ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತ ನಿಲುವುಗಳ ದೊಡ್ಡ ವಿದ್ವಾಂಸ | ಪೇಜಾವರಶ್ರೀ ಒಡನಾಡಿಯ ನೆನಪು

ಹೀಗಿದ್ದರು ವಿಶ್ವೇಶತೀರ್ಥರು
Last Updated 30 ಡಿಸೆಂಬರ್ 2019, 7:16 IST
ಅಕ್ಷರ ಗಾತ್ರ

ಉಡುಪಿ: ಶತ್ರುಗಳನ್ನೂ ಪ್ರೀತಿಸುವ, ಟೀಕೆಗಳನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸುವ, ಅಭಿಪ್ರಾಯ ಬೇಧ ಹೊಂದಿದವರ ಜತೆಯಲ್ಲೂ ಚರ್ಚಿಸುವ ಗುಣ ಹೊಂದಿದ್ದವರು ಪೇಜಾವರ ಶ್ರೀಗಳು. ಅವರೊಟ್ಟಿಗೆ ವಿಷಯಾಧಾರಿತ ಚರ್ಚೆ ಮಾಡಬಹುದಿತ್ತು.ಸರಿ ಅನಿಸಿದ್ದನ್ನು ಧೈರ್ಯವಾಗಿ ಹೇಳಬಹುದಿತ್ತು. ಅವರ ನಡೆಗಳು ಒಪ್ಪಿತವಾಗದಿದ್ದರೆ ನಿರ್ಧಾಕ್ಷಿಣ್ಯವಾಗಿ ಖಂಡಿಸಬಹುದಿತ್ತು. ಅವರ ಜೊತೆಗಿನ ದಶಕಗಳ ಒಡನಾಟದ ಆಧಾರದಲ್ಲಿ ಹೇಳುವುದಾದರೆ, ಪೇಜಾವರ ಸ್ವಾಮೀಜಿ ನಾಡಿನ ನಿಜ ಸಂತ.

ದಶಕಗಳ ಹಿಂದೆ ಮೈಸೂರಿನಲ್ಲಿ ಆಂಗ್ಲ ಪ್ರಾಧ್ಯಾಪಕರಾಗಿದ್ದ ಪೋಲಂಕಿ ರಾಮಮೂರ್ತಿ ಅವರು ವಿವಾದಾತ್ಮಕ ಲೇಖನ ಬರೆದಿದ್ದರು. ಸೀತೆಗೆ ರಾವಣನ ಕಡೆಗೆ ಒಲವಿತ್ತು ಎಂಬರ್ಥದ ಬರಹ ವಿವಾದದ ಕಿಡಿ ಹೊತ್ತಿಸಿತು. ಲೇಖನ ಓದಿ ಪೇಜಾವರ ಶ್ರೀಗಳ ಮನಸ್ಸಿಗೆ ತುಂಬಾ ನೋವಾಯಿತು. ಅಂದು ಕೆಲವು ಪ್ರಗತಿಪರರ, ಲೇಖಕರು ವಿವಾದಿತ ಬರಹವನ್ನು ಸಮರ್ಥಿಸಿಕೊಂಡರು. ಹಲವೆಡೆ ಪೋಲಂಕಿ ಅವರ ಉಪನ್ಯಾಸಗಳು ನಡೆದವು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿಯೂ ಉಪನ್ಯಾಸ ಏರ್ಪಾಡಾಗಿರುವ ವಿಚಾರ ಪೇಜಾವರ ಶ್ರೀಗಳ ಕಿವಿಗೆ ಬಿತ್ತು.

ತಕ್ಷಣ ನನಗೆ ಕರೆ ಮಾಡಿ ಪೋಲಂಕಿ ಅವರ ಜತೆ ಚರ್ಚೆ ಮಾಡುವುದಿದೆ. ಮಠಕ್ಕೆ ಕರೆತರಲು ಸಾಧ್ಯವೇ ಎಂದು ಕೇಳಿದರು. ಇದಕ್ಕೆ ಒಪ್ಪಿಕೊಂಡು ಕಾರ್ಯಕ್ರಮ ಮುಗಿದ ಬಳಿಕ ಪೋಲಂಕಿ ಅವರಿಗೆ ಶ್ರೀಗಳ ಬೇಡಿಕೆಯನ್ನು ತಿಳಿಸಿದೆ. ಅದಕ್ಕವರು ಒಪ್ಪಿ ಜತೆಗೆ ಬರಲು ತಯಾರಾದರು. ಅಷ್ಟರಲ್ಲಾಗಲೇ ಹಿಂದೂಪರ ಸಂಘಟನೆ ಕಾರ್ಯಕರ್ತರು ಅಲ್ಲಿ ಜಮಾಯಿಸಿದ್ದರು. ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೋಲಂಕಿ ಅವರನ್ನು ಕರೆತರಲು ಪೇಜಾವರ ಶ್ರೀಗಳ ಸೂಚನೆ ಇದೆ ಎಂದ ಕೂಡಲೇ ಎಲ್ಲರೂ ಸಮಾಧಾನವಾದರು. ಪೋಲಂಕಿ ಅವರನ್ನು ಮಠಕ್ಕೆ ಕರೆತಂದೆ.

ವಿವಾದಿತ ಬರಹದ ಕುರಿತು ಶ್ರೀಗಳು ಒಂದು ತಾಸು ಮುಕ್ತವಾಗಿ ಚರ್ಚೆ ನಡೆಸಿದರು. ‘ಸೀತೆಗೆ ರಾವಣನ ಮೇಲೆ ಮೋಹವಿತ್ತು’ ಎಂಬರ್ಥದ ಸಾಲುಗಳು ಮೂಲ ವಾಲ್ಮೀಕಿ ರಾಮಾಯಣದಲ್ಲಿದ್ದರೆ ತಿಳಿಸಿ, ನಾನು ನಿಮ್ಮ ವಾದವನ್ನು ಒಪ್ಪಿಕೊಳ್ಳುತ್ತೇನೆ ಎಂದು ಶ್ರೀಗಳು ಸವಾಲು ಹಾಕಿದರು.

‘ನನಗೆ ಸಂಸ್ಕೃತವೂ ತಿಳಿದಿಲ್ಲ; ಮೂಲ ರಾಮಾಯಣವನ್ನೂ ಓದಿಲ್ಲ. ಇತರರು ಬರೆದ ರಾಮಾಯಣ ಓದಿ ಅಭಿಪ್ರಾಯ ದಾಖಲಿಸಿದ್ದೇನೆ ಅಷ್ಟೇ’ಎಂದು ಪೋಲಂಕಿ ಉತ್ತರಿಸಿದರು. ‘ಆಧಾರವಿಲ್ಲದ ಹೇಳಿಕೆಗಳನ್ನು ಮಂದಿಟ್ಟುಕೊಂಡು ಹೆಣ್ಣಿನ ಅವಹೇಳನ ಸಲ್ಲದು’ ಎಂದು ಶ್ರೀಗಳು ತಿಳಿ ಹೇಳಿದರು. ಶ್ರೀಗಳ ವಾದವನ್ನು ಪೋಲಂಕಿ ಅವರು ಒಪ್ಪಿಕೊಂಡರು. ಚರ್ಚೆ ಸೌಹಾರ್ದಯುತವಾಗಿ ಮುಕ್ತಾಯವಾಯಿತು. ಪೋಲಂಕಿ ಅವರಿಗೆ ಶಾಲುಹೊದಿಸಿ ಸನ್ಮಾನಿಸಿ ಮಠದಿಂದ ಬೀಳ್ಕೊಡಲಾಯಿತು. ಕೆಲ ದಿನಗಳ ನಂತರ ಪೋಲಂಕಿ ಮತ್ತೊಂದು ಲೇಖನ ಬರೆದು, ಶ್ರೀಗಳ ವ್ಯಕ್ತಿತ್ವವನ್ನು ಹಂಚಿಕೊಂಡರು. ಹೀಗೆ, ವಿರೋಧಿಗಳನ್ನೂ ಸ್ವೀಕರಿಸುವ ಗುಣ ನಾಡಿನ ಬೇರಾವ ಯತಿಗಳಲ್ಲಿ ಕಾಣಲು ಸಾಧ್ಯ.

ಯು.ಆರ್.ಅನಂತಮೂರ್ತಿ ಜತೆಯೂ ಪೇಜಾವರ ಶ್ರೀಗಳಿಗೆ ವಿಚಾರ ಭೇದವಿತ್ತು.ಹಾಗೆಂದು ಅವರನ್ನು ದ್ವೇಷಿಸಿದವರಲ್ಲ. ವಿವಾದಾತ್ಮಕ ಹೇಳಿಕೆ ಕೊಟ್ಟಾಗಲೆಲ್ಲ ಮುಕ್ತವಾಗಿ ಚರ್ಚಿಸಿದರು. ಹಲವು ಬಾರಿ ಅನಂತಮೂರ್ತಿ ಅವರು ತಪ್ಪೊಪ್ಪಿಕೊಂಡಿದ್ದು ಇದೆ. ಹಲವು ಸಲ ಒಪ್ಪದೆ ವಾದ ಮಾಡಿದ್ದು ಇದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಇಬ್ಬರ ನಡುವಿನ ಬಾಂಧವ್ಯ ಕೊನೆಯವರೆಗೂ ಗಟ್ಟಿಯಾಗಿತ್ತು.

ಈಚೆಗೆ ಲೇಖಕ ಭಗವಾನ್‌ ರಾಮನ ಕುರಿತು ವಿವಾದಾತ್ಮಕ ಪುಸ್ತಕ ಬರೆದಾಗಲೂ ಶ್ರೀಗಳು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು. ಅವರು ಚರ್ಚೆಗೆ ಬರಲಿಲ್ಲ. ಇದಲ್ಲದೆ, ಅಷ್ಠಮಠಗಳ ಸಂಪ್ರದಾಯದಲ್ಲಿನ ಬದಲಾವಣೆ, ಯತಿಗಳ ಸೀಮೋಲ್ಲಂಘನ, ಆಚರಣೆ, ಧಾರ್ಮಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಟೀಕೆ ಮಾಡಿ ಚರ್ಚಿಸಬಹುದಿತ್ತು.

‘ಪೇಜಾವರ ಶ್ರೀಗಳು ದ್ವೈತ ಹಾಗೂ ಅದ್ವೈತದ ಬಗ್ಗೆ ಮುಕ್ತವಾಗಿ ನಿಲುವು ವ್ಯಕ್ತಪಡಿಸಲು ಸಾಧ್ಯವಿಲ್ಲ. ಮಾಧ್ವಪೀಠಾಧಿಪತಿಗಳಾದ ಕಾರಣ ಶಂಕರಚಾರ್ಯರನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲಾಗುವುದಿಲ್ಲ’ಎಂದು ಬಹಿರಂಗ ಸಭೆಯೊಂದರಲ್ಲಿ ವೈಯಕ್ತಿಕ ನಿಲುವು ಮಂಡಿಸಿದ್ದೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀಗಳು ‘ಮಾಧ್ವಪೀಠಾಧಿಪತಿಯಾಗಿ ಬದ್ಧತೆಗಳಿರುವುದು ನಿಜ. ಆದರೂ, ಬದ್ಧತೆಯಲ್ಲಿ ಮುಕ್ತತೆ ತೋರಲು ಪ್ರಯತ್ನಿಸುತ್ತೇನೆ. ಶಂಕರಾಚಾರ್ಯರು ದೊಡ್ಡ ಯತಿಗಳು, ಅವರ ವಿದ್ವತ್‌ ಮೆಚ್ಚುತ್ತೇನೆ’ ಎಂದು ಮುಕ್ತವಾಗಿ ಘೋಷಿಸಿದ್ದರು. ಬಹುಶಃ ಇಂತಹ ಧೈರ್ಯವನ್ನು ಬೇರೆ ಯಾವ ಮಾಧ್ವ ಪೀಠಾಧಿಪತಿಯೂ ತೋರಲಾರರು.

ಅಸ್ಪ್ರೃಶ್ಯತೆ ನಿವಾರಣೆಗೆ ದಲಿತರ ಕೇರಿಯಲ್ಲಿ ಪಾದಯಾತ್ರೆ ನಡೆಸಿದಾಗ ಕೆಲವರಿಂದ ಟೀಕೆಗಳು ಕೇಳಿಬಂತು. ದಲಿತರ ಮನೆಯಲ್ಲಿ ಪಾದಪೂಜೆ ಮಾಡಿಸಿಕೊಂಡರೆ ಸಾಲುವುದಿಲ್ಲ, ಊಟ ಮಾಡಬೇಕು ಎಂದು ಕುಹಕವಾಡಿದರು. ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸಿದ ಸ್ವಾಮೀಜಿ, ‘ಯತಿಗಳಿಗೆ ಪ್ರತ್ಯೇಕ ಆಹಾರ ಪದ್ಧತಿ ಇದೆ. ಯತಿಧರ್ಮ ಹಾಗೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ದಲಿತರ ಮನೆಯಲ್ಲಿ ಮಾತ್ರವಲ್ಲ, ಬ್ರಾಹ್ಮಣರ ಮನೆಯಲ್ಲಿಯೂ ಸಹಪಂಕ್ತಿ ಭೋಜನ ಮಾಡುವುದಿಲ್ಲ ಎಂದು ಗಟ್ಟಿಯಾಗಿ ಹೇಳಿದ್ದರು’.

ಬಾಲ್ಯದಲ್ಲೊಮ್ಮೆ ಕೆರೆಗೆ ಈಜಲು ಹೋಗಿ ಮುಳುಗುವ ಸ್ಥಿತಿಯಲ್ಲಿದ್ದಾಗ ದಲಿತ ಬಾಲಕ ಶ್ರೀಗಳನ್ನು ರಕ್ಷಿಸಿದ್ದ. ಈ ವಿಚಾರವನ್ನು ಹಲವು ಬಾರಿ ಹೇಳಿಕೊಂಡು, ಅಸ್ಪೃಶ್ಯತೆ ಆಚರಣೆಯ ಬಗ್ಗೆ ಸಂಕಟ ಅನುಭವಿಸಿದ್ದರು. ಆದರೆ, ಸಂಪ್ರದಾಯಸ್ಥ ಪೀಠದಲ್ಲಿ ಕುಳಿತು ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳುವಾಗ ಸಂಯಮದಿಂದ ತೆಗೆದುಕೊಳ್ಳಬೇಕು. ಸಮಾಜದ ಬೆಂಬಲವೂ ಇರಬೇಕು ಎಂಬ ಒಳ ಎಚ್ಚರಿಕೆ ಅವರಲ್ಲಿತ್ತು.

ಅಸ್ಪ್ರೃಶ್ಯತೆಯನ್ನು ಒಂದೇ ಸಲ ತೊಡೆದು ಹಾಕಲು ಸಾಧ್ಯವಿಲ್ಲ. ರಾಜ ಎಷ್ಟೇ ದೊಡ್ಡ ಪರಾಕ್ರಮಿಯಾದರೂ ಯುದ್ಧರಂಗದಲ್ಲಿ ಸೈನ್ಯವನ್ನು ಬಿಟ್ಟು ಏಕಾಂಗಿಯಾಗಿ ಹೋರಾಡಲಾಗುವುದಿಲ್ಲ. ರಾಜನ ಪರಿಸ್ಥಿತಿಯೇ ನನ್ನದಾಗಿದ್ದು, ಸಮಾಜವನ್ನು ಕಟ್ಟಿಕೊಂಡೇ ಅಸ್ಪೃಶ್ಯತೆ ನಿವಾರಣೆಗೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ನಿಧಾನವಾಗಿಯಾದರೂ ಸಮಾಜವನ್ನು ಪ್ರಗತಿಪರವಾಗಿ ಕರೆದೊಯ್ಯತ್ತೇನೆ ಎಂದು ಸಂಕಲ್ಪ ತೊಟ್ಟಿದ್ದರು.

(ಶ್ರೀಪತಿ ತಂತ್ರಿಗಳು ಪೇಜಾವರ‌ ಶ್ರೀಗಳ ಆಪ್ತ ಒಡನಾಡಿಗಳು, ವಿದ್ವಾಂಸರು. ಸ್ವಾಮಿಗಳನ್ನು ಹತ್ತಿರದಿಂದ ನೋಡಿದವರು.ತಂತ್ರಿಗಳ ಬಳಿ ಪೇಜಾವರರು ಹಲವು ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ, ಅಭಿಪ್ರಾಯಗಳನ್ನು ಪಡೆದದ್ದಿದೆ)

ನಿರೂಪಣೆ: ಬಾಲಚಂದ್ರ ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT