ತಂಬಾಕು ಸೇವನೆ: ಪ್ರತಿವರ್ಷ 60 ಲಕ್ಷ ಸಾವು

ಉಡುಪಿ: ಅಪ್ರಾಪ್ತರಲ್ಲಿ ಧೂಮಪಾನ ಚಟ ಹೆಚ್ಚಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದ್ದು, ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್ ಹೇಳಿದರು.
ಸೋಮವಾರ ಉಡುಪಿ ತಾಲ್ಲೂಕು ಆರೋಗ್ಯಾಧಿಕಾರಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಟ್ಪ ಕಾಯ್ದೆಯ ಕುರಿತು ಅರಿವು, ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳ ಆವರಣದಿಂದ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ಶಿಕ್ಷಣ ಸಂಸ್ಥೆಯನ್ನು ತಂಬಾಕು ಮುಕ್ತವನ್ನಾಗಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹೊಂದಿರುತ್ತಾರೆ. ಈ ನಿಯಮ ಅನುಷ್ಠಾನದ ಮೂಲಕ ವಿದ್ಯಾರ್ಥಿಗಳು ಧೂಮಪಾನ ಮಾಡದಂದೆ ತಡೆಯೊಡ್ಡಬೇಕು ಎಂದರು.
ತಂಬಾಕು ನಿಯಂತ್ರಣ ಕಾನೂನು ಕೋಟ್ಪ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಕೂಡ ಅಪರಾಧವಾಗಿದ್ದು, ನಿಯಮ ಉಲ್ಲಂಘನೆಯಾದಲ್ಲಿ ₹ 200 ದಂಡ ವಿಧಿಸಬಹುದು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಕಂಡುಬಂದರೆ ಸಾರ್ವಜನಿಕರು ಠಾಣೆಗೆ ದೂರು ನೀಡಬೇಕು ಎಂದರು.
ಅಂಗಡಿಗಳು ತಂಬಾಕು ಉತ್ಪನ್ನಗಳನ್ನು ಪ್ರದರ್ಶನ ಮಾಡುವಂತಿಲ್ಲ. ತಂಬಾಕು ಉತ್ಪನ್ನಗಳ ಜಾಹೀರಾತು, ಬೋರ್ಡ್, ಭಿತ್ತಿಪತ್ರ, ಎಲ್‌ಸಿಡಿ ಟಿವಿ ಮೂಲಕ ಪ್ರಸಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿ ಮಾಲೀಕರು ಕಡ್ಡಾಯವಾಗಿ ಎಚ್ಚರಿಕೆಯ ಫಲಕಗಳನ್ನು ಅಂಗಡಿ ಮುಂದೆ ಪ್ರದರ್ಶನ ಮಾಡಬೇಕು ಎಂದರು.
ಕೆಎಂಸಿ ಆಸ್ಪತ್ರೆಯ ಡಾ.ಮುರಳೀಧರ್ ಕುಲಕರ್ಣಿ ಮಾತನಾಡಿ, ತಂಬಾಕಿನಲ್ಲಿ ಅಪಾಯಕಾರಿ ರಾಸಾಯನಿಕ ವಸ್ತುಗಳಿದ್ದು, ಸೇವಿಸುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಕಾಯಿಲೆ ಸೇರಿದಂತೆ ಮಾರಾಣಾಂತಿಕ ರೋಗಗಳು ಬರುತ್ತವೆ. ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆ ಸಂಬಂಧಿ ರೋಗಗಳಿಗೆ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನಾ, ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.