ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸಾರ್ವಜನಿಕರ ಪಾಲಿಗೆ ಬಯಲೇ ಶೌಚಾಲಯ

ಉಡುಪಿಯಲ್ಲಿ ಸಮುದಾಯ ಸಾರ್ವಜನಿಕ ಶೌಚಾಲಯಗಳ ಕೊರತೆ, ಬಾಗಿಲು ಮುಚ್ಚಿದ ಟಾಯ್ಲೆಟ್‌ಗಳು
Last Updated 26 ಮಾರ್ಚ್ 2023, 11:29 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲಾಡಳಿತ 2017ರಲ್ಲಿಯೇ ಉಡುಪಿ ಜಿಲ್ಲೆಯನ್ನು ಬಯಲು ಶೌಚ ಮುಕ್ತವಾಗಿ ಘೋಷಣೆ ಮಾಡಿದ್ದರೂ ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯಗಳ ಕೊರತೆಯಿಂದ ಇಂದಿಗೂ ಸಾರ್ವಜನಿಕರು ಮಲ–ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಬೇಕಾಗಿದೆ.

ಬಾಗಿಲು ಮುಚ್ಚಿದ ಶೌಚಾಲಯಗಳು:

‘ಸ್ವಚ್ಛ ಉಡುಪಿ, ಸುಂದರ ಉಡುಪಿ’ ಪರಿಕಲ್ಪನೆಯೊಂದಿಗೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 22 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು ನಿರ್ವಹಣೆಯ ಹೊಣೆಯನ್ನು ಖಾಸಗಿ ಸಂಘ ಸಂಸ್ಥೆಗಳು ಹಾಗೂ ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ.

ಆದರೆ, ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ನಗರಸಭೆ ವ್ಯಾಪ್ತಿಯಲ್ಲಿರುವ ಹಲವು ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಕೆಲವು ಶೌಚಾಲಯಗಳಿಗೆ ಬೀಗ ಜಡಿಯಲಾಗಿದ್ದರೆ, ಇನ್ನೂ ಕೆಲವು ಶೌಚಾಲಯಗಳಿಗೆ ಸಮರ್ಪಕ ನೀರಿನ ವ್ಯವಸ್ಥೆಯೇ ಇಲ್ಲ.

ಎಲ್ಲೆಲ್ಲಿ ಸಮಸ್ಯೆ:

ಕೃಷ್ಣಮಠಕ್ಕೆ ಸಂಪರ್ಕ ಕಲ್ಪಿಸುವ ಬಡಗುಪೇಟೆಯ ಕಾಳಿಂಗ ಮರ್ಧನ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ಸಂಪೂರ್ಣವಾಗಿ ಹಾಳಾಗಿದೆ. ಶೌಚಾಲಯದ ಫಲಕದ ಮೇಲೆ ಬರೆಸಲಾಗಿರುವ ‘ಶುಚಿ ಮತ್ತು ಸ್ವಚ್ಛ’ ಎಂಬ ಪದಕ್ಕೆ ತದ್ವಿರುದ್ಧವಾದ ಸನ್ನಿವೇಷವನ್ನು ಇಲ್ಲಿ ಕಾಣಬಹುದು.

ಶೌಚಾಲಯದ ಒಳ ಪ್ರವೇಶಿಸುತ್ತಿದ್ದಂತೆ ಸಹಿಸಲು ಅಸಾಧ್ಯವಾದಷ್ಟು ದುರ್ವಾಸನೆಯಿಂದ ವಾಕರಿಕೆ ಬಂದಂತಾಗುತ್ತದೆ. ಕಮೋಡ್‌ ಮುರಿದು ಹೋಗಿದ್ದು ಎಲ್ಲೆಡೆ ಮಲ ವಿಸರ್ಜನೆ ಮಾಡಲಾಗಿದೆ. ಮೂತ್ರಾಲಯ ಕಮೋಡ್‌ನಲ್ಲಿ ಮದ್ಯದ ಪಾಕೆಟ್‌ಗಳು ಬಿದ್ದಿವೆ. ವಾಷ್ ಬೇಸನ್‌ ಇದ್ದರೂ ಅದರ ನಳಕ್ಕೆ ನೀರಿನ ಸಂಪರ್ಕ ಇಲ್ಲ.

ಪಕ್ಕದಲ್ಲಿಯೇ ಇರುವ ಮಹಿಳಾ ಶೌಚಾಲಯದ ಸ್ಥಿತಿಯೂ ಭಿನ್ನವಾಗಿಲ್ಲ. ಅಂಗವಿಕಲರ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. 2018ರಲ್ಲಿ ₹ 4.30 ಲಕ್ಷ ವೆಚ್ಚದಲ್ಲಿ ನಗರಸಭೆ ಶೌಚಾಲಯ ನಿರ್ಮಾಣ ಮಾಡಿದ್ದು ನಿರ್ವಹಣೆಯ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ.

ಇ ಶೌಚಾಲಯಗಳ ಸ್ಥಿತಿ ಶೋಚನೀಯ:

ಬಯಲು ಬಹಿರ್ದೆಸೆ ಸಮಸ್ಯೆಗೆ ಪರಿಹಾರವಾಗಿ ಎರಡು ವರ್ಷಗಳ ಹಿಂದೆ ನಗರಸಭೆಯು ಲಕ್ಷಾಂತರ ರೂಪಾಯಿ ವ್ಯಯಿಸಿ ಉಡುಪಿ ನಗರದಲ್ಲಿ 2 ಹಾಗೂ ಮಣಿಪಾಲದಲ್ಲಿ 1 ಎಲೆಕ್ಟ್ರಾನಿಕ್ ಪಬ್ಲಿಕ್ ಟಾಯ್ಲೆಟ್‌ಗಳನ್ನು ನಿರ್ಮಿಸಿದೆ.

ಇವುಗಳ ಪೈಕಿ ಎರಡು ಇ ಟಾಯ್ಲೆಟ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಉಡುಪಿಯ ಖಾಸಗಿ ನಗರ ಸಾರಿಗೆ ನಿಲ್ದಾಣದ ಪಕ್ಕದಲ್ಲಿರುವ ಟಾಯ್ಲೆಟ್‌ ಕಾರ್ಯ ನಿರ್ವಹಿಸುತ್ತಿದ್ದರೂ ಒಳಗೆ ಹೋಗಲು ಸಾಧ್ಯವಿಲ್ಲದಷ್ಟು ದುರ್ವಾಸನೆಯಿಂದ ತುಂಬಿದ್ದು ಯಾರೂ ಬಳಸುವುದಿಲ್ಲ ಎನ್ನುತ್ತಾರೆ ಪಕ್ಕದಲ್ಲಿಯೇ ವ್ಯಾಪಾರ ಮಾಡುತ್ತಿದ್ದ ಮಹಿಳೆ.

ಉಡುಪಿಯ ಬೋರ್ಡ್‌ ಹೈಸ್ಕೂಲ್ ಬಳಿ ಹಾಕಲಾಗಿರುವ ಇಪಿ ಟಾಯ್ಲೆಟ್‌ ಕೆಟ್ಟು ವರ್ಷವಾಗಿದೆ. ಕನಿಷ್ಠ ಶೌಚಾಲಯ ದುರಸ್ಥಿಯಲ್ಲಿದೆ ಎಂಬ ಫಲಕವನ್ನೂ ಇಲ್ಲಿ ಹಾಕಲಾಗಿಲ್ಲ. ಪರಿಣಾಮ ಸಾರ್ವಜನಿಕರು ₹ 5 ನಾಣ್ಯವನ್ನು ಇ ಟಾಯ್ಲೆಟ್‌ನ ಒಳಗೆ ಹಾಕುತ್ತಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ. ಮಣಿಪಾಲದಲ್ಲಿ ಹಾಕಲಾಗಿರುವ ಇ ಟಾಯ್ಲೆಟ್‌ಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು ಬಾಗಿಲು ಹಾಕಲಾಗಿದೆ.

ಉದ್ಯಾನದ ಶೌಚಾಲಯವೂ ಬಂದ್:

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಭೇಟಿ ನೀಡಿರುವ ಅಜ್ಜರಕಾಡು ಉದ್ಯಾನದಲ್ಲಿರುವ ಶೌಚಾಲಯವೂ ಬಂದ್ ಆಗಿದೆ. ಪರಿಣಾಮ ಪ್ರತಿನಿತ್ಯ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರು, ಮಕ್ಕಳ ಉದ್ಯಾನಕ್ಕೆ ಬರುವ ಮಕ್ಕಳಿಗೆ ತೊಂದರೆಯಾಗಿದೆ. ಕೆಲವರು ಜಲಬಾಧೆ ತಾಳಲಾರದೆ ಅನಿವಾರ್ಯವಾಗಿ ಉದ್ಯಾನದಲ್ಲಿಯೇ ಮೂತ್ರ ವಿಸರ್ಜಿಸುತ್ತಿದ್ದಾರೆ.

ಉದ್ಯಾನದಲ್ಲಿ ಸ್ಕೇಟಿಂಗ್ ಅಂಗಳವಿದ್ದು ಪ್ರತಿನಿತ್ಯ ಅಭ್ಯಾಸಕ್ಕೆ ಬರುವ ಮಕ್ಕಳಿಗೆ ಸಮಸ್ಯೆ ಎದುರಾಗಿದೆ. ಬಾಲಕಿಯರು, ಯುವತಿಯರು ತೀವ್ರ ಮುಜುಗರದ ಸನ್ನಿವೇಶ ಎದುರಿಸಬೇಕಾಗಿದೆ. ಮಲ–ಮೂತ್ರ ವಿಸರ್ಜನೆ ಮಾಡಬೇಕಾದರೆ ದೂರದಲ್ಲಿರುವ ಭುಜಂಗ ಉದ್ಯಾನಕ್ಕೆ ತೆರಳಬೇಕು ಎನ್ನುತ್ತಾರೆ ಪೋಷಕರಾದ ಸುಕೃತಾ.

ಸಮುದಾಯ ಶೌಚಾಲಯಗಳ ಕೊರತೆ:

ಉಡುಪಿ ಹಾಗೂ ಮಣಿಪಾಲದಲ್ಲಿ ಸಮುದಾಯ ಶೌಚಾಲಯಗಳ ಕೊರತೆ ಎದ್ದು ಕಾಣುತ್ತಿದೆ. ಪರಿಣಾಮ ನಿತ್ಯದ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುವ ಸಾರ್ವಜನಿಕರು ಬಸ್ ನಿಲ್ದಾಣ, ಹೋಟೆಲ್‌ಗಳು, ವಾಣಿಜ್ಯ ಮಳಿಗೆ ಹಾಗೂ ಮಾಲ್‌ಗಳಿಗೆ ತೆರಳಿ ಮಲ–ಮೂತ್ರ ಮಾಡಬೇಕಾಗಿದೆ.

ಉಡುಪಿಯಲ್ಲಿ ಹೊರ ಜಿಲ್ಲೆಗಳಿಂದ ಬಂದಿರುವ ‌ನಿರ್ಗತಿಕರು, ಭಿಕ್ಷುಕರು, ವ್ಯಸನಿಗಳು ಹೆಚ್ಚಾಗಿದ್ದು ಬಹುತೇಕರು ಸಮುದಾಯ ಶೌಚಾಲಯಗಳ ಕೊರತೆಯಿಂದಾಗಿ ಬಯಲಿನಲ್ಲಿಯೇ ಮಲಮೂತ್ರ ಮಾಡುತ್ತಿದ್ದಾರೆ. ಉಡುಪಿಯ ಸಿಟಿ ಬಸ್ ನಿಲ್ದಾಣದ ಎದುರಿಗಿರುವ ಖಾಲಿ ನಿವೇಶನಗಳು ಮೂತ್ರದ ವಾಸನೆಯಿಂದ ಗಬ್ಬು ನಾರುತ್ತಿವೆ.

ಉಚ್ಚಿಲದಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ:

ಕಾಪು ತಾಲ್ಲೂಕಿನ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಬಡಾ ಉಚ್ಚಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಉಚ್ಚಿಲಕ್ಕೆ ಬರುವ ಪ್ರವಾಸಿಗರು ಹೆಚ್ಚಾಗಿದ್ದಾರೆ.

ಆದರೆ ಇಲ್ಲಿನ ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಶೌಚಾಲಯ ಇಲ್ಲದೆ ಬಸ್ಸಿಗಾಗಿ ಕಾಯುವವರು ಬಯಲಿನಲ್ಲಿ ವಿಸರ್ಜನೆ ಮಾಡಬೇಕಾಗಿದೆ. ಈ ಬಗ್ಗೆ ಹಲವು ಭಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

6,000 ಜನರಿಗೆ ಒಂದು ಶೌಚಾಲಯ !

2011ರ ಜನಗಣತಿಯ ಪ್ರಕಾರ ಉಡುಪಿ ನಗರದಲ್ಲಿ 1,25,306 ಜನಸಂಖ್ಯೆ ಇದ್ದು, ಲಭ್ಯವಿರುವ ಸಾರ್ವಜನಿಕ ಶೌಚಾಲಯಗಳು ಕೇವಲ 22. ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು ತಲಾ ಒಂದರಂತೆಯೂ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಸುಂದರ ಕಡಲ ಕಿನಾರೆಗಳು, ಪ್ರವಾಸಿ ತಾಣಗಳನ್ನು ಹೊಂದಿರುವ ಉಡುಪಿ ಜಿಲ್ಲೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಸಮುದಾಯ ಶೌಚಾಲಯಗಳ ಕೊರತೆಯಿಂದ ಮಲ ಮೂತ್ರ ವಿಸರ್ಜನೆಗೆ ಸಮಸ್ಯೆ ಎದುರಿಸುವಂತಾಗಿದೆ.

‘ಪರಿಶೀಲಿಸಿ ಕ್ರಮ’

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಯ, ಎಲೆಕ್ಟ್ರಾನಿಕ್ ಪಬ್ಲಿಕ್ ಟಾಯ್ಲೆಟ್‌ಗಳ ನಿರ್ವಹಣೆಯ ಹೊಣೆಯನ್ನು ಖಾಸಗಿ ಸಂಸ್ಥೆ, ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ. ಸಾರ್ವಜನಿಕರಿಂದ ಸಂಗ್ರಹಿಸುವ ಹಣದಿಂದ ಶೌಚಾಲಯಗಳನ್ನು ನಿರ್ವಹಣೆ ಮಾಡಬೇಕು. ನಗರದಲ್ಲಿರುವ ಶೌಚಾಲಯಗಳ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸಿ ಸಮಸ್ಯೆ ಕಂಡುಬಂದರೆ ತಕ್ಷಣ ಪರಿಹರಿಸಲಾಗುವುದು.

–ರಮೇಶ್ ನಾಯಕ್‌, ನಗರಸಭೆ ಪೌರಾಯುಕ್ತರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT