ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮೊಸರು ಕುಡಿಕೆ ಹೊಡೆದು ಕೃಷ್ಣ ಸೇವೆ

ದಶಕಗಳಿಂದ ಶ್ರೀಕೃಷ್ಣ ಮಠದಲ್ಲಿ ವಾಸ್ತವ್ಯ ಹೂಡಿರುವ ಗೊಲ್ಲ ಸಮುದಾಯವರು
Last Updated 1 ಸೆಪ್ಟೆಂಬರ್ 2018, 17:31 IST
ಅಕ್ಷರ ಗಾತ್ರ

ಉಡುಪಿ: ಶ್ರೀಕೃಷ್ಣನ ವಿನೋದಾವಳಿಗಳಲ್ಲಿ ಮೊಸರಿನ ಕುಡಿಕೆ ಹೊಡೆಯುವ ಆಚರಣೆಗೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಶ್ರೀಕೃಷ್ಣ ಮಠದಲ್ಲಿ ನಡೆಯುವ ವಿಟ್ಲಪಿಂಡಿ ಉತ್ಸವದಲ್ಲಿ ಮೊಸರಿನ ಕುಡಿಕೆ ಹೊಡೆಯುವುದೇ ಪ್ರಮುಖ ಆಕರ್ಷಣೆ. ತಲತಲಾಂತರಗಳಿಂದ ಆಚರಣೆಯಲ್ಲಿರುವ ಈ ವಿಶಿಷ್ಟ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸುತ್ತಿರುವವರು ಮಠದಲ್ಲಿರುವ ಗೊಲ್ಲ ಸಮುದಾಯದವರು.

ಉತ್ತರ ಕರ್ನಾಟಕ ಮೂಲದ ಸುಮಾರು 10ಕ್ಕೂ ಹೆಚ್ಚು ಮಂದಿಯ ತಂಡ ದಶಕಗಳಿಂದ ಶ್ರೀಕೃಷ್ಣಮಠದಲ್ಲೇ ವಾಸ್ತವ್ಯ ಹೂಡಿದ್ದು, ಪ್ರತಿವರ್ಷ ವಿಟ್ಲಪಿಂಡಿ ಉತ್ಸವದ ದಿನ ಮೊಸರಿನ ಕುಡಿಕೆ ಹೊಡೆಯುತ್ತಾ ಬಂದಿದ್ದಾರೆ. ಇವರನ್ನು ಹೊರತುಪಡಿಸಿ ಬೇರೆಯಾರೂ ಮೊಸರಿನ ಕುಡಿಕೆ ಹೊಡೆಯುವಂತಿಲ್ಲ.

25 ವರ್ಷಗಳಿಂದ ತಪ್ಪದೇ ವಿಟ್ಲಪಿಂಡಿ ಉತ್ಸವದಲ್ಲಿ ಮೊಸರಿನ ಕುಡಿಕೆ ಹೊಡೆಯುತ್ತ ಬಂದಿದ್ದೇನೆ. ಈ ಬಾರಿಯೂ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಠದ ಪರಿಸರದಲ್ಲಿ ಕಂಬಗಳನ್ನು ನೆಡಲಾಗಿದೆ. ಕಂಬಗಳಿಗೆ ಭಾನುವಾರ ಹೂವಿನ ಅಲಂಕಾರ ಮಾಡುತ್ತೇವೆ. ಬಳಿಕ ಮೊಸರು ತುಂಬಿದ ಕುಡಿಕೆಗಳನ್ನು ಕಟ್ಟಲಾಗುತ್ತದೆಎನ್ನುತ್ತಾರೆ ಬಾದಾಮಿ ತಾಲ್ಲೂಕಿನ ಹೊನ್ನಪ್ಪ.

ಮೊಸರಿನ ಕುಡಿಕೆ ಹೊಡೆಯುವ ಸಂಪ್ರದಾಯಗಳು ಭಿನ್ನ. ವಿಟ್ಲಪಿಂಡಿ ಉತ್ಸವದ ದಿನ ಮಡಿಯುಟ್ಟು ಗೊಲ್ಲರ ವೇಷವನ್ನು ಸಿದ್ಧಪಡಿಸಲಾಗುತ್ತದೆ. ಹುಲ್ಲಿನಿಂದ ತಯಾರಿಸಲಾಗುವ ಪಂಚೆ ಹಾಗೂ ಹುಲ್ಲಿನ ಟೊಪ್ಪಿಗೆಯನ್ನು ಧರಿಸಿ ರಥಬೀದಿಯಲ್ಲಿ ಸಾಗುತ್ತೇವೆ. ಪೂಜೆಯ ಬಳಿಕ ಮಠದ ಸ್ವಾಮೀಜಿಗಳು ಅಪ್ಪಣೆ ದೊರೆತ ಬಳಿಕ ತಂಡದ ಸದಸ್ಯರೆಲ್ಲ ಒಟ್ಟಾಗಿ ಕೋಲಿನಿಂದ ಮೊಸರಿನ ಕುಡಿಕೆ ಹೊಡೆಯುತ್ತೇವೆ ಎನ್ನುತ್ತಾರೆ ಅವರು.

ಸಾವಿರಾರು ಜನರ ಮಧ್ಯೆ ಮೊಸರಿನ ಕುಡಿಕೆ ಹೊಡೆಯುವುದೇ ದೊಡ್ಡ ಸಂಭ್ರಮ. ಸುಲಭವಾಗಿ ಕುಡಿಕೆ ಹೊಡೆಯಬಾರದು ಎಂದು ಹಗ್ಗವನ್ನು ಇಳಿಬಿಟ್ಟು ಮೇಲೆಕ್ಕೆ ಎಳೆದು ಸತಾಯಿಸಲಾಗುತ್ತದೆ. ಚಾಣಾಕ್ಷತನದಿಂದ ಮಡಿಕೆ ಹೊಡೆಯುತ್ತೇವೆ. ಶ್ರೀಕೃಷ್ಣನಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮಗೆಲ್ಲ ಖುಷಿ ತಂದಿದೆ ಎನ್ನುತ್ತಾರೆ ಹೊನ್ನಪ್ಪ.

ಶ್ರೀಕೃಷ್ಣ ಮಠದ ಪರಿಸರದಲ್ಲಿ ಈ ಬಾರಿ 14 ಕಡೆ ಮೊಸರಿನ ಕುಡಿಕೆಗಳ ಕಂಬಗಳನ್ನು ನೆಡಲಾಗಿದೆ. ಒಂದೊಂದು ಕಂಬದಲ್ಲಿ ನಾಲ್ಕು ಮೊಸರಿನ ಕುಡಿಕೆಗಳನ್ನು ಕಟ್ಟಲಾಗುವುದು. ಮೊಸರು, ಅರಳುಹುಡಿ, ಚಕ್ಕುಲಿ, ಉಂಡೆ ಹಾಗೂ ನಾಣ್ಯವನ್ನು ಅದರೊಳಗೆ ಹಾಕಲಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.‌

ವಿಟ್ಲಪಿಂಡಿ ಉತ್ಸವ ಮುಗಿದ ಬಳಿಕ ಮಠದಲ್ಲಿ ಅನ್ನದಾಸೋಹಕ್ಕೆ ಉಪಯೋಗಿಸುವ ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡುತ್ತೇವೆ. ಜತೆಗೆ, ಮಠಕ್ಕೆ ಬರುವ ದಾಸ್ತಾನುಗಳನ್ನು ಸಂಗ್ರಹಿಸುವ ಕೆಲಸವನ್ನೂ ಮಾಡುತ್ತೇವೆ ಎನ್ನುತ್ತಾರೆ ಯಲ್ಲಪ್ಪ.

ಪ್ರತಿತಿಂಗಳು ಮಠದಿಂದ ಸಂಬಳ ಸಿಗುತ್ತದೆ. ಊಟ, ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೊಸರಿನ ಕುಡಿಕೆ ಯೊಡೆಯುವ ಕಾಯಕ ಖುಷಿ ನೀಡುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT