ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಪ್ರಾಣಿ ಸಂಘ಼ರ್ಷ ಪರಿಹರಿಸಿ

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಣ್ಯ ಸಚಿವ ಸಚಿವ ಉಮೇಶ್ ಕತ್ತಿ ಸೂಚನೆ
Last Updated 8 ಮೇ 2022, 4:10 IST
ಅಕ್ಷರ ಗಾತ್ರ

ಉಡುಪಿ: ಈಚೆಗೆ ಮಾನವ ಹಾಗೂ ಕಾಡುಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗಿದ್ದು, ಪ್ರಾಣ ಹಾನಿ ಹಾಗೂ ಬೆಳೆ ಹಾನಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಣ್ಯ ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಾಡುಪ್ರಾಣಿಗಳು ಅರಣ್ಯದಲ್ಲಿ ಎದುರಾಗಿರುವ ಆಹಾರದ ಕೊರತೆಯಿಂದ ಕಾಡಿನಿಂದ ನಾಡಿನೆಡೆಗೆ ವಲಸೆ ಬಂದು ಬೆಳೆ ಹಾನಿ ಮಾಡುವ ಜತೆಗೆ ಪ್ರಾಣಹಾನಿ ಮಾಡುತ್ತಿವೆ. ಇದಕ್ಕೆ ಪರಿಹಾರವಾಗಿ ಕಾಡಿನಲ್ಲಿ ಪ್ರಾಣಿಗಳಿಗೆ ಅಗತ್ಯವಿರುವ ಹಣ್ಣು ಹಂಪಲು ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗಿ ಬರುವುದರಿಂದ ಗಿಡ ಮರ ಬೆಳೆಸಲು ತೊಂದರೆ ಇಲ್ಲ. ಉಪಯುಕ್ತವಲ್ಲದ ಅಕೇಶಿಯಾ ಗಿಡಗಳ ಬದಲಿಗೆ ಇತರೆ ಜಾತಿಯ ಗಿಡಮರಗಳನ್ನು ಹೆಚ್ಚು ಬೆಳೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾಡುಪ್ರಾಣಿಗಳ ವಲಸೆ ತಡೆಗೆ ಹಾಗೂ ಅರಣ್ಯಕ್ಕೆ ಜನ ಜಾನುವಾರು ಅತಿಕ್ರಮ ಪ್ರವೇಶ ತಡೆಗೆ ನಿರ್ಮಿಸಲಾಗಿರುವ ಸೋಲಾರ್ ವಿದ್ಯುತ್ ಬೇಲಿ ಅಷ್ಟಾಗಿ ಉಪಯೋಗಕ್ಕೆ ಬರುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ಸೋಲಾರ್ ತಂತಿ ಬೇಲಿಗಳ ನಿರ್ವಹಣೆ ಸೂಕ್ತವಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.

ಅರಣ್ಯ ವ್ಯಾಪ್ತಿಯ ಗ್ರಾಮಗಳಿಗೆ ಸಂಚರಿಸಲು ಹಾಲಿ ಇರುವ ರಸ್ತೆಗಳ ದುರಸ್ತಿ ಕಾಮಗಾರಿಗೆ ಕಾನೂನಿನ ಅಡಿಯಲ್ಲಿ ಅವಕಾಶವಿದ್ದಲ್ಲಿ ಅನುಮತಿ ಕೊಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲ ಪಡಿತರ ಚೀಟಿಗಳ ಇ ಕೆವೈಸಿಯನ್ನು ಸಂಪೂರ್ಣವಾಗಿ ನೋಂದಣಿ ಮಾಡುವಂತೆ ಸೂಚಿಸಿದ ಸಚಿವರು ನೋಂದಣಿ ಮಾಡದ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗದುಹಾಕಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಬೆಂಬಲ ಬೆಲೆ ಯೋಜನೆಯಡಿ ಸ್ಥಳೀಯ ರೈತರು ಬೆಳೆಯುವ ಭತ್ತವನ್ನು ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಖರೀದಿಸಬೇಕು ಎಂಬುದು ಈ ಭಾಗದ ರೈತರ ಬೇಡಿಕೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಜೊತೆಗೆ ಪರ್ಯಾಯ ಮಾರ್ಗಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಾತನಾಡಿ, ಈ ಹಿಂದೆ ಕಾಡಿನಲ್ಲಿ ಹೇರಳವಾಗಿ ಹಲಸು, ನೇರಳೆ, ಸೇರಿದಂತೆ ಹಣ್ಣಿನ ಗಿಡ ಮರಗಳು, ಆನೆಗಳಿಗೆ ಅಗತ್ಯವಿದ್ದ ಬಿದಿರು ಇದ್ದವು. ಪ್ರಸ್ತುತ ಹಣ್ಣಿನ ಮರಗಳ ಸಂಖ್ಯೆ ಕ್ಷೀಣವಾಗಿದ್ದು, ಪ್ರಾಣಿಗಳು ಆಹಾರ ಅರಸಿ ಜನವಸತಿಗಳತ್ತ ನುಗ್ಗುತ್ತಿವೆ. ನೈಸರ್ಗಿಕವಾಗಿ ಅರಣ್ಯದಲ್ಲಿ ಬೆಳಯುವ ಹಣ್ಣಿನ ಗಿಡಗಳನ್ನು ಹೆಚ್ಚು ಬೆಳೆಸಬೇಕು ಎಂದು ಸಲಹೆ ನೀಡಿದರು.

ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಕುಚ್ಚಿಗೆ ಅಕ್ಕಿಯನ್ನು ಪಡಿತರದಲ್ಲಿ ವಿತರಣೆ ಮಾಡಬೇಕು ಎದು ಶಾಸಕ ರಘುಪತಿ ಭಟ್ ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇಟಾಲ್ಕರ್, ಅರಣ್ಯ ಇಲಾಖೆ ಅಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT