ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪಾರ್ಕಿಂಗ್‌ಗೆ ಜಾಗವಿಲ್ಲ; ಸವಾರರ ಗೋಳು ಕೇಳೋರಿಲ್ಲ

ವಾಹನ ನಿಲುಗಡೆ ಸಮಸ್ಯೆಯಿಂದ ಸಂಚಾರ ದಟ್ಟಣೆ; ನಿರ್ಮಾಣವಾಗದ ಬಹುಹಂತದ ಪಾರ್ಕಿಂಗ್ ಕಟ್ಟಡ
Last Updated 10 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಉಡುಪಿ: ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳಲ್ಲಂತೂ ಸಮಸ್ಯೆ ಹೇಳತೀರದು. ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗ ಹುಡುಕುವುದೇ ಸವಾರರಿಗೆ ಸವಾಲಿನ ಕೆಲಸ. ಪಾರ್ಕಿಂಗ್ ಕಿರಿಕಿರಿಗೆ ಬೇಸತ್ತಿರುವ ಸವಾರರು ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.

ಪ್ರತಿನಿತ್ಯ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಲೇ ಇವೆ. ಆದರೆ, ವಾಹನಗಳ ಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಕೆ.ಎಂ ಮಾರ್ಗ, ಮಸೀದಿ ರಸ್ತೆ, ಸಿಟಿ ಸೆಂಟ್ರಲ್ ಮಾಲ್ ಸುತ್ತಮುತ್ತಲಿನ ರಸ್ತೆ, ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು, ಕೆಎಸ್‌ಆರ್‌ಟಿಸಿ ಬಳಿಯ ರಸ್ತೆ, ಬ್ರಹ್ಮಗಿರಿ, ಗುಂಡಿಬೈಲು ರಸ್ತೆ, ಮಲ್ಪೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ, ಮಣಿಪಾಲದ ಕೆಎಂಸಿ ಆಸ್ಪತ್ರೆ ಎದುರು ಹಾಗೂ ರಾಷ್ಟ್ರೀಯ ಹೆದ್ದಾರಿ 169 ‘ಎ’ನಲ್ಲಿ ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶ ಇಲ್ಲ.

ಈ ರಸ್ತೆಗಳಲ್ಲಿರುವ ಬಹುತೇಕ ಬಹುಮಹಡಿ ವಾಣಿಜ್ಯ ಕಟ್ಟಡಗಳಲ್ಲಿ ಸೂಕ್ತ ಪಾರ್ಕಿಂಗ್ ಸೌಲಭ್ಯಗಳಲ್ಲ. ಪರಿಣಾಮ ಅಗತ್ಯ ವಸ್ತುಗಳನ್ನು ಖರೀದಿಸಲು ನಗರಕ್ಕೆ ಬೈಕ್ ಹಾಗೂ ಕಾರುಗಳನ್ನು ಬರುವವರು ವಾಹನಗಳನ್ನು ‌ನಿಲ್ಲಿಸಲು ಹರಸಾಹಸ ಪಡಬೇಕು. ಸಿಕ್ಕ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ನಗರ ಪ್ರದಕ್ಷಿಣೆ ಹಾಕಬೇಕಾಗಿದೆ.

ಪಾರ್ಕಿಂಗ್ ಕಿರಿಕಿರಿ ಇಂದು ನೆನ್ನೆಯದಲ್ಲ. ಹಲವು ವರ್ಷಗಳಿಂದಲೂ ಕಾಡುತ್ತಿದ್ದರೂ ಸ್ಥಳೀಯ ಆಡಳಿತ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಅತಿವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಕನಿಷ್ಠ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲದಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ಸಾರ್ವಜನಿಕರಾದ ಗಣೇಶ್ ಶೆಣೈ.

ಒಂದು ನಗರಕ್ಕೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಬಹಳ ಮುಖ್ಯ. ವಾಹನಗಳ ನಿಲುಗಡೆಗೆ ಜಾಗ ಇಲ್ಲದಿದ್ದರೆ ಸಂಚಾರ ದಟ್ಟಣೆ ಹೆಚ್ಚುತ್ತದೆ. ಅಪಘಾತಗಳು ಜಾಸ್ತಿಯಾಗುತ್ತವೆ. ಪಾದಚಾರಿಗಳಿಗೆ ಓಡಾಡಲು ಜಾಗ ಇಲ್ಲದಂತಾಗುತ್ತದೆ. ವ್ಯಾಪಾರ, ವಹಿವಾಟಿಗೆ ಅಡ್ಡಿಯಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಬೇಕಾದರೆ, ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಲು ಜಾಗ ಮೀಸಲಿಡಬೇಕು, ಅಥವಾ ಬಹುಮಹಡಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ಶ್ರೀನಿವಾಸ ರಾವ್‌.

ದಶಕಗಳ ಹಿಂದೆ ನಗರ ಹೆಚ್ಚು ಬೆಳೆದಿರಲಿಲ್ಲ. ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಾಗಿರಲಿಲ್ಲ. ಉಡುಪಿಯ ಭೌಗೋಳಿಕತೆ ರಾಜ್ಯದ ಬೇರೆ ಭಾಗಗಳಿಗಿಂತ ಭಿನ್ನವಾಗಿದ್ದು, ನಗರ ವಿಸ್ತಾರವಾಗಿ ಬೆಳೆಯಲು ಹಲವು ಅಡ್ಡಿಗಳಿವೆ. ಹಿಂದೆ, ವಾಹನಗಳನ್ನು ನಿಲ್ಲಿಸಲು ಬಳಸಲಾಗುತ್ತಿದ್ದ ಜಾಗದಲ್ಲಿ ಈಗ ವಾಣಿಜ್ಯ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಹುಡಕಿದರೂ ಖಾಲಿ ಜಾಗ ಸಿಗುತ್ತಿಲ್ಲ ಎನ್ನುತ್ತಾರೆ ಅವರು.

ಬೆಳೆಯುತ್ತಿರುವ ನಗರಕ್ಕೆ ಅಗತ್ಯವಾಗಿ ಪಾರ್ಕಿಂಗ್ ಅವಶ್ಯಕತೆ ಮನಗಂಡು ಹಿಂದಿನ ಜಿಲ್ಲಾಧಿಕಾರಿ ಜಿ.ಜಗದೀಶ್ ಬಹುಹಂತದ ಪಾರ್ಕಿಂಗ್ ವ್ಯವಸ್ಥೆಗಳನ್ನೊಳಗೊಂಡ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲು ಸೂಚಿಸಿದ್ದರು. ನಗರಸಭೆ, ಆರ್‌ಟಿಒ ಹಾಗೂ ಪೊಲೀಸ್‌ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆಯೂ ನಿರ್ದೇಶನ ನೀಡಿದ್ದರು. ಆದರೆ, ಯೋಜನೆ ಮಾತ್ರ ಇನ್ನೂ ಕಾರ್ಯಗತವಾಗಲಿಲ್ಲ.

ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ ವಾಹನಗಳ ನಿಲುಗಡೆಗೆ ಜಾಗ ಮೀಸಲಿಟ್ಟು, ಕಟ್ಟಡ ನಿರ್ಮಾಣವಾದ ನಂತರ ಅನ್ಯ ಉದ್ದೇಶಕ್ಕೆ ಜಾಗ ಬಳಸಿಕೊಂಡರೆ, ಅಂಥವರ ಟ್ರೇಡ್ ಲೈಸೆನ್ಸ್‌ ರದ್ದುಗೊಳಿಸಿ,ಅತಿಕ್ರಮಣ ತೆರವುಗೊಳಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಈ ಆದೇಶ ಕಾರ್ಯಗತವಾಗಿದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆ.

ಕರಾವಳಿ ಜಂಕ್ಷನ್‌ನಿಂದ ಮಣಿಪಾಲದವರೆಗಿನ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಕಾರು, ಬೈಕ್‌ ಹಾಗೂ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗುತ್ತದೆ. ಪರಿಣಾಮ ಯೂ ತಿರುವು ಇರುವ ಕಡೆಗಳಲ್ಲಿ ಸವಾರರು ಪ್ರಯಾಸ ಪಡಬೇಕಾಗಿದೆ. ನಗರದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣದ ಬಳಿಯೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಬಸ್‌ ನಿಲ್ದಾಣಗಳ ಎದುರೇ ನೂರಾರು ವಾಹನಗಳನ್ನು ನಿಲ್ಲಿಸಬೇಕು.

ನಗರಸಭೆಗೆ ಬರುವವರಿಗೂ ವಾಹನಗಳನ್ನು ನಿಲ್ಲಿಸಲು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಚಿತ್ತರಂಜನ್ ಸರ್ಕಲ್‌, ಗೀತಾಂಜಲಿ ಸಿಲ್ಕ್ಸ್‌ ಮಳಿಗೆಯ ಬಳಿ ಹೆಚ್ಚು ವಾಹನಗಳ ದಟ್ಟಣೆ ಇದ್ದು, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ.

‘ಪಾರ್ಕಿಂಗ್ ಜಾಗ ಒತ್ತುವರಿ’

ವಾಣಿಜ್ಯ ಮಳಿಗೆಗಳ ಕೆಳ ಮಹಡಿಯಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಬೇಕು ಎಂಬ ನಿಯಮ ಪಾಲನೆಯಾಗಿಲ್ಲ. ಕೆಲವೇ ಕಟ್ಟಡಗಳಲ್ಲಿ ಮಾತ್ರ ಪಾರ್ಕಿಂಗ್ ಸೌಲಭ್ಯವಿದೆ. ಪರಿಣಾಮ ಗ್ರಾಹಕರು ರಸ್ತೆಯ ಬದಿ, ಖಾಲಿ ಜಾಗದಲ್ಲಿ ಹಾಗೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬೇಕಾಗಿದೆ. ನಗರಸಭೆಯಿಂದ ಕಟ್ಟಡ ಪರವಾನಗಿ ಪಡೆಯುವಾಗ ವಿಧಿಸಿದ್ದ ಷರತ್ತುಗಳ ಪಾಲನೆಯಾಗುತ್ತಿಲ್ಲ ಎಂಬ ಆರೋಪಗಳಿವೆ.

‘ದಿನಬಿಟ್ಟು ದಿನ ವಾಹನ ನಿಲ್ಲಿಸಲು ಪ್ರಸ್ತಾವ’

ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಜಂಟಿಯಾಗಿ ಪರಿಶೀಲನೆ ನಡೆಸಿದ್ದು, ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಗಂಭೀರವಾಗಿರುವ 10 ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ದಿನ ಬಿಟ್ಟು ದಿನ ಬಲ ಹಾಗೂ ಎಡಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಜತೆಗೆ ನಗರದ ಮೂರು ರಸ್ತೆಗಳನ್ನು ಏಕಮುಖ ಸಂಚಾರ ರಸ್ತೆಗಳನ್ನಾಗಿ ಬದಲಿಸುವ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾಗಿದೆ. ಮುಂದೆ ಪ್ರಸ್ತಾವಕ್ಕೆ ಜಿಲ್ಲಾಡಳಿತ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ನಗರಸಭೆ ಎಇಇ ಮೋಹನ್ ರಾಜ್ ತಿಳಿಸಿದರು.

ಜಿಲ್ಲೆಯಲ್ಲಿರುವ ವಾಹನಗಳ ವಿವರ

ದ್ವಿಚಕ್ರ ವಾಹನಗಳು–3,58,401

ಕಾರುಗಳು–67,941

ಬಸ್‌ಗಳು– 1,102

ಪ್ರವಾಸಿ ವಾಹನಗಳು–147

ಆಟೊಗಳು–21,954

ಸರಕು ಸಾಗಣೆ ವಾಹನಗಳು–20,473

ಆಸ್ಪತ್ರೆ ವಾಹನಗಳು–188

ಶಾಲಾ ವಾಹನಗಳು–958

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT