ಗುರುವಾರ , ಜೂನ್ 24, 2021
27 °C
ಸಾರ್ವಜನಿಕರಿಂದ ಉತ್ತಮ ಬೆಂಬಲ

ಲಾಕ್‌ಡೌನ್ ಮಾದರಿ ವೀಕೆಂಡ್ ಕರ್ಫ್ಯೂ: ಸ್ತಬ್ಧವಾದ ಉಡುಪಿ ನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ 2ನೇ ಅಲೆ ತಡೆಗೆ ಕಠಿಣ ಮಾರ್ಗಸೂಚಿಗಳನ್ನು ವಿಧಿಸಿರುವ ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಸಾರ್ವಜನಿಕರ ಬೆಂಬಲ ಉತ್ತಮವಾಗಿತ್ತು. ಕಳೆದ ವರ್ಷದ ಲಾಕ್‌ಡೌನ್ ಪರಿಸ್ಥಿತಿಯನ್ನು ಮತ್ತೆ ನೆನಪಿಸುವಂತಿತ್ತು ಕರ್ಫ್ಯೂ.

ಬೆಳಿಗ್ಗೆ 6ರಿಂದ 10ಗಂಟೆಯವರೆ ತರಕಾರಿ, ಹಣ್ಣು, ಹಾಲು ಖರೀದಿಗೆ ಸಾರ್ವಜನಿಕರಿಗೆ ಅನುಮತಿ ನೀಡಲಾಗಿತ್ತು. ಅದರಂತೆ, ಬೆಳಿಗ್ಗೆ ಮಾರುಕಟ್ಟೆಯಲ್ಲಿ ದಟ್ಟಣೆ ಹೆಚ್ಚಾಗಿರುವುದು ಕಂಡುಬಂತು. ಅಗತ್ಯ ವಸ್ತುಗಳನ್ನು ಖರೀದಿಸಿ ಜನರು ಮನೆಗೆ ವಾಪಾಸಾದರು. 10 ಗಂಟೆಯಾಗುತ್ತಿದ್ದಂತೆ ಇಡೀ ನಗರ ಸ್ಥಬ್ಧವಾದ ಅನುಭವವಾಯಿತು.

ಕರ್ಫ್ಯೂಗೆ ಖಾಸಗಿ ಬಸ್‌ ಮಾಲೀಕರು ಬೆಂಬಲ ನೀಡಿದ್ದರಿಂದ ಸರ್ವೀಸ್ ಹಾಗೂ ನಗರ ಸಾರಿಗೆ ಬಸ್‌ಗಳ ಸಂಚಾರ ಇರಲಿಲ್ಲ. ಸದಾ ಗಿಜಿಗುಡುತ್ತಿದ್ದ ಎರಡೂ ನಿಲ್ದಾಣಗಳಲ್ಲಿ ಮೌನ ಆವರಿಸಿತ್ತು. ಆಟೊ ಹಾಗೂ ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ.

ಮತ್ತೊಂದೆಡೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಕಂಡುಬಂತು. ದೂರದೂರುಗಳಿಗೆ ಬೆರಳೆಣಿಕೆ ಬಸ್‌ಗಳು ಓಡಿದವು. ಮಂಗಳೂರಿಗೆ 2, ಧರ್ಮಸ್ಥಳಕ್ಕೆ 1, ಕುಂದಾಪುರಕ್ಕೆ 1 ಬಸ್ ಸೇರಿ ಬೇರೆ ವಿಭಾಗಗಳ 7 ಬಸ್‌ಗಳು ಉಡುಪಿ ನಿಲ್ದಾಣದ ಮೂಲಕ ಸಂಚರಿಸಿದವು ಎಂದು ಡಿಪೋ ಸಿಬ್ಬಂದಿ ಮಾಹಿತಿ ನೀಡಿದರು.

ಅಡ್ಡಾಡುತ್ತಿದ್ದವರಿಗೆ ಎಚ್ಚರಿಕೆ: ಕರ್ಫ್ಯೂ ಜಾರಿಯಲ್ಲಿದ್ದರೂ ನಗರದಲ್ಲಿ ಬೈಕ್‌ಗಳಲ್ಲಿ ಅಡ್ಡಾಡುತ್ತಿದ್ದವರನ್ನು ತಡೆದ ಪೊಲೀಸರು ಎಚ್ಚರಿಕೆ ನೀಡಿ ಮನೆಗೆ ಕಳಿಸಿದರು. ಕೆಲವರು ಪೊಲೀಸರ ಕಣ್ತಪ್ಪಿಸಿ ನಗರದಲ್ಲಿ ಸುತ್ತುತ್ತಿರುವುದು ಕಂಡುಬಂತು. ಬನ್ನಂಜೆಯ ಸ್ವಾದಿಷ್ಟ್ ರೆಸ್ಟೊರೆಂಟ್‌, ಕಲ್ಸಂಕ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ತಪಾಸಣೆ ಮಾಡಲಾಯಿತು.

ಮೆಡಿಕಲ್ ಶಾಪ್‌ಗಳನ್ನು ಹೊರತುಪಡಿಸಿ ಉಳಿದಲ್ಲ ಅಂಗಡಿ ಮಳಿಗೆಗಳು ಬಂದ್ ಆಗಿದ್ದವು. ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಸದಾ ಗಿಜಿಗುಡುತ್ತಿದ್ದ ನಗರ ಬಿಕೋ ಎನ್ನುತ್ತಿತ್ತು. ಅಗತ್ಯ ವಸ್ತುಗಳನ್ನು ಸಾಗಿಸುವ, ವೈದ್ಯಕೀಯ ಸೇವೆ ನೀಡುವ ವಾಹನಗಳು, ತುರ್ತು ಸೇವೆಗಳ ವಾಹನಗಳು ಮಾತ್ರ ಸಂಚರಿಸಿದವು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶವಿದ್ದರೂ ಹೆಚ್ಚಿನ ಹೋಟೆಲ್‌ಗಳು ತೆರೆದಿರಲಿಲ್ಲ.

ನಿರ್ಗತಿಕರ ಪರದಾಟ

ನೂರಾರು ನಿರ್ಗತಿಕರು ರಸ್ತೆಯ ಬದಿ, ಅಂಗಡಿ ಮುಂಗಟ್ಟುಗಳ ಮುಂದೆ, ನಿರ್ಜನ ಪ್ರದೇಶ ಹಾಗೂ ಉದ್ಯಾನಗಳಲ್ಲಿ ಮಲಗಿದ್ದು ಕಂಡುಬಂತು. ನೆಲೆ ಕಳೆದುಕೊಂಡು ಅಲೆಯುವ ಇವರಲ್ಲಿ ಹೆಚ್ಚಿನವರು ದುಶ್ಚಟಗಳಿಗೆ ಬಲಿಯಾಗಿದ್ದು, ನಿತ್ಯ ಭಿಕ್ಷೆ ಬೇಡಿ ಹೊಟ್ಟೆತುಂಬಿಸಿಕೊಳ್ಳುತ್ತಾರೆ. ಕರ್ಫ್ಯೂನಿಂದಾಗಿ ಭಿಕ್ಷೆಗೂ ಅವಕಾಶ ಇಲ್ಲದೆ ನಿರ್ಗತಿಕರು ಊಟಕ್ಕೆ ಅಲೆಯುವ ಪರಿಸ್ಥಿತಿ ಕಂಡುಬಂತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು