತ್ಯ ಬಯಲಾದರೆ, ಲೋಕಸಭಾ ಚುನಾವಣೆಯಲ್ಲಿ ಮೀನುಗಾರರು ತಿರುಗಿಬೀಳಬಹುದು ಎಂಬ ಕಾರಣಕ್ಕೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ. ಚುನಾವಣೆ ಬಳಿಕ ಬೋಟ್‌ ಹುಡುಕುವ ನಾಟಕ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಬೋಟ್‌ ದುರಂತವಾದ ಬಳಿಕ ಮೀನುಗಾರರ ಶವಗಳು ಸಮುದ್ರದಲ್ಲಿ ತೇಲುತ್ತಿದ್ದ ಸುದ್ದಿಗಳು ಕೇಳಿಬಂದಿದ್ದವು. ಆದರೆ, ಚುನಾವಣೆ ದೃಷ್ಟಿಯಿಂದ ವಿಷಯ ಬಹಿರಂಗವಾಗದಂತೆ ವ್ಯವಸ್ಥಿತವಾಗಿ ಮುಚ್ಚಿಡಲಾಗಿದೆ. ಕೇಂದ್ರ ಸರ್ಕಾರ ಮೀನುಗಾರರಿಗೆ ದ್ರೋಹ ಎಸಗಿದೆ ಎಂದು ವಾಗ್ದಾಳಿ ನಡೆಸಿದರು.

Post Comments (+)