ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಜನಪ್ರತಿನಿಧಿಗಳಿಗಾಗಿ ಪರಿಷತ್‌ನಲ್ಲಿ ಧ್ವನಿ ಎತ್ತುವೆ: ರಾಜು ಪೂಜಾರಿ ಸಂದರ್ಶನ

ನವೀನ್‌ ಕುಮಾರ್‌ ಜಿ.
Published : 19 ಅಕ್ಟೋಬರ್ 2024, 7:40 IST
Last Updated : 19 ಅಕ್ಟೋಬರ್ 2024, 7:40 IST
ಫಾಲೋ ಮಾಡಿ
Comments
ಪ್ರ

ಈ ಚುನಾವಣೆಯಲ್ಲಿ ಜನಪ್ರತಿನಿಧಿಗಳೇ ಮತದಾರರು. ಪ್ರತಿಯೊಬ್ಬರ ಭೇಟಿಗೆ ಯಾವ ರೀತಿ ಯೋಜನೆ ರೂಪಿಸಿಕೊಂಡಿದ್ದೀರಿ ?

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಿಗೂ ಭೇಟಿ ನೀಡಿ ಸಾಧ್ಯವಾದಷ್ಟು ಮತದಾರರನ್ನು ಭೇಟಿಯಾಗಿ ಮತಯಾಚಿಸಿದ್ದೇನೆ. ಆರು ಸಾವಿರದಷ್ಟಿರುವ ಮತದಾರರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದ ಕಾರಣ ಎಲ್ಲಾ ಮತದಾರರಿಗೂ ಮೊಬೈಲ್‌ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಮತ ನೀಡುವಂತೆ ಮನವಿ ಮಾಡಿದ್ದೇನೆ.

ಪ್ರ

ನೀವು ಆಯ್ಕೆಯಾದರೆ ಮೇಲ್ಮನೆಯ ಒಬ್ಬ ಸಮರ್ಥ ಜನಪ್ರತಿನಿಧಿಯಾಗಲು ಏನೆಲ್ಲ ಯೋಜನೆ ರೂಪಿಸಿಕೊಂಡಿರುವಿರಿ ?

ಗ್ರಾಮ ಪಂಚಾಯಿತಿ ಎಂದರೆ ಗ್ರಾಮ ಸರ್ಕಾರ. ಎಲ್ಲಾ ಜನರು ತಮ್ಮ ಸಮಸ್ಯೆಗಳನ್ನು ಮೊದಲು ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತರುತ್ತಾರೆ. ಆದ್ದರಿಂದ ನಾನು ಆಯ್ಕೆಯಾದರೆ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕಾರ್ಯ ನಿರ್ವಹಿಸುವೆ. ಎಲ್ಲಾ ಸಮಸ್ಯೆಗಳು ಗ್ರಾಮ ಸರ್ಕಾರ ಮಟ್ಟದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ.

ಪ್ರ

ಯಾಕಾಗಿ ನಿಮನ್ನು ಆಯ್ಕೆ ಮಾಡಬೇಕು ಅನ್ನುತ್ತೀರಿ ?

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ವ್ಯವಸ್ಥೆಗಳಲ್ಲೂ ನಾನು ಕೆಲಸ ಮಾಡಿದ್ದೇನೆ. ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆ, ಅವರಿಗೂ ಜನರಿಗೂ ಇರುವ ಸಂಪರ್ಕ, ಅವರು ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದನೆ ಮಾಡುತ್ತಾರೆ ಎಂಬ ಸಂಪೂರ್ಣ ಅರಿವು ನನಗಿದೆ. ಆದ್ದರಿಂದ ನಾನು ಆಯ್ಕೆಯಾದರೆ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗಾಗಿ ಪರಿಷತ್‌ನಲ್ಲಿ ಧ್ವನಿ ಎತ್ತುತ್ತೇನೆ.

ಪ್ರ

ನಿಮಗೆ ಟಿಕೆಟ್ ದೊರೆಯುವಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡಿದೆಯಾ ?

ಮೂವತ್ತೈದು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಅದನ್ನು ಗುರುತಿಸಿ ಪಕ್ಷವು ನನಗೆ ಟಿಕೆಟ್‌ ನೀಡಿದೆ ಎಂದು ಭಾವಿಸಿದ್ದೇನೆ. ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದರಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡಿದೆ ಎಂದು ನನಗೆ ಅನ್ನಿಸಿಲ್ಲ. ಎಲ್ಲಾ ಜಾತಿಯ ಮತದಾರರೂ ನನಗೆ ಬೆಂಬಲ ಸೂಚಿಸಿದ್ದಾರೆ.

ಪ್ರ

ಕ್ಷೇತ್ರ ವ್ಯಾಪ್ತಿಯಲ್ಲಿ ನೀವು ಗುರುತಿಸಿರುವ ಸಮಸ್ಯೆಗಳು ಏನು ?

ಕೆಲವೊಮ್ಮೆ ಅನುದಾನಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಇದರಿಂದ ಪಂಚಾಯಿತಿಗಳ ಕಾರ್ಯಕ್ರಮಗಳು ಬೇಗನೆ ಅನುಷ್ಠಾನಗೊಳ್ಳುವುದಿಲ್ಲ. ಅದಕ್ಕೆ ಬೇರೆ ಬೇರೆ ತಾಂತ್ರಿಕ ಕಾರಣಗಳಿರುತ್ತವೆ. ವಿಳಂಬಕ್ಕೆ ಮಾಹಿತಿ ಕೊರತೆಯೂ ಕಾರಣವಾಗುತ್ತದೆ.

ಪ್ರ

ಗೆದ್ದರೆ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ?

ಪಂಚಾಯಿತಿ ಮಟ್ಟದಲ್ಲಿ ರಸ್ತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಮೊದಲ ಆದ್ಯತೆ ನೀಡುತ್ತೇನೆ.

ಪ್ರ

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನೀವು ಅನುಭವಿ, ಇದು ಹೇಗೆ ಸಹಾಯವಾಗಬಹುದು?

ಸ್ಥಳೀಯಾಡಳಿತ ಸಂಸ್ಥೆಗಳ ಸಂಪೂರ್ಣ ಅರಿವು ಇರುವುದರಿಂದ ಅಲ್ಲಿನ ಕುಂದು ಕೊರತೆಗಳನ್ನು ಪರಿಹರಿಸಲು ವೇದಿಕೆ ಸಿಕ್ಕಿದರೆ ಅದಕ್ಕಾಗಿ ಶ್ರಮಿಸುತ್ತೇನೆ. ಮತದಾರರಿಗೂ ಇದು ಗೊತ್ತಿರುವುದರಿಂದ ಅವರು ಬೆಂಬಲಿಸುತ್ತಾರೆಂಬ ಪೂರ್ಣ ವಿಶ್ವಾಸ ನನಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT