ಬುಧವಾರ, ಮೇ 25, 2022
29 °C
ಭತ್ತದ ತೆನೆಗಳಿಂದ ಅಲಂಕೃತವಾಗಿದ್ದ ಪೇಜಾವರ ಶ್ರೀಗಳ ಪಲ್ಲಕ್ಕಿ

ಉಡುಪಿ: ಕಣ್ಮನ ಸೆಳೆದ ಮೇನೆ, ಪೌರಾಣಿಕ ಸ್ತಬ್ಧಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಮೆರವಣಿಗೆಯಲ್ಲಿ ಯತಿಗಳನ್ನು ಹೊತ್ತು ಸಾಗಿದ ಮೇನೆಗಳು ಹಾಗೂ ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ಟ್ಯಾಬ್ಲೊಗಳು ಗಮನ ಸೆಳೆದವು.

ಹಿಂದೆ, ಜೋಡುಕಟ್ಟೆಯಿಂದ ಯತಿಗಳನ್ನು ಪಲ್ಲಕ್ಕಿಯಲ್ಲಿ ಹೆಗಲ ಮೇಲೆ ಹೊತ್ತು ಕೃಷ್ಣಮಠಕ್ಕೆ ಹೊತ್ತೊಯ್ಯಲಾಗುತ್ತಿತ್ತು. ಈ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟ ನಂತರ ವಾಹನಗಳಲ್ಲಿ ಕಟ್ಟಿದ ಪಲ್ಲಕ್ಕಿಯಲ್ಲಿ ಯತಿಗಳನ್ನು ಕರೆದೊಯ್ಯಲಾಗುತ್ತದೆ. ಆಯಾ ಮಠಗಳು ವಿಭಿನ್ನವಾದ ಮೇನೆಗಳನ್ನು ಯತಿಗಳಿಗೆ ಸಿದ್ಧಪಡಿಸುವುದು ವಿಶೇಷ.

ಬಗೆ ಬಗೆಯ ಹೂಗಳಿಂದ ಮೇನೆಗಳನ್ನು ಸುಂದರವಾಗಿ ಅಲಂಕರಿಸಲಾಗಿರುತ್ತದೆ. ಮೇನೆಯ ಮುಂಬದಿ ಬೆಳ್ಳಿಯ ದಂಡವನ್ನು ಹಿಡಿದ ಗಿಂಡು ಮಾಣಿಗಳು ಕುಳಿತರೆ, ಮೇನೆಯ ಮಧ್ಯೆಯಲ್ಲಿ ಕಿರೀಟಧಾರಿಗಳಾಗಿ ದಂಡವನ್ನು ಹಿಡಿದು ಯತಿಗಳು ಆಸೀನರಾಗಿರುತ್ತಾರೆ.

ಜೇಷ್ಠತೆ ಆಧಾರದಲ್ಲಿ ಯತಿಗಳು ಮೇನೆಯಲ್ಲಿ ಸಾಗುತ್ತಾರೆ. ಹೀಗೆ ಯತಿಗಳು ಸಾಗುವಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ಭಕ್ತರು ಭಕ್ತಿಭಾವದಿಂದ ಕೈಮುಗಿದು ಶ್ರೀಗಳಿಗೆ ಗೌರವ ಸೂಚಿಸುತ್ತಾರೆ.

ಗಮನ ಸೆಳೆದ ಪೇಜಾವರ ಶ್ರೀಗಳ ಮೇನೆ:

ಸಾಮಾನ್ಯವಾಗಿ ಹೂ ಹಾಗೂ ಬಣ್ಣ ಬಣ್ಣದ ವಸ್ತ್ರಗಳಿಂದ ಯತಿಗಳ ಮೇನೆಗಳನ್ನು ಅಲಂಕರಿಸಿದರೆ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರ ಮೇನೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಭತ್ತದ ತೆನೆಗಳನ್ನು ಬಳಸಿಕೊಂಡು ಆಕರ್ಷಕವಾಗಿ ನಿರ್ಮಿಸಲಾಗಿತ್ತು. ಪರ್ಯಾಯ ಮೆರವಣಿಗೆಯಲ್ಲಿ ಕೇಂದ್ರಬಿಂದುವಾಗಿ ಗಮನ ಸೆಳೆಯುತ್ತಿತ್ತು ಪೇಜಾವರ ಮಠದ ಮೇನೆ.

ಕಣ್ಮನ ಸೆಳೆದ ಟ್ಯಾಬ್ಲೊ:

ಕೃಷ್ಣನ ಲೀಲೆಗಳನ್ನು ಸಾರುವ ಸ್ತಬ್ಧಚಿತ್ರಗಳು ನೋಡುಗರ ಕಣ್ಮನ ಸೆಳೆದವು. ಅಯೋಧ್ಯೆಯ ರಾಮಮಂದಿರ, ವಾಸುದೇವ ಕೃಷ್ಣ, ಜಾಂಬವಂತ ಕೃಷ್ಣ, ಗೀತೋಪದೇಶ ಕೃಷ್ಣಾರ್ಜುನ, ಗಜಾನನ ಮೋಕ್ಷ, ಶೇಷಶಯನ ಲಕ್ಷ್ಮಿ, ಕಾಳಿಂಗ ಮರ್ಧನ ಪ್ರಸಂಗಗಳನ್ನು ಬಿಂಬಿಸುವ ಟ್ಯಾಬ್ಲೊಗಳು ಗಮನ ಸೆಳೆದವು.

ಅರಣ್ಯ ಇಲಾಖೆಯ ಟ್ಯಾಬ್ಲೊ ಪರಿಸರ ಕಾಳಜಿ ಮೂಡಿಸುತ್ತಿತ್ತು. ಯುವತಿಯರ ಮರಗಾಲು ಪ್ರದರ್ಶನವನ್ನು ಕಂಡು ಸಾರ್ವಜನಿಕರು ನಿಬ್ಬೆರಗಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.