ಗುರುವಾರ , ಮೇ 19, 2022
23 °C
ಕಸ್ತೂರಬಾ ಆಸ್ಪತ್ರೆಯಲ್ಲಿ ಅಂತರ ರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನ ಆಚರಣೆ

ಆರಂಭಿಕ ಹಂತದ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣಮುಖ: ಡಾ.ಶರತ್‌ ರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರತಿ ವರ್ಷ ಜಗತ್ತಿನಾದ್ಯಂತ ಮೂರು ಲಕ್ಷ ಮಕ್ಕಳು, ಭಾರತದಲ್ಲಿ 40 ರಿಂದ 45 ಸಾವಿರ ಮಕ್ಕಳು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಕ್ಕರೆ ಮಕ್ಕಳ ಕ್ಯಾನ್ಸರ್ ಗುಣಪಡಿಸಬಹುದು ಎಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಡೀನ್‌ ಡಾ.ಶರತ್‌ ರಾವ್ ಹೇಳಿದರು. ‌

ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್‌ ಮತ್ತು ರಕ್ತಶಾಸ್ತ್ರ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕ್ಯಾನ್ಸರ್‌ಗೆ ತುತ್ತಾದವರಲ್ಲಿ ಶೇ 80 ರಿಂದ 90 ರಷ್ಟು ಮಂದಿಯ ಕಾಯಿಲೆ ಗುಣವಾಗುತ್ತಿದೆ. ಭಾರತದಲ್ಲಿ ಗುಣಮುಖ ಪ್ರಮಾಣ ಶೇ 50ರ ಒಳಗಿದೆ. ಕಾರಣ ರೋಗಪತ್ತೆ ಹಚ್ಚುವಲ್ಲಿ‌ ಆಗುತ್ತಿರುವ ವಿಳಂಬ ಹಾಗೂ ಸೂಕ್ತ ಚಿಕಿತ್ಸೆ ನೀಡುವ ಕೇಂದ್ರಗಳ ಕೊರತೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ಮಕ್ಕಳಲ್ಲಿ ತೂಕ ಕಡಿಮೆಯಾಗುವುದು, ಮಲಬದ್ಧತೆ, ಮೈಯಲ್ಲಿ ಗಂಟುಗಳು ಕಾಣಿಸುವುದು ಅಥವಾ ಊತ ಕಾಣಿಸಿಕೊಂಡರೆ ನಿರ್ಲಕ್ಷ್ಯ ಸಲ್ಲದು. ತಕ್ಷಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಶರತ್ ರಾವ್ ಸಲಹೆ ನೀಡಿದರು.

ಪ್ರತಿ ವರ್ಷ ಫೆ.15ರಂದು ಅಂತರ ರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ ‘ಉತ್ತಮ ಬದುಕುಳಿಯುವಿಕೆ’ ಆಗಿದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ‘2021ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ಕ್ಯಾನ್ಸರ್ ಅನ್ನು ಪ್ರಮುಖ ರೋಗ ಎಂದು ಗುರತಿಸಿ ಘೋಷಿಸಿದೆ.‌ 2030ರ ಹೊತ್ತಿಗೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಶೇ 60 ರಿಂದ 65ರಷ್ಟು ಕ್ಯಾನ್ಸರ್‌ರೋಗಿಗಳನ್ನು ಗುಣಪಡಿಸುವ ಗುರಿ ಹೊಂದಲಾಗಿದೆ. ಕಸ್ತೂರ ಬಾ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ಅತ್ಯಾಧುನಿಕ ವ್ಯವಸ್ಥೆಗಳು ಇವೆ ಎಂದರು.

ನರ್ಸಿಂಗ್ ಸೇವೆಗಳ ಮುಖ್ಯಸ್ಥರಾದ ಡಾ. ಶುಭ ಸೂರಿ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆ ಮತ್ತು ಆರೈಕೆಯಲ್ಲಿ ದಾದಿಯರ ಸೇವೆ ಬಹು ಮುಖ್ಯ, ಈ ನಿಟ್ಟಿನಲ್ಲಿ ವಿಭಾಗದ ದಾದಿಯರು ಕ್ಯಾನ್ಸರ್ ಆರೈಕೆಗೆ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದರು.

ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಂಯೋಜಕರಾದ ಡಾ. ನವೀನ್ ಎಸ್.ಸಲಿನ್ಸ್ಮ ಮಕ್ಕಳ ಕ್ಯಾನ್ಸರ್ ಮತ್ತು ರಕ್ತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು