ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ರೈತರಿಗೆ ಎಂಓ–4 ಭತ್ತದ ಬಿತ್ತನೆ ಬೀಜ ಕೊರತೆಯಾಗದಂತೆ ಕ್ರಮ: ಬಿಸಿ ಪಾಟೀಲ್‌

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌
Last Updated 26 ಜೂನ್ 2021, 13:18 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜ ಕೊರತೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿ ವರ್ಷ ಜಿಲ್ಲೆಯಲ್ಲಿ ಎಂಒ–4 ಬಿತ್ತನೆ ಬೀಜದ ಕೊರತೆಯಾಗುತ್ತಿದ್ದು, ಮುಂದಿನ ವರ್ಷದಿಂದ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಬಳಿಕ ಕೃಷಿಯತ್ತ ಮುಖಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ರೈತರಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯವಾಗುತ್ತಿಲ್ಲ. ಪರಿಣಾಮ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜಿಲ್ಲೆಗೆ ಅಗತ್ಯವಿರುವ ಎಂಓ–4 ಭತ್ತದ ಬಿತ್ತನೆ ಬೀಜವನ್ನು ಪೂರೈಸಲಾಗುವುದು. ಮುಂದಿನ ಹಿಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಬೀಜವನ್ನು ಬೆಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಡುಪಿಯಲ್ಲಿ ನಡೆಯುತ್ತಿರುವ ಹಡಿಲು ಕೃಷಿ ಭೂಮಿ ಅಭಿಯಾನ ರಾಜ್ಯಕ್ಕೆ ಮಾದರಿ ಕಾರ್ಯಕ್ರಮ. ಹಡಿಲು ಕೃಷಿಭೂಮಿಯಲ್ಲಿ ಕೃಷಿ ಮಾಡುವಂತೆ ಕೃಷಿ ಇಲಾಖೆಯ ಮೂಲಕ ಮನವೊಲಿಸಿ ಪ್ರೋತ್ಸಾಹಿಸಲಾಗುವುದು ಎಂದರು.

ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಲ್ಲಿ ರೈತರು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಹವಾಮಾನ ಬೆಳೆ ಆಧಾರಿತ ವಿಮೆ ಯೋಜನೆಯಲ್ಲಿ ಬಾಕಿ ಇರುವ ರೈತರ ವಿಮಾ ಮೊತ್ತವನ್ನು ಶೀಘ್ರ ಬಿಡಗಡೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಇರುವುದರಿಂದ ರೈತರು ಯಾಂತ್ರೀಕರಣ ಕೃಷಿಗೆ ಆದ್ಯತೆ ನೀಡಬೇಕು. ಸಕಾಲದಲ್ಲಿ, ಕಡಿಮೆ ವೆಚ್ಚದಲ್ಲಿ ಯಂತ್ರೋಪಕರಣಗಳ ಸೇವೆಯನ್ನು ರೈತರಿಗೆ ನೀಡುವ ನಿಟ್ಟಿನಲ್ಲಿ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

‘ರೈತರೊಂದಿಗೆ ಬೆರೆತು ಸಮಸ್ಯೆಗಳನ್ನು ಆಲಿಸಲು ‘ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಕೊರೋನಾ ಕಾರಣದಿಂದ ಸ್ಥಗಿತವಾಗಿದ್ದು, ಶೀಘ್ರಆರಂಭಿಸಿ ಸ್ಥಳದಲ್ಲಿಯೇ ರೈತರ ಸಮಸ್ಯೆಗಳನ್ನು ಬಗೆಹರಿಸಲಾವುದು ಎಂದು ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಜಿಲ್ಲೆಯಲ್ಲಿ ಜಮೀನಿಗೆ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು. ಹಣ್ಣು ಮತ್ತು ತರಕಾರಿ ಬೆಳೆಗಳ ಶೇಖರಣೆಗೆ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಮಾಡಬೇಕು, ಭತ್ತದ ಬೆಳಗೆ ಪ್ರೋತ್ಸಾಹ ಧನ ನೀಡಬೇಕು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಹಾಗೂ ವಿವಿಧ ಕೃಷಿಕ ಸಂಘಟನೆಗಳ ಪ್ರತಿನಿಧಿಗಳು ಅಧಿಕಾರಿಗಳು ಇದ್ದರು.

‘ರಾಜ್ಯದೆಲ್ಲೆಡೆ ಹಡಿಲುಭೂಮಿ ಕೃಷಿ ಅಭಿಯಾನ ನಡೆಯಲಿ’:ಉಡುಪಿಯಲ್ಲಿ ನಡೆಯುತ್ತಿರುವ ಹಡಿಲುಭೂಮಿ ಕೃಷಿ ಅಭಿಯಾನ ರಾಜ್ಯಕ್ಕೆ ಮಾದರಿಯಾಗಿದ್ದು, ಕಾರ್ಯಕ್ರಮ ಎಲ್ಲೆಡೆ ವಿಸ್ತರಣೆಯಾದರೆ ರಾಜ್ಯದಲ್ಲಿ ಬೀಳುಬಿದ್ದಿರುವ 15 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಸನಾಗಲಿದೆ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್‌ ಮಾಡುತ್ತಿರುವುದು ಸಂತಸದ ವಿಚಾರ. 2,000 ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಭತ್ತದ ನಾಟಿ ನಡೆಯುತ್ತಿರುವು ಅಭಿನಂದನೀಯ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT