ಶುಕ್ರವಾರ, ಫೆಬ್ರವರಿ 26, 2021
25 °C
ವಿದೇಶ, ಹೊರ ರಾಜ್ಯಗಳಿಂದ ಬಂದವರಿಗೆ ವ್ಯವಸ್ಥೆ

ಶಾಲಾ, ಕಾಲೇಜು, ಹೋಟೆಲ್‌ಗಳಲ್ಲಿ ಕ್ವಾರಂಟೈನ್‌: ಜಿಲ್ಲಾಧಿಕಾರಿ ಜಿ.ಜಗದೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹೊರ ದೇಶಗಳು ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಬರುವವರಿಗೆ ಕ್ವಾರಂಟೈನ್ ಮಾಡಲು ಖಾಸಗಿ ಶಾಲಾ ಮತ್ತು ಕಾಲೇಜುಗಳು ತಮ್ಮ ಒಡೆತನದ ಕಟ್ಟಡಗಳು ಮತ್ತು ಹಾಸ್ಟೆಲ್‌ಗಳನ್ನು ಜಿಲ್ಲಾಡಳಿತಕ್ಕೆ ಬಿಟ್ಟುಕೊಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಶುಕ್ರವಾರ ರಜತಾದ್ರಿಯ ಸಭಾಂಗಣದಲ್ಲಿ ನಡೆದ ಸರ್ಕಾರಿ ಮತ್ತು ಖಾಸಗಿ ಶಾಲಾ ಮುಖ್ಯೋಪಾಧ್ಯಾಯರ ಹಾಗೂ ವಸತಿ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.

ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವವರಿಂದ ಸಂಭಾವ್ಯ ಸೋಂಕು ಹರಡುವಿಕೆ ತಪ್ಪಿಸುವುದು ಸವಾಲಿನ ಕೆಲಸ. ಅದಕ್ಕಾಗಿ ಹೊರಗಿನಿಂದ ಬರುವವರಿಗೆ ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯ ಸರ್ಕಾರಿ, ಖಾಸಗಿ ಹಾಸ್ಟೆಲ್‌ಗಳು, ಶಾಲಾ ಕಾಲೇಜುಗಳು, ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಜಿಲ್ಲಾಡಳಿತ ಸೂಚನೆ ನೀಡಿದ ಕೂಡಲೇ ಸಂಬಂಧಪಟ್ಟ ಸಂಸ್ಥೆಗಳು ಸಬೂಬು ನೀಡದೆ ಕಟ್ಟಡಗಳನ್ನು ಜಿಲ್ಲಾಡಳಿತಕ್ಕೆ ಬಿಟ್ಟು ಕೊಡಬೇಕು. ಕಟ್ಟಡಕ್ಕೆ ಚಿಕ್ಕ ದುರಸ್ತಿಗಳಿದ್ದರೆ ತಕ್ಷಣ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಕ್ವಾರಂಟೈನ್‌ಗೆ ಬಳಸುವ ಶಾಲಾ, ಕಾಲೇಜು ಕಟ್ಟಡಗಳನ್ನು ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಸಂಪೂರ್ಣವಾಗಿ ಶುಚಿಗೊಳಿಸಲಾಗುವುದು. ನಂತರ ಸಂಸ್ಥೆಗಳಿಗೆ ಬಿಟ್ಟುಕೊಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಗೆ ಹೊರರಾಜ್ಯಗಳಿಂದ ಬರಲು ಪ್ರಥಮ ಹಂತದಲ್ಲಿ 6,000 ಮಂದಿ ನೋಂದಾಯಿಸಿಕೊಂಡಿದ್ದು, ಸರ್ಕಾರ ಅನುಮತಿ ನೀಡಿದ ಕೂಡಲೆ ಜಿಲ್ಲೆಗೆ ಬರಲಿದ್ದಾರೆ. ಬಂದವರನ್ನು ಜಿಲ್ಲೆಯ ಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿ, ಪೊಲೀಸ್‌ ಭದ್ರತೆಯಲ್ಲಿ ಸಂಬಂಧಪಟ್ಟ ತಾಲ್ಲೂಕುಗಳ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಬೇಕು.

ಆರೋಗ್ಯ ಪರೀಕ್ಷೆಯಲ್ಲಿ ರೋಗ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲು ಮಾಡಬೇಕು. ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ಲ್ಲಿರಲು ಬಯಸುವವರು ವಾಸ್ತವ್ಯ ವೆಚ್ಚವನ್ನು ಭರಿಸಬೇಕು. ಜಿಲ್ಲಾಡಳಿತ ವ್ಯವಸ್ಥೆ ಮಾಡುವ ಕೇಂದ್ರಗಳಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇರಲಿದೆ ಎಂದರು.

ವಿದೇಶಗಳಿಂದ ಬರುವವರನ್ನು ಪ್ರತ್ಯೇಕವಾಗಿರಿಸಲು ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿದೇಶಗಳು ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ 20,000 ಜನ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಜಿಲ್ಲಾ ಕೊರೊನಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ 12 ಚೆಕ್‌ಪೋಸ್ಟ್‌ಗಳಿದ್ದು, ಹೊರಗಿನಿಂದ ಬರುವವರಿಗೆ ಅಲ್ಲಿ ಆರೋಗ್ಯ ತಪಾಸಣೆ ನಡೆಸಿಯೇ ಪ್ರವೇಶ ನೀಡಲಾಗುತ್ತಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯರುವ ಶಾಲೆ, ಕಾಲೇಜು, ಹಾಸ್ಟೆಲ್‌ ಹಾಗೂ ಹೋಟೆಲ್‌ಗಳ ವಿವರಗಳನ್ನು ಸಂಗ್ರಹಿಸಿ. ಅಗತ್ಯವಿರುವೆಡೆ ಮೂಲಸೌಕರ್ಯಗಳನ್ನು ಒದಗಿಸಿ. ಜಿಲ್ಲಾಡಳಿತ ಸೂಚಿಸಿದ ಕೂಡಲೇ ಕ್ವಾರಂಟೈನ್ ಕೇಂದ್ರ ತೆರೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿಎಚ್‌ಒ ಡಾ.ಸುದೀರ್ ಚಂದ್ರ ಸೂಡಾ, ಡಿಡಿಪಿಐ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು