ಉಡುಪಿ: ಕೈಮಗ್ಗದಿಂದ ನೇಯ್ದಿರುವ ಉಡುಪಿಯ ಹೆಮ್ಮೆಯ ಉಡುಪಿ ಸೀರೆಗೆ ಭೌಗೋಳಿಕ ಗುರುತು (ಜಿಐ) ವೈಶಿಷ್ಟ್ಯವಿದ್ದು ಉಡುಪಿ ಸೀರೆಯ ಉತ್ಪಾದನೆ ಹೆಚ್ಚಾಗುವ ಮೂಲಕ ವಿಶ್ವ ಮಾನ್ಯತೆ ದೊರೆಯಬೇಕು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ, ಜಿಲ್ಲಾ ಖಜಿನ ಪ್ರತಿಷ್ಠಾನ ಟ್ರಸ್ಟ್, ಕೈಮಗ್ಗ ಮತ್ತು ಜವಳಿ ಇಲಾಖೆ, ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಯೋಗದಲ್ಲಿ ನಡೆದ ಉಡುಪಿ ಕೈ ಮಗ್ಗ ಸೀರೆ ನೇಯ್ಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಸೀರೆ ಉತ್ಪಾದನೆ ಹೆಚ್ಚಿಸುವ ಮೂಲಕ ಎಲ್ಲೆಡೆ ಗ್ರಾಹಕರಿಗೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ನೇಯ್ಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ತರಬೇತಿ ಪಡೆದವರು ಹೆಚ್ಚು ಬದ್ದತೆಯಿಂದ ಅತ್ಯುತ್ತಮ ಉಡುಪಿ ಸೀರೆಗಳನ್ನು ತಯಾರಿಸುವ ಮೂಲಕ ವಿಶ್ವದಾದ್ಯಂತ ಉಡುಪಿ ಸೀರೆಯನ್ನು ಪ್ರಸಿದ್ದಿಗೊಳಿಸಬೇಕು ಎಂದರು.
ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ ಮಾತನಾಡಿ, ಭೌಗೋಳಿಕ ವೈಶಿಷ್ಟ್ಯತೆ ಪಡೆದಿರುವ ಉಡುಪಿ ಸೀರೆಗಳು ಸಾಕಷ್ಟು ಸಂಖ್ಯೆಯಲ್ಲಿ ಜನರಿಗೆ ಲಭ್ಯವಾಗದಿರುವುದನ್ನು ಗಮನಿಸಿ ಆಸಕ್ತ ನೇಕಾರರನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. 6 ತಿಂಗಳ ತರಬೇತಿಯ ಜೊತೆಗೆ ಕೇಂದ್ರ ಮತ್ತು ರಾಜ್ಯ ಜವಳಿ ಇಲಾಖೆಯಲ್ಲಿ ಲಭ್ಯವಿರುವ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ತರಬೇತಿ ಪಡೆದವರು ತಯಾರಿಸಿದ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಿ ಹೆಚ್ಚಿನ ಲಾಭಾಂಶ ತಂದುಕೊಡುವ ಗುರಿ ಹೊಂದಲಾಗಿದೆ ಎಂದರು.
ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮಾತನಾಡಿ, ಅಪೂರ್ವ ಕರಕುಶಲ ಕಲೆಯಾದ ನೇಕಾರಿಕೆ ವೃತ್ತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳಸುವುದು ಅಗತ್ಯವಿದೆ. ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರಿಕೆ ಕ್ಷೇತ್ರಕ್ಕೆ ಬರಬೇಕು. ಇದಕ್ಕೆ ಪೂರಕವಾಗಿ ನೇಕಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಹೆಚ್ಚಿನ ಲಾಭದಾಯಕ ಉದ್ಯಮವನ್ನಾಗಿಸಬೇಕು ಎಂದರು.
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯದ ಚೆಕ್ ಹಾಗೂ ಜವಳಿ ಇಲಾಖೆ ವತಿಯಿಂದ ನೀಡಲಾದ ಸವಲತ್ತುಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ದಕ್ಷಿಣ ಕನ್ನಡ ಪದ್ಮಶಾಲಿ ಸಂಘದ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲಬೈಲು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ಮಾದವ ಶೆಟ್ಟಿಗಾರ್ ಕೆರೆಕಾಡು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.