ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಕ್ಕಾಗಿ ಮೊರೆ ಹೋದವರ ವಿರುದ್ಧವೇ ತನಿಖೆ: ಆತಂಕಕಾರಿ

ತೀಸ್ತಾ ಸೆಟಲ್ವಾಡ್‌, ಶ್ರೀಕುಮಾರ್ ಬಂಧನ ಖಂಡಿಸಿ ಸಹಬಾಳ್ವೆ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
Last Updated 28 ಜೂನ್ 2022, 14:44 IST
ಅಕ್ಷರ ಗಾತ್ರ

ಉಡುಪಿ: ಸಾಂವಿಧಾನಿಕ ಮಾರ್ಗದಲ್ಲಿ ನ್ಯಾಯ ಪಡೆಯಬೇಕು ಎಂಬ ಉದ್ದೇಶದಿಂದ ಸಿಜೆಪಿ ಸಂಸ್ಥೆಯ ಮೂಲಕ ಕಾನೂನು ಹೋರಾಟ ನಡೆಸುತ್ತಿದ್ದ ತೀಸ್ತಾ ಸೆಟಲ್ವಾಡ್‌ ಬಂಧನ ಖಂಡನೀಯ ಎಂದು ಸಾಮಾಜಿಕ ಹೋರಾಟಗಾರ ಕೆ.ಫಣಿರಾಜ್ ಅಭಿಪ್ರಾಯಪಟ್ಟರು.

ತೀಸ್ತಾ ಸೆಟಲ್ವಾಡ್‌ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಶ್ರೀಕುಮಾರ್ ಬಂಧನ ಖಂಡಿಸಿ ಸಹಬಾಳ್ವೆ ಉಡುಪಿ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕೆಳಹಂತದ ನ್ಯಾಯಾಲಗಳು ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸುವುದು ಹಾಗೂ ವಜಾಗೊಳಿಸುವುದು ಸಾಮಾನ್ಯ. ಆದರೆ, ಮೊದಲ ಬಾರಿಗೆ ಕೋರ್ಟ್‌ಗೆ ಪ್ರಕರಣ ತಂದ ದೂರುದಾರರ ವಿರುದ್ಧವೇ ತನಿಖೆಗೆ ಆದೇಶಿಸುವ ತೀರ್ಪು ಹೊರಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಸೇರಿದಂತೆ ಗುಜರಾತ್‌ನಲ್ಲಿ ನಡೆದ ಗಲಭೆಗಳ ಹಿಂದೆ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರ 60 ಅಧಿಕಾರಗಳ ಕೈವಾಡವಿದೆ ಎಂದು ಜಕಿಯ ಜಫ್ರಿ ಎಂಬುವರು ಸಿಟಿಜನ್ ಫಾರ್‌ ಜಸ್ಟೀಸ್‌ ಅಂಡ್ ಪೀಸ್‌ ಸಂಸ್ಥೆಯ ಕಾನೂನು ನೆರವು ಪಡೆದು ಕಾನೂನು ಹೋರಾಟ ನಡೆಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿ ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿತ್ತು. ಎಸ್‌ಐಟಿ ವರದಿಯನ್ನು ತಿರಸ್ಕರಿಸಬೇಕು ಎಂದು ಜಕಿಯಾ ಜಫ್ರಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಎಸ್‌ಐಟಿ ಅಂತಿಮ ವರದಿಯನ್ನು ಎತ್ತಿಹಿಡಿದು, ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿ ವಜಾಗೊಳಿಸುವುದು ಕಾನೂನು ಪ್ರಕ್ರಿಯೆಯ ಭಾಗ. ಆದರೆ, ಪ್ರಕರಣದಲ್ಲಿ ಕಾನೂನು ನೆರವು ನೀಡಿದ ಸಿಜೆಪಿ ಸಂಸ್ಥೆಯ ಕಾರ್ಯದರ್ಶಿ ತೀಸ್ತಾ ಸೆಟಲ್ವಾಡ್‌ ಹಾಗೂ ಪ್ರಕರಣದಲ್ಲಿ ಪ್ರಮುಖ ಹೇಳಿಕೆ ನೀಡಿರುವ ಗುಜರಾತ್ ಮಾಜಿ ಐಪಿಎಸ್‌ ಅಧಿಕಾರಿ ಶ್ರೀಕುಮಾರ್ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಆದೇಶ ನೀಡಿರುವುದು ಮಾನವ ಹಕ್ಕುಗಳ ಹೋರಾಟಗಾರರಿಗೆ ದಿಗ್ಭ್ರಮೆ ಮೂಡಿಸಿದೆ ಎಂದರು.

ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾದ ಮರುದಿನವೇ ಸಂತ್ರಸ್ತರಿಗೆ ಕಾನೂನು ನೆರವು ನೀಡಿದ ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ತೀಸ್ತಾ ಸೆಟಲ್ವಾಡ್ ಬಂಧನ ಖಂಡನೀಯ. ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ಪಡೆಗೆ ವಹಿಸಿರುವುದು ಆತಂಕಕಾರಿ. ತೀಸ್ತಾ ವಿರುದ್ಧ ಯೂಪಾ ಕಾಯ್ದೆ ಪ್ರಯೋಗಿಸಿ ಜೈಲಿನಲ್ಲಿಡುವ ಹುನ್ನಾರ ನಡೆಯುತ್ತಿದೆ ಎಂದು ಫಣಿರಾಜ್ ಆರೋಪಿಸಿದರು.

ಕಾರ್ಮಿಕ ಸಂಘಟನೆಯ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ತೀಸ್ತಾ ಸೆಟಲ್ವಾಡ್ ಬಂಧನ ನೋಡಿದರೆ ನ್ಯಾಯಾಲಯಗಳು ಸಾರ್ವಜನಿಕರ ರಕ್ಷಣೆಗೆ ಧಾವಿಸಲು ಸಾಧ್ಯವೇ ಎಂಬ ಅನುಮಾನ ಕಾಡುತ್ತಿದೆ. ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ದಾಳಿಯ ಆತಂಕ ಎದುರಾಗಿದೆ. ಸರ್ಕಾರ ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಸಸಂ ಮುಖಂಡ ಸುಂದರ್ ಮಾಸ್ತರ್‌, ಸಹಬಾಳ್ವೆ ಸಂಘಟನೆಯ ಅಮೃತ್ ಶೆಣೈ, ಮುಖಂಡರಾದ ರಮೇಶ್ ಕಾಂಚನ್, ಇದ್ರೀಸ್ ಹೂಡೆ, ವೆರೊನಿಕಾ ಕರ್ನೆಲಿಯೊ, ನಾಗೇಶ್ ಕುಮಾರ್ ಉದ್ಯಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT