ಶನಿವಾರ, ನವೆಂಬರ್ 26, 2022
24 °C
ಪ್ರವಾಸಿಗರ ಸೆಳೆಯಲು ಸಜ್ಜಾದ ದ್ವೀಪ: ಪರಿಸರ ಪೂರಕ ಚಟುವಟಿಕೆಗಳಿಗೆ ಆದ್ಯತೆ

ಸಿಂಗಾರಗೊಂಡ ಸೇಂಟ್ ಮೇರಿಸ್ ಐಲ್ಯಾಂಡ್

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಪರೂಪದ ಜೀವ ವೈವಿಧ್ಯತೆ ಹಾಗೂ ವಿಶಿಷ್ಟ ಭೌಗೋಳಿಕ ಪರಿಸರ ಹೊಂದಿರುವ ಮಲ್ಪೆಯ ಪ್ರಸಿದ್ಧ ಸೇಂಟ್ ಮೇರಿಸ್ ಐಲ್ಯಾಂಡ್‌ ಸಿಂಗಾರಗೊಂಡಿದ್ದು ಪ್ರವಾಸಿಗರಿಗೆ ಮುಕ್ತವಾಗಿದೆ.

ದ್ವೀಪದಲ್ಲಿ ಪರಿಸರಕ್ಕೆ ಪೂರಕವಾದ ಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿದ್ದು ಪ್ರವಾಸಿಗರಿಗೆ ವಿಭಿನ್ನ ಅನುಭವ ಕಟ್ಟಿಕೊಡಲು ತಯಾರಿಗಳು ನಡೆದಿವೆ. ದ್ವೀಪಕ್ಕೆ ಭೇಟಿ ನೀಡುವವರಿಗೆ ಮೋಜು, ಮಸ್ತಿ, ಮನರಂಜನೆಯ ಜತೆಗೆ ಪರಿಸರ ಕಾಳಜಿ, ಪರಿಸರ ಸ್ನೇಹಿ ವಸ್ತುಗಳ ಮರು ಬಳಕೆ, ಇಂಗಾಲದ ಪ್ರಮಾಣ ತಗ್ಗಿಸುವಿಕೆಯ ಕುರಿತು ಅರಿವು ಮೂಡಿಸಲು ದ್ವೀಪದಲ್ಲಿ ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸಿ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಲಾಗಿದೆ.

ದ್ವೀಪಕ್ಕೆ ಬಂದಿಳಿಯುತ್ತಿದ್ದಂತೆ ಅಡಿಕೆ ಹಾಗೂ ತೆಂಗಿನ ಮರಗಳು ಹಾಗೂ ಒಣಗಿದ ಗರಿಗಳನ್ನು ಬಳಸಿ ನಿರ್ಮಿಸಿರುವ ಕಮಾನು ಪ್ರವಾಸಿಗರಿಗೆ ಸ್ವಾಗತ ಕೋರಲಿದೆ. ಒಳಗೆ ದ್ವೀಪದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಮಳೆಗಾಲದಲ್ಲಿ ದ್ವೀಪದಲ್ಲಿ ಸಂಗ್ರಹವಾಗಿದ್ದ 110 ಟನ್‌ ತ್ಯಾಜ್ಯ ಹೆಕ್ಕಿ ವಿಲೇವಾರಿ ಮಾಡಲಾಗಿದ್ದು, 300 ಮೀಟರ್ ಉದ್ಧದ ವಾಕಿಂಗ್ ಅಂಗಣ, ಪ್ರತ್ಯೇಕ ಶೌಚಾಲಯ ಹಾಗೂ ಬಟ್ಟೆ ಬದಲಿಸುವ ಕೊಠಡಿಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ದ್ವೀಪದ ಉತ್ತರ ಪೂರ್ವ ವಲಯಲ್ಲಿ ಪ್ರವಾಸಿಗರಿಗೆ ಈಜಲು ಸುರಕ್ಷಿತವಾದ 110 ಮೀಟರ್ ಉದ್ದ ಹಾಗೂ 100 ಮೀಟರ್ ಅಗಲವಾದ ಕಿನಾರೆಯನ್ನು ಗುರುತಿಸಲಾಗಿದೆ. ಪ್ರವಾಸಿಗರ ಚಟುವಟಿಕೆಗಳ ಮೇಲೆ ಕಣ್ಣಿಡಲು ನಾಲ್ಕು ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗುತ್ತಿದೆ.

5 ಅಪಾಯಕಾರಿ ಜಾಗಗಳನ್ನು ಗುರುತಿಸಿ ಪ್ರವಾಸಿಗರು ಇಳಿಯದಂತೆ ಬ್ಯಾಡಿಕೇಡ್ ಸಹಿತ ಎಚ್ಚರಿಕೆಯ ಫಲಕ ಹಾಗೂ ಕೆಂಪು ಬಣ್ಣದ ಬಾವುಟಗಳನ್ನು ನೆಡಲಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಅನುಕೂಲವಾಗುವಂತೆ 3 ಸೆಲ್ಫಿ ಸ್ಪಾಟ್‌ಗಳನ್ನು ನಿರ್ಮಿಸಲಾಗಿದ್ದು, ಇನ್ನೂ 4 ಕಡೆ ಸೆಲ್ಫಿ ಪಾಯಿಂಟ್‌ ತೆರೆಯಲಾಗುವುದು.

ಸಮುದ್ರದಲ್ಲಿ ಈಜಲು ಸುರಕ್ಷತಾ ಜಾಕೆಟ್‌ಗಳ ವ್ಯವಸ್ಥೆ, ಜೀವ ರಕ್ಷಕ ಸಿಬ್ಬಂದಿ, ಪ್ರಥಮ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಎಚ್ಚರಿಕೆ ಸಂದೇಶಗಳನ್ನು ನೀಡಲು ಪವರ್ ಬೈಕ್‌ ಖರೀದಿ ಮಾಡಲಾಗಿದ್ದು ವಾರದೊಳಗೆ ದ್ವೀಪದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಮನರಂಜನೆಯ ಜತೆಗೆ, ಸೇಂಟ್ ಮೇರಿಸ್ ದ್ವೀಪದ ಇತಿಹಾಸ, ಪ್ರವಾಸಿಗರು ಪಾಲಿಸಬೇಕಾದ ನಿಯಮಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ದ್ವೀಪದೊಳಗೆ ಪ್ಲಾಸ್ಟಿಕ್ ಕವರ್ ಹಾಗೂ ಬಾಕ್ಸ್‌ನಲ್ಲಿ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವಂತಿಲ್ಲ. ಮದ್ಯಸೇವನೆಗೆ ಅವಕಾಶವಿಲ್ಲ. ಮಕ್ಕಳ ಆಹಾರ ಹಾಗೂ ವೃದ್ಧರಿಗೆ ಔಷಧ ಕೊಂಡೊಯ್ಯಬಹುದು.ಸ್ಟೀಲ್ ಬಾಕ್ಸ್‌ಗಳಲ್ಲಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಬಹುದು.

ದ್ವೀಪದೊಳಗಿಂದ ಚಿಪ್ಪುಗಳನ್ನು ಹೊರಗೆ ಕೊಂಡೊಯ್ಯಲು ಅವಕಾಶವಿಲ್ಲ, ಅಲ್ಲಿರುವ ವಸ್ತುಗಳಿಗೆ ಹಾನಿಮಾಡಿದರೆ ದಂಡ ವಿಧಿಸಲಾಗುವುದು. ನವೀಕೃತ ಫುಡ್‌ ಪಾಯಿಂಟ್ಸ್, ಹಟ್‌ಗಳ ನಿರ್ಮಾಣ, ನಿರೀಕ್ಷಣಾ ಪ್ರದೇಶ, ಪ್ರವಾಸಿಗರ ವಸ್ತುಗಳನ್ನು ಸುರಕ್ಷಿತವಾಗಿರಸಲು ಲಗೇಜ್ ರೂಂ, ಮಾಹಿತಿ ನೀಡಲು ಕಚೇರಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದರು.

ವಾಟರ್‌ ಸ್ಫೋರ್ಟ್ಸ್‌

ಜೆಟ್‌ ಸ್ಕೀ, ಸ್ನೋರ್‌ಕೆಲಿಂಗ್, ಕಯಾಕ್, ಕ್ಲಿಫ್ ಡೈವ್, ಸ್ಕೂಬಾ ಡೈವ್, ಪ್ಯಾರಾಸೇಲಿಂಗ್, ಬನಾನ ರೈಡ್, ಐಲ್ಯಾಂಡ್ ರೌಂಡಿಂಗ್, ಡಾಲ್ಫಿನ್ ಸೈಟ್‌, ಆಗ್ಲಿಂಗ್, ಅಂಬ್ರೆಲಾ ಚೇರ್ ವ್ಯವಸ್ಥೆ ದ್ವೀಪದಲ್ಲಿ ಮಾಡಲಾಗುತ್ತಿದೆ. ಜತೆಗೆ, ದ್ವೀಪದ ಕಡುಗಲ್ಲುಗಳ ವಿಶೇಷತೆ, ಸಾಗರ ಪರಿಸರ ವೈವಿಧ್ಯತೆಯ ಮಾಹಿತಿ ನೀಡಲು ಪ್ರವಾಸಿ ಗೈಡ್‌ಗಳನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಫೊಟೊಗ್ರಫಿ, ಕಲೆ ಹಾಗೂ ಶಿಲ್ಪಕಲೆಯ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಲು ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಸುದೇಶ್ ಶೆಟ್ಟಿ ತಿಳಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು