ಮಂಗಳವಾರ, ಮೇ 24, 2022
27 °C
ಬದಲಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ; 26 ಹೆಚ್ಚುವರಿ ಸೇರಿ 77 ಪರೀಕ್ಷಾ ಕೇಂದ್ರ ರಚನೆ: ಡಿಡಿಪಿಐ ಎನ್‌.ಎಚ್‌.ನಾಗೂರ

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ 14,380 ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಬದಲಾದ ಪರೀಕ್ಷಾ ಪದ್ಧತಿಯಂತೆ ಉಡುಪಿ ಜಿಲ್ಲೆಯಲ್ಲಿ 289 ಪ್ರೌಢಶಾಲೆಗಳಿಂದ 14,380 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದು, 77 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ತಿಳಿಸಿದ್ದಾರೆ.

ಮೊದಲಿದ್ದ 51 ಪರೀಕ್ಷಾ ಕೇಂದ್ರಗಳ ಜತೆಗೆ 26 ಹೊಸ ಕೇಂದ್ರಗಳನ್ನು ರಚನೆ ಮಾಡಿದೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಒಂದು ಮೀಸಲು ಕೊಠಡಿ ಇರುತ್ತದೆ ಎಂದು ತಿಳಿಸಿದ್ದಾರೆ.

ಬ್ರಹ್ಮಾವರ ವಲಯದಲ್ಲಿ ಖಾಸಗಿ, ರೆಗ್ಯುಲರ್‌, ರೆಗ್ಯುಲರ್ ರಿಪೀಟರ್ಸ್‌, ಖಾಸಗಿ ರಿಪೀಟರ್ಸ್‌ ವಿದ್ಯಾರ್ಥಿಗಳು ಸೇರಿ 2,859 ವಿದ್ಯಾರ್ಥಿಗಳಿದ್ದು, ಬೈಂದೂರಿನಲ್ಲಿ 2,182, ಕಾರ್ಕಳದಲ್ಲಿ 2,812, ಕುಂದಾಪುರದಲ್ಲಿ 2,820, ಉಡುಪಿಯಲ್ಲಿ 3,709 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.

ಬ್ರಹ್ಮಾವರದ 14, ಬೈಂದೂರಿನ 13, ಕಾರ್ಕಳದ 15, ಕುಂದಾಪುರದ 13 ಹಾಗೂ ಉಡುಪಿಯ 22 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಬದಲಾಗಿರುವ ಪರೀಕ್ಷಾ ಪದ್ಧತಿಯನ್ನು ತಿಳಿಸಲು ಶಾಲಾವಾರು ಹಾಗೂ ವಿಷಯವಾರು ವಾಟ್ಸ್‌ ಆ್ಯಪ್‌ ಗ್ರೂಪಗಳನ್ನು ರಚಿಸಿ ಬದಲಾದ ಪರೀಕ್ಷಾ ಮಾದರಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅಭ್ಯಾಸ ಮಾಡಿಸಲಾಗುತ್ತಿದೆ. 

ಆನ್‍ಲೈನ್ ಮೂಲಕ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಲಾಗುತ್ತದೆ. ಎರಡು ದಿನಕ್ಕೆ ಒಂದು ದಿನ ವಿಷಯವಾರು ಗೂಗಲ್ ಮೀಟ್‍ ಮಾಡಿ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ತಾಲ್ಲೂಕು ಹಂತದಲ್ಲಿ ಗೂಗಲ್ ಮೀಟ್ ಮೂಲಕ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಶಿಕ್ಷಕರಿಗೆ ಬದಲಾಗಿರುವ ಪರೀಕ್ಷಾ ಪದ್ಧತಿ ಕುರಿತು ತಿಳಿಸಲಾಗುತ್ತಿದೆ.

ಜಿಲ್ಲಾ ಹಂತದಲ್ಲಿ ಎಲ್ಲ ಬಿಇಒ ಮತ್ತು ಮೇಲ್ವಿಚಾರಣಾ ಅಧಿಕಾರಿಗಳ ಜತೆ ಆನ್‌ಲೈನ್ ಸಭೆ ಮಾಡಲಾಗಿದೆ. ಪ್ರತಿ ಶಾಲೆಯ ವಿಷಯ ಶಿಕ್ಷಕರು ದತ್ತು ಪಡೆದ ಶಾಲೆಯ ಮಕ್ಕಳಿಗೆ ಬದಲಾದ ಪರೀಕ್ಷಾ ಪದ್ಧತಿಯ ಕುರಿತು ಹಾಗೂ ಕಲಿಕೆಯ ಕುರಿತು ತಿಳಿಸುತ್ತಿದ್ದಾರೆ. 2021-22ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಷಯವಾರು ಆನ್‍ಲೈನ್ ಬೋಧನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜೂನ್ 15ರಿಂದ ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಶಿಕ್ಷಕರು ಬೋಧನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಜುಲೈ 1ರಿಂದ ವಿದ್ಯಾರ್ಥಿಗಳಿಗೆ ಬೋಧನೆ ಆರಂಭವಾಗಲಿದೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.