ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಪರ್ಯಾಯೋತ್ಸವದ ಅನ್ನಸಂತರ್ಪಣೆಗೆ ಭರದ ಸಿದ್ಧತೆ

100ಕ್ಕೂ ಅಧಿಕ ಬಾಣಸಿಗರಿಂದ ಭಕ್ಷ್ಯ, ಖಾದ್ಯಗಳ ತಯಾರಿ
Last Updated 17 ಜನವರಿ 2020, 9:44 IST
ಅಕ್ಷರ ಗಾತ್ರ

ಉಡುಪಿ: ಅದಮಾರು ಪರ್ಯಾಯ ಮಹೋತ್ಸವದ ಅನ್ನಪ್ರಸಾದಕ್ಕೆ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶ ಸಮೀಪದ ಬೈಲಕೆರೆಯ ಒಂದೂವರೆ ಎಕರೆ ಪ್ರದೇದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಬಗೆಬಗೆಯ ಭಕ್ಷ್ಯ ಹಾಗೂ ಖಾದ್ಯಗಳ ತಯಾರಿ ಬಿರುಸಿನಿಂದ ಸಾಗಿದೆ.

ವಿಶಾಲವಾದ ಚಪ್ಪರದಲ್ಲಿ ಮುಖ್ಯ ಬಾಣಸಿಗ ವಿಷ್ಣುಮೂರ್ತಿ ಭಟ್‌ ಉದ್ಯಾವರ ಅವರ ನೇತೃತ್ವದಲ್ಲಿ 100ಕ್ಕೂ ಅಧಿಕ ಬಾಣಸಿಗರು ಭಕ್ಷ್ಯಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಪರಿಶುದ್ಧ ತೆಂಗಿನ ಎಣ್ಣೆ ಬಳಸಿ, ಒಂದು ಲಕ್ಷ ಜನರಿಗೆ ಬೇಕಾಗುವಷ್ಟು ಖಾದ್ಯಗಳ ತಯಾರಿ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಬಾಣಸಿಗರು ಕೆಲಸ ನಿರ್ವಹಿಸುತ್ತಿದ್ದಾರೆ.

ಪಲಿಮಾರು ಶ್ರೀಗಳು ಈಗಾಗಲೇ ಮಠದಲ್ಲಿ ಮೈದಾ ಹಾಗೂ ಸಕ್ಕರೆ ಬಳಕೆಗೆ ನಿಷೇಧ ಹೇರಿದ್ದು, ಅದಮಾರು ಪರ್ಯಾಯದ ವೇಳೆಯೂ ಮೈದಾ ಹಾಗೂ ಸಕ್ಕರ ಬಳಕೆಯನ್ನು ನಿಷೇಧಿಸಲಾಗಿದೆ. ಬೆಲ್ಲದ ಪಾಕದಿಂದ 60 ಸಾವಿರ ಲಾಡು, ಗೋಧಿ ಹಿಟ್ಟಿನ ಬರ್ಫಿ, 1.2 ಲಕ್ಷ ಅಕ್ಕಿ ವಡೆ ತಯಾರಿಸಲಾಗುತ್ತಿದೆ.

ಅದಮಾರು ಪರ್ಯಾಯದಲ್ಲಿ ಈಗಾಗಲೇ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್‌ ಲೋಟಗಳನ್ನು ನಿಷೇಧಿಸಿದ್ದು, 3 ಸಾವಿರ ಸ್ಟೀಲ್‌ ಲೋಟಗಳನ್ನು ಖರೀದಿಸಲಾಗಿದೆ. ಮುಂದಿನ ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ಸ್ಟೀಲ್‌ ವಸ್ತುಗಳ ಬಳಕೆಗೆ ಒತ್ತು ನೀಡಲಾಗುವುದು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ಪರ್ಯಾಯಕ್ಕೆ ವಿಶೇಷ ಭೋಜನ

ಪರ್ಯಾಯೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಭೋಜನಕ್ಕೆ ಬಫೆ ಹಾಗೂ ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಜ.17ರಂದು ರಾತ್ರಿ ಅನ್ನ, ಸಾಂಬಾರು, ಪಾಯಸ, ಕೇಸರಿಬಾತ್‌, ಮಜ್ಜಿಗೆ ಇರಲಿದೆ. 18ರಂದು ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದ್ದು, ಉಪ್ಪಿನಕಾಯಿ, ಎರಡು ಬಗೆಯ ಪಲ್ಯ, ಅನ್ನಸಾರು, ಮಟ್ಟುಗುಳ್ಳ ಸಾಂಬಾರು, ಗೋಧಿ ಪಾಯಸ, ಲಾಡು, ಗೋಧಿ ಬರ್ಫಿ, ಅಕ್ಕಿ ವಡೆ, ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT