ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಮುಗಿಯದ ಕಾಮಗಾರಿ ಗೋಳು; ಜನರ ನೆಮ್ಮದಿ ಹಾಳು

ದಶಕಗಳಿಂದ ನಡೆಯುತ್ತಿವೆ ಅಭಿವೃದ್ಧಿ ಯೋಜನೆಗಳ ಕಾಮಗಾರಿ
Published 13 ಮೇ 2024, 5:18 IST
Last Updated 13 ಮೇ 2024, 5:18 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ದಶಕಗಳು ಕಳೆದರೂ ಪೂರ್ಣಗೊಳ್ಳದ ಪರಿಣಾಮ ಸಾರ್ವಜನಿಕರು ಬೇಸತ್ತಿದ್ದಾರೆ. ಯೋಜನೆ ಪೂರ್ಣಗೊಳಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ಕುಂಟುತ್ತಾ, ತೆವಳುತ್ತಾ ಸಾಗುತ್ತಿವೆ.

ಉಡುಪಿಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡು ಹಲವು ವರ್ಷಗಳು ಕಳೆದರೂ ಪೂರ್ಣವಾಗಿಲ್ಲ. ಕಾಮಗಾರಿಗೆ ಒಪ್ಪಿಗೆ ನಿರಾಕ್ಷೇಪಣೆ ಪಡೆಯುವ ಸಂಬಂಧ ರೈಲ್ವೆ ಇಲಾಖೆ, ಹೆದ್ದಾರಿ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದ ಕೇವಲ 15 ಅಡಿ ಉದ್ದದ ಕಾಮಗಾರಿ ಮುಗಿಸಲು ಸಾಧ್ಯವಾಗಿಲ್ಲ.

7 ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಸಣ್ಣ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಗಿಸಲು ಸಾಧ್ಯವಾಗದ ಬಗ್ಗೆ ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಜನವರಿಯಲ್ಲಿ ಕಾಮಗಾರಿಗೆ ಅಗತ್ಯವಾದ ಗರ್ಡಾರ್‌ಗಳು ಹುಬ್ಬಳ್ಳಿಯಿಂದ ಉಡುಪಿಗೆ ಬಂದಿದ್ದರೂ ಕಾಮಗಾರಿ ಆರಂಭ ಮಾಡಿಲ್ಲ. ಜಿಲ್ಲಾಡಳಿತ ‘ಇಂದು’ ‘ನಾಳೆ’ ಮುಹೂರ್ತ ನಿಗದಿ ಮಾಡುತ್ತಿದ್ದರೂ ನೆರವೇರಿಲ್ಲ.

ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಉಡುಪಿಯಿಂದ ಮಣಿಪಾಲಕ್ಕೆ ತೆರಳುವ ಸವಾರರು ಎಂಜಿಎಂ ಕಾಲೇಜಿನ ಬಳಿ ಬಲಕ್ಕೆ ತಿರುವು ಪಡೆದು ಸುಮಾರು 200ರಿಂದ 300 ಮೀಟರ್‌ನಷ್ಟು ದೂರದವರೆಗೆ ಕಿರಿದಾದ ಏಕಮುಖ ರಸ್ತೆಯಲ್ಲಿ ಸಾಗಬೇಕಾಗಿದೆ. ಕಾಮಗಾರಿ ಸ್ಥಳದ ಸಮೀಪದಲ್ಲಿಯೇ ಖಾಸಗಿ ಬಸ್‌ಗಳು ನಿಲುಗಡೆ ಮಾಡುವುದರಿಂದ ಹಾಗೂ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗವೂ ಇರುವುದರಿಂದ ದಟ್ಟಣೆಯಿಂದ ಸವಾರರು ಹೈರಾಣಾಗಿದ್ದಾರೆ.

ಕರಾವಳಿ–ಮಲೆನಾಡು ಮಧ್ಯೆ ಸಂಪರ್ಕಿಸುವ ಬಸ್‌ಗಳು, ಸರಕು ಸಾಗಣೆ ವಾಹನಗಳು, ಸಾರ್ವಜನಿಕ ವಾಹನಗಳು ಇದೇ ಮಾರ್ಗದಲ್ಲಿ ಸಾಗಬೇಕಿದ್ದು ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಮೇಲ್ಸೇತುವೆ ಕಾಮಗಾರಿ ಸಮೀ‍ಪದಲ್ಲಿಯೇ ಖಾಸಗಿ ಶಾಲೆಯಿದ್ದು, ಶಾಲೆ ಆರಂಭವಾದರೆ ಮಕ್ಕಳ ಸಂಚಾರಕ್ಕೆ ತೊಂದರೆಯಾಗಲಿದೆ.

ಹೆದ್ದಾರಿ ಹಾಗೂ ರೈಲ್ವೆ ಇಲಾಖೆ ಸಮನ್ವಯದಿಂದ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿ ಅವರು ಸರಣಿ ಸಭೆಗಳನ್ನು ನಡೆಸಿ ಕಟ್ಟುನಿಟ್ಟಿನ ನಿರ್ದೇಶನದ ಜೊತೆಗೆ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಕಾಮಗಾರಿಗೆ ರೈಲ್ವೆ ಇಲಾಖೆ ಎನ್‌ಒಸಿ ನೀಡಿದ್ದರೂ ಆರಂಭವಾಗಿಲ್ಲ ಏಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಸಂತೆಕಟ್ಟೆ ಅಂಡರ್‌ಪಾಸ್ ಅವ್ಯವಸ್ಥೆ:

ಉಡುಪಿಯ ಸಂತೆಕಟ್ಟೆ ಅಂಡರ್‌ಪಾಸ್‌ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಸಮರ್ಪಕ ಸರ್ವೀಸ್‌ ರಸ್ತೆ ನಿರ್ಮಾಣ ಮಾಡದೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಸಮಸ್ಯೆ ಗಂಭೀರವಾಗಿದೆ.

ಈ ಭಾಗದಲ್ಲಿ ರಸ್ತೆ ದಾಟಲು ಸುತ್ತಿಬಳಸಿ ಸಾಗಬೇಕಾಗಿರುವುದರಿಂದ ಪಾದಚಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಜೀವ ಪಣಕ್ಕಿಟ್ಟು ರಸ್ತೆ ದಾಟಬೇಕಿದೆ. ಈ ಭಾಗದಲ್ಲಿ ಬಸ್ ನಿಲ್ದಾಣವೂ ಇಲ್ಲದಿರುವುದರಿಂದ ಹೆದ್ದಾರಿ ಮೇಲೆಯೇ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಕಾಮಗಾರಿ ಆರಂಭವಾಗಿ 2 ವರ್ಷ ಕಳೆಯುತ್ತಾ ಬಂದರೂ ಮುಗಿದಿಲ್ಲ. ದಟ್ಟಣೆ ಹೆಚ್ಚಾಗಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

169 ಎ ಕಾಮಗಾರಿಯೂ ವಿಳಂಬ:

ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ 169 ಎ ಮಲ್ಪೆ–ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಆಮೆಗತಿಯಲ್ಲಿ ಸಾಗಿದ್ದು, ಉಡುಪಿಯಿಂದ ಶಿವಮೊಗ್ಗಕ್ಕೆ, ಶಿವಮೊಗ್ಗದಿಂದ ಉಡುಪಿಗೆ ಬರುವ ವಾಹನಗಳಿಗೆ ದೂಳಿನ ಅಭಿಷೇಕವಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಹೋಗುವವರ ಪಾಡಂತೂ ಹೇಳತೀರದು.

ಹೆದ್ದಾರಿ ಕಾಮಗಾರಿಗೆ ಅನುಮೋದನೆ ಸಿಕ್ಕಿ ಬರೋಬ್ಬರಿ 10 ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಕಾಮಗಾರಿಗೆ ತಡೆಕೋರಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದು ಕೂಡ ವಿಳಂಬಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ 169 ಎ ವ್ಯಾಪ್ತಿಯ ಕಾಮಗಾರಿ ಸ್ಥಳ
ರಾಷ್ಟ್ರೀಯ ಹೆದ್ದಾರಿ 169 ಎ ವ್ಯಾಪ್ತಿಯ ಕಾಮಗಾರಿ ಸ್ಥಳ

ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿಯಿಂದ ಸಮಸ್ಯೆ ಗಂಭೀರವಾಗಿದೆ. ರಸ್ತೆ ದಾಟಲು ಪರ್ಯಾಯ ವ್ಯವಸ್ಥೆ ಮಾಡದೆ ಹೆದ್ದರಿ ಬಂದ್ ಮಾಡಿರುವುದರಿಂದ ಶಾಲಾ ಕಾಲೇಜು ಮಕ್ಕಳಿಗೆ ರಸ್ತೆ ದಾಟಲು ಸಮಸ್ಯೆಯಾಗಿದೆ. ನಿತ್ಯವೂ ತಡವಾಗಿ ಕಾಲೇಜುಗಳಿಗೆ ಹೋಗಬೇಕಾಗಿದೆ.

–ನಂದೀಶ್‌ ವಿದ್ಯಾರ್ಥಿ

ಹೆದ್ದಾರಿ ಬದಿಯಲ್ಲಿ ಬಸ್ ನಿಲ್ದಾಣವೇ ಇಲ್ಲವಾಗಿರುವುದರಿಂದ ಹೆದ್ದಾರಿಯಲ್ಲಿ ಬಸ್‌ಗೆ ಕಾಯಬೇಕಾಗಿದೆ. ಕೆಲವು ವಾಹನಗಳೂ ಮೈಮೇಲೆ ಬಂದಂತಹ ಭೀತಿ ಹುಟ್ಟಿಸುತ್ತವೆ

–ಶ್ರೀಕರ್‌ ವಿದ್ಯಾರ್ಥಿ

ಉಡುಪಿ ಕಡೆಯಿಂದ ಬರುವ ವಾಹನಗಳು ಕೆಲವು ಬಾರಿ ಅಂಡರ್‌ಪಾಸ್‌ ಕೆಳಗೆ ಹೋದರೆ ಕೆಲವು ಬಾರಿ ಮೇಲಿನ ಹೆದ್ದಾರಿಯಲ್ಲಿ ಹೋಗುತ್ತವೆ. ಇದರಿಂದ ಗೊಂದಲಗಳು ಉಂಟಾಗುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ

–ಕೃಷ್ಣಪ್ರಸಾದ್‌ ವಾಹನ ಸವಾರ

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಇದ್ದ ಅಡೆತಡೆಗಳು ನಿರ್ಮಾಣವಾಗಿವೆ. ಈ ವಾರವೇ ಕಾಮಗಾರಿ ಆರಂಭವಾಗಲಿದ್ದು ಶೀಘ್ರ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ

–ಕೆ. ವಿದ್ಯಾಕುಮಾರಿ ಜಿಲ್ಲಾಧಿಕಾರಿ

‘ಸಮಸ್ಯೆಗೆ ತಾತ್ಕಾಲಿಕ ಪರಿಹಾರ’

ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಸ್ಥಳಕ್ಕೆ ಎಸ್‌ಪಿ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸರ್ವೀಸ್‌ ರಸ್ತೆ ಬಿಡದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಸಂತೆಕಟ್ಟೆ ಕಲ್ಯಾಣಪುರ ಸೇರಿದಂತೆ ಅಲ್ಲಲ್ಲಿ ಡಿವಿಯೇಷನ್‌ ವ್ಯವಸ್ಥೆ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಳೆಗಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿರುವುದರಿಂದ ಸಾರ್ವಜನಿಕರು ಸವಾರರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮನವಿ ಮಾಡಿದ್ದಾರೆ.

ವಾರಾಹಿ ಯೋಜನೆಗೆ ನಾಲ್ಕು ದಶಕ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಗಿದ್ದ ಅವಧಿಯಲ್ಲಿ ಆರಂಭವಾದ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಉಡುಪಿ ಸ್ವತಂತ್ರ ಜಿಲ್ಲೆಯಾಗಿ 25 ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ರಾಜ್ಯದ ಹಳೆಯ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ವಾರಾಹಿ ಯೋಜನೆ ಕಾಮಗಾರಿ ನಾಲ್ಕು ದಶಕಗಳು ಕಳೆದರೂ ತೆವಳುತ್ತ ಸಾಗಿದೆ. ಕೃಷಿ ಭೂಮಿಗೆ ನೀರುಣಿಸುವ ಹಾಗೂ ಜನರಿಗೆ ಕುಡಿಯುವ ನೀರು ಪೂರೈಸಲು ಆರಂಭವಾದ ಬೃಹತ್ ನೀರಾವರಿ ಯೋಜನೆ ಸಂಪೂರ್ಣ ಕಾರ್ಯಗತವಾಗದೆ ಸಾರ್ವಜನಿಕರು ಹಾಗೂ ರೈತರು ಸಮಸ್ಯೆ ಎದುರಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT