ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅಷ್ಟಮಿಗೆ ಕಾಡುತ್ತಿದೆ ಶಿರೂರು ಶ್ರೀ ನೆನಪು

ಲಕ್ಷ್ಮೀವರ ತೀರ್ಥರ ಅಗಲಿಕೆ: ಅಷ್ಟಮಿಗೆ ಕುಣಿಯಲು ಹುಲಿವೇಷಧಾರಿಗಳ ನಿರುತ್ಸಾಹ
Last Updated 31 ಆಗಸ್ಟ್ 2018, 16:11 IST
ಅಕ್ಷರ ಗಾತ್ರ

ಉಡುಪಿ: ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಗೂ ಹುಲಿವೇಷ ಕುಣಿತಕ್ಕೂ ವಿಶೇಷವಾದ ನಂಟಿದೆ. ವಿಟ್ಲಪಿಂಡಿ ಉತ್ಸವದ ದಿನ ಶ್ರೀಕೃಷ್ಣ ಮಠದ ಪರಿಸರದಲ್ಲಿ ಹುಲಿವೇಷಧಾರಿಗಳ ಕುಣಿತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಬಾರಿ ಹಬ್ಬದ ಸಂಭ್ರಮ ಕೊಂಚ ಕಳೆಗುಂದಿದಂತೆ ಕಾಣುತ್ತಿದೆ. ಕಾರಣ ಶಿರೂರು ಲಕ್ಷ್ಮೀವರ ತೀರ್ಥರ ಅಗಲಿಕೆ.

ಪ್ರತಿವರ್ಷ ವಿಟ್ಲಪಿಂಡಿ ಉತ್ಸವದ ದಿನ ಶ್ರೀಕೃಷ್ಣಮಠದ ರಾಜಾಂಗಣ ವಾಹನ ನಿಲುಗಡೆ ಪ್ರದೇಶ ಹುಲಿವೇಷಧಾರಿಗಳಿಂದ ತುಂಬಿಹೋಗುತ್ತಿತ್ತು. ಸ್ವತಃ ಶಿರೂರು ಶ್ರೀಗಳೇ ಮುಂದೆ ನಿಂತು ಹುಲಿವೇಷಧಾರಿಗಳಿಗಾಗಿಯೇ ಸುಸಜ್ಜಿತ ವೇದಿಕೆ ನಿರ್ಮಾಣದ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದರು. ಈ ಬಾರಿ ರಾಜಾ‌ಂಗಣ ಬಿಕೋ ಎನ್ನುತ್ತಿದೆ ಎನ್ನುತ್ತಾರೆ ಹುಲಿವೇಷಧಾರಿಗಳು.

ಕನಿಷ್ಠ 25ಕ್ಕೂ ಹೆಚ್ಚು ಹುಲಿವೇಷ ತಂಡಗಳು ವಿಟ್ಲಪಿಂಡಿ ಉತ್ಸವದ ದಿನ ರಾಜಾಂಗಣ ವೇದಿಕೆಯ ಮುಂಭಾಗ ಕುಣಿಯುತ್ತಿದ್ದವು. ವೇದಿಕೆ ಮೇಲೆ ಕುಳಿತು ಹುಲಿಕುಣಿತವನ್ನು ಕಣ್ತುಂಬಿಕೊಳ್ಳುತ್ತಿದ್ದ ಶಿರೂರು ಶ್ರೀಗಳು, ಸ್ವತಃ ಡ್ರಮ್‌ ಬಾರಿಸಿ ಕಲಾವಿದರಿಗೆ ಉತ್ತೇಜನ ನೀಡುತ್ತಿದ್ದರು ಎನ್ನುತ್ತಾರೆ ವೇಷಧಾರಿಗಳು.

ವೇಷ ಹಾಕುತ್ತಿದ್ದವರು ಸಣ್ಣವರಿರಲಿ, ದೊಡ್ಡವರಿರಲಿ ಎಲ್ಲರನ್ನೂ ಗೌರವದಿಂದ ನೋಡುತ್ತಿದ್ದ ಶ್ರೀಗಳು, ಕಲಾವಿದರನ್ನು ವೇದಿಕೆ ಮೇಲೆ ಕರೆದು ₹ 2000, ₹ 500, ₹ 100 ನೋಟುಗಳ ಹಾರವನ್ನು ಹಾಕಿ ಸನ್ಮಾನಿಸುತ್ತಿದ್ದರು. ಹುಲಿ ವೇಷ ಕಲೆಗೆ ಬೇಡಿಕೆ ತಂದುಕೊಟ್ಟ ಕೀರ್ತಿ ಶಿರೂರು ಶ್ರೀಗಳಿಗೆ ಸಲ್ಲುತ್ತದೆ ಎಂದು ಸ್ಮರಿಸುತ್ತಾರೆ ಹುಲಿವೇಷಧಾರಿ ಕಾಡುಬೆಟ್ಟು ಅಶೋಕ್ ರಾಜ್‌.

ಆರಂಭದಲ್ಲಿ ಶಿರೂರು ಮಠದ ಮುಂಭಾಗದಲ್ಲೇ ಹುಲಿವೇಷ ಕುಣಿತಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ರಥಬೀದಿ ಸಾರ್ವಜನಿಕರಿಂದ ತುಂಬಿಹೋಗಿ, ಗದ್ದಲ ಉಂಟಾಗುತ್ತಿದ್ದ ಕಾರಣಕ್ಕೆ ರಾಜಾಂಗಣದಲ್ಲಿ ವೇದಿಕೆ ನಿರ್ಮಿಸುತ್ತಿದ್ದರು. ವಿಟ್ಲಪಿಂಡಿ ದಿವಸ ರಥಬೀದಿಯಲ್ಲಿ ಮೊಸರಿನ ಕುಡಿಕೆ ಹೊಡೆಯುವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತಿತ್ತೊ, ರಾಜಾಂಗಣದಲ್ಲಿ ಹುಲಿಕುಣಿತಕ್ಕೂ ಅಷ್ಟೇ ಪ್ರಾಮುಖ್ಯತೆ ದೊರೆಯುತ್ತಿತ್ತು ಎನ್ನುತ್ತಾರೆ ಅಶೋಕ್ ರಾಜ್.

ಈ ಬಾರಿ ಹುಲಿವೇಷಧಾರಿಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗುವ ಸಾಧ್ಯತೆಗಳಿದೆ. ವಿಟ್ಲಪಿಂಡಿ ಉತ್ಸವದ ಪ್ರಮುಖ ಆಕರ್ಷಣೆಯಾದ ಹುಲಿಕುಣಿತದ ಸಂಭ್ರಮ ಈ ಬಾರಿ ಕಡಿಮೆಯಾಗುವ ಆತಂಕ ಕಾಡುತ್ತಿದೆ ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ಹುಲಿವೇಷವನ್ನು ಹಾಕುವವರು ಬಡವರು, ಹಿಂದುಳಿದವರು. ಶ್ರೀಕೃಷ್ಣ ಮಠದಲ್ಲಿ ಭರತನಾಟ್ಯಕ್ಕೊಂದು ವೇದಿಕೆ ಇದೆ. ಸಂಗೀತಕ್ಕೊಂದು ವೇದಿಕೆ ಇದೆ. ಶ್ರೀಮಂತ ಕಲೆಗಳ ಮಧ್ಯೆ ಬಡವರ ಕಲೆಯಾಗಿರುವ ಹುಲಿವೇಷಕ್ಕೂ ವೇದಿಕೆ ಕಲ್ಪಿಸಿಕೊಟ್ಟವರು ಶಿರೂರು ಶ್ರೀಗಳು ಎಂದು ಸ್ಮರಿಸುತ್ತಾರೆ ಕೇಮಾರು ಮಠದ ಈಶವಿಠಲ ಸ್ವಾಮೀಜಿ.

ಬಡವರು, ಹಿಂದುಳಿದವರು ಹೀಗೆ ಎಲ್ಲ ವರ್ಗದವರನ್ನೂ ಅಪ್ಪಿಕೊಳ್ಳುತ್ತಿದ್ದ ಜಾತ್ಯತೀತ ಸಂತ ಶಿರೂರು ಶ್ರೀಗಳು. ಹುಲಿವೇಷ ಕಲೆಯಿಂದ ಯಾರೂ ವಿಮುಖರಾಗಬಾರದು ಎಂಬ ಕಾಳಜಿ ಅವರಲ್ಲಿತ್ತು. ಹಾಗಾಗಿಯೇ, ವೇಷಧಾರಿಗಳಿಗೆ ಹಣದ ಮಾಲೆ ಹಾಕುತ್ತಿದ್ದರು. ಶ್ರೀಗಳಿಲ್ಲದ ಅಷ್ಟಮಿ ಕಳೆಗುಂದಿದೆ ಎನ್ನುತ್ತಾರೆ ಕೇಮಾರು ಸ್ವಾಮೀಜಿ.

ಪ್ರತಿವರ್ಷ ಅಷ್ಟಮಿಗೆ ರಾಜಾಂಗಣ ಭರ್ತಿಯಾಗುತ್ತಿತ್ತು. ಶ್ರೀಕೃಷ್ಣ ಮಠದಲ್ಲಿ ಕಡೆಗೋಲು ಕೃಷ್ಣನನ್ನು ಕಣ್ತುಂಬಿಕೊಳ್ಳುತ್ತಿದ್ದ ಭಕ್ತರು, ಹುಲಿವೇಷ ಕುಣಿತ ನೋಡಿ ಭರಪೂರ ಮನರಂಜನೆ ಪಡೆಯುತ್ತಿದ್ದರು. ಈ ಬಾರಿ ಅಂತಹ ಸಂಭ್ರಮ ಕಾಣುತ್ತಿಲ್ಲ ಎನ್ನುತ್ತಾರೆ ಶಿರೂರು ಶ್ರೀ ಅಭಿಮಾನಿ ಬಳಗದ ಅಧ್ಯಕ್ಷರಾದ ರಾಧಾಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT