ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅಸಂಘಟಿತ ಕಾರ್ಮಿಕರು ಸ್ವಉದ್ಯೋಗಿಗಳಿಗೂ ಪಿಂಚಣಿ

ತಿಂಗಳಿಗೆ ₹ 3000 ನಿಶ್ಚಿತ ಪಿಂಚಣಿ
Last Updated 2 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಉಡುಪಿ: ಉದ್ಯೋಗ ಭದ್ರತೆ ಇಲ್ಲದ ಅಸಂಘಟಿತ ಕಾರ್ಮಿಕರಿಗೆ ಹಾಗೂ ಸ್ವ ಉದ್ಯೋಗಿಗಳಿಗೆ ಪಿಂಚಣಿ ಸೌಲಭ್ಯ ನೀಡಲು ಸರ್ಕಾರ ಯೋಜನೆ ರೂಪಿಸಿದೆ.

ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ 42 ಕೋಟಿ ಕಾರ್ಮಿಕರಿಂದ ದೇಶದ ಒಟ್ಟು ಆದಾಯದಲ್ಲಿ ಶೇ 50ರಷ್ಟು ಹರಿದು ಬರುತ್ತಿದ್ದರೂ ಅಸಂಘಟಿತ ವಲಯದ ಕಾರ್ಮಿಕರು ಜೀವಿತಾವಧಿಯಲ್ಲಿ ಹಣವನ್ನು ಕೂಡಿಡಲು ಸಾಧ್ಯವಾಗದೆ ಸಂಧ್ಯಾಕಾಲದಲ್ಲಿ ಆರ್ಥಿಕ ಸಂಕಷ್ಠಕ್ಕೆ ಸಿಲುಕುತ್ತಿದ್ದರು.

ಈ ಸಮಸ್ಯೆಗೆ ಪರಿಹಾರವಾಗಿ ಅಸಂಘಟಿತ ಕಾರ್ಮಿಕರು ಹಾಗೂ ಸ್ವ ಉದ್ಯೋಗಿಗಳಿಗೆ ಪಿಂಚಣಿ ಸೌಲಭ್ಯ ನೀಡುವ ಮೂಲಕ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌–ಧನ್‌ (ಪಿಎಂಎಸ್‌ವೈಎ) ವಂತಿಗೆ ಆಧಾರಿತ ಪಿಂಚಣಿ ಯೋಜನೆ ಜಾರಿಗೊಳಿಸಿದೆ. ಯೋಜನೆಯಡಿ 60 ವರ್ಷ ದಾಟಿದ ಫಲಾನುಭವಿಗಳು ಪಿಂಚಣಿ ಪಡೆಯಬಹುದು.

ಯಾರು ಅರ್ಹರು:18ರಿಂದ 40 ವರ್ಷದೊಳಗಿನ ಮಾಸಿಕ ₹ 15,000 ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ಆದಾಯ ತೆರಿಗೆ ಪಾವತಿಸದ ಹಾಗೂ ಇಎಸ್‌ಐ, ಇಪಿಎಫ್, ಎನ್‌ಪಿಎಸ್ ಯೋಜನೆಯ ಫಲಾನುಭವಿಗಳಲ್ಲದ ಅಸಂಘಟಿತ ಕಾರ್ಮಿಕರು ಪಿಎಂಎಸ್‌ವೈಎ ಯೋಜನೆಯ ಲಾಭ ಪಡೆಯಬಹುದು.

ಕಾರ್ಮಿಕರು ಪ್ರತಿ ತಿಂಗಳು ವಂತಿಗೆ ಪಾವತಿ ಮಾಡುವುದರ ಮೂಲಕ 60 ವರ್ಷಗಳ ನಂತರ ವಾರ್ಷಿಕವಾಗಿ (12 ತಿಂಗಳಿಗೆ) ₹ ₹ 36,000ದವರೆಗೂ ಪಿಂಚಣಿ ಪಡೆಯಬಹುದು ಎನ್ನುತ್ತಾರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು.

ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ₹ 3,000 ಪಿಂಚಣಿ ನೀಡುವ ರಾಷ್ಟ್ರೀಯ ಪಿಂಚಣಿ ಯೋಜನೆಯೂ (ವಂತಿಗೆ ಆಧಾರಿತ) ಜಾರಿಯಲ್ಲಿದ್ದು 18-40 ವರ್ಷದೊಳಗಿನ ವಾರ್ಷಿಕ ವಹಿವಾಟು ₹ 1.5 ಕೋಟಿ ಮೀರದ, ಆದಾಯ ತೆರಿಗೆ ಪಾವತಿಸದ, ಇಎಸ್‌ಐ, ಇಪಿಎಫ್, ಎನ್‌ಪಿಎಸ್, ಪಿಎಂಎಸ್‌ವೈಎ, ಪಿಎಂಕೆಎವೈ ಯೋಜನೆಯ ಸೌಲಭ್ಯ ಪಡೆಯದ ಫಲಾನುಭವಿಗಳು ಯೋಜನೆಯ ಲಾಭ ಪಡೆಯಬಹುದು.

ಯೋಜನೆಯಡಿ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿ ಗಿರಣಿ, ಎಣ್ಣೆ ಗಿರಣಿ ಮಾಲೀಕರು, ವರ್ಕ್‌ ಶಾಪ್ ಮಾಲೀಕರು, ಕಮಿಷನ್ ಏಜೆಂಟ್ಸ್, ರಿಯಲ್ ಎಸ್ಟೇಟ್‌ ಬ್ರೋಕರ್ಸ್‌, ಸಣ್ಣ ಹೋಟೇಲ್ ಹಾಗೂ ರೆಸ್ಟೋರೆಂಟ್‌ ಮಾಲೀಕರು ಹಾಗೂ ಸಣ್ಣ ವ್ಯಾಪಾರಗಳಲ್ಲಿ ತೊಡಗಿಸಿಕೊಂಡವರುಮ ಸ್ವಉದ್ಯೋಗಿಗಳು ಫಲಾನುಭವಿಗಳಾಗಬಹುದು.

ಎರಡೂ ಪಿಂಚಣಿ ಯೋಜನೆಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ, ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ನಾಮ ನಿರ್ದೇಶಿತರ ವಿವರಗಳೊಂದಿಗೆ ಮಾಸಿಕ ವಂತಿಗೆ ಪಾವತಿಸುವುದರ ನೋಂದಾಯಿಸಿಕೊಳ್ಳಬಹುದು. ಆರಂಭಿಕ ವಂತಿಗೆಯನ್ನು ನಗದು ರೂಪದಲ್ಲಿ ಪಾವತಿಸಿ, ನಂತರ ವಂತಿಗೆದಾರರ ಬ್ಯಾಂಕ್ ಖಾತೆಗಳಿಂದ ಆಟೋ ಡೆಬಿಟ್ ಮೂಲಕವೂ ಕಟಾವು ಮಾಡಿಸಬಹುದು.

ಪಾವತಿಸಬೇಕಾದ ವಂತಿಗೆಯನ್ನು ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗಿದ್ದು, ಕನಿಷ್ಠ ₹ 55 ರಿಂದ ಗರಿಷ್ಠ ₹ 200 ವಂತಿಗೆ ಇರಲಿದೆ. 60 ವರ್ಷ ಪೂರ್ಣಗೊಂಡ ನಂತರ ಫಲಾನುಭವಿಯು ತಿಂಗಳಿಗೆ ನಿಶ್ಚಿತ ₹ 3,000 ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

‘ಫಲಾನುಭವಿ ಮೃತರಾದರೆ ನಾಮ ನಿರ್ದೇಶಿತರಿಗೆ ಪಿಂಚಣಿ’

ಪಿಂಚಣಿ ಫಲಾನುಭವಿ 60 ವರ್ಷದೊಳಗೆ ಮೃತಪಟ್ಟಲ್ಲಿ ಅಥವಾ ಶಾಶ್ವತ ದುರ್ಬಲ್ಯತೆಯಾಗಿ ವಂತಿಗೆ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಫಲಾನುಭವಿಯ ಸಂಗಾತಿ ಯೋಜನೆಗೆ ಸೇರಬಹುದು. ಅಥವಾ ಪಾವತಿಸಿರುವ ವಂತಿಗೆಯನ್ನು ಬಡ್ಡಿಯೊಂದಿಗೆ ಹಿಂಪಡೆಯಬಹುದು. ಪಿಂಚಣಿ ಬರಲು ಆರಂಭವಾದ ನಂತರ ವಂತಿಗೆದಾರರು ಮೃತರಾದರೆ ಪತ್ನಿ ಅಥವಾ ಪತಿಯು ಪಿಂಚಣಿಯ ಶೇ50ರಷ್ಟು ಹಣವನ್ನು ಪಡೆಯಬಹುದು. ಉಡುಪಿ ಜಿಲ್ಲೆಗೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆಯಡಿ 24,700 ಹಾಗೂ ಎನ್‌ಪಿಎಸ್ ಟ್ರೇರ್ಸ್‌ ಯೋಜನೆಯಡಿ 5,300 ಮಂದಿಯನ್ನು ನೋಂದಣಿ ಮಾಡಿಸಲು ಗುರಿ ಇದ್ದು, ಅರ್ಹ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಸ್ವಯಂ ಉದ್ಯೋಗಿಗಳು, ವ್ಯಾಪಾರಿಗಳು ಸದುಪಯೋಗ ಪಡೆದುಕೊಳ್ಳಬೇಕು ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್.

ಯಾರು ಅಸಂಘಟಿತ ಕಾರ್ಮಿಕರು?

ಗೃಹ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇತರೆ ಉದ್ಯೋಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT