ಬಜೆ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಪ್ರತಿನಿತ್ಯ ನೀರು ಪೂರೈಕೆ ಅವಧಿಯನ್ನು 2 ತಾಸು ಕಡಿತಗೊಳಿಸಲಾಗಿದೆ. ನಗರಕ್ಕೆ ರೇಷನಿಂಗ್ ಪದ್ಧತಿಯಲ್ಲಿ ನೀರು ಬಿಡುವ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೆಟ್ಟಿದ್ದ 6 ಬೋರ್‌ವೆಲ್ ದುರಸ್ತಿಗೊಳಿಸಲಾಗಿದೆ. ನಗರಸಭೆ ಉಸ್ತುವಾರಿಯಲ್ಲಿ ಇದ್ದ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಹೊಸದಾಗಿ ಎರಡು ಕೊಳವೆಬಾವಿ ಕೊರೆಯಿಸಲಾಗಿದೆ. ಖಾಸಗಿ ಬಾವಿಗಳು ಹಾಗೂ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು ಅಗತ್ಯಬಿದ್ದರೆ ಬಳಸಿಕೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದರು.
‘ಸದ್ಯಕ್ಕೆ ಸಮಸ್ಯೆ ಇಲ್ಲ’: ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಬ್ರಹ್ಮಾವರ ತಾಲ್ಲೂಕಿನ 3 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಡುಪಿ ನಗರದಲ್ಲಿ ಮೇ ಅಂತ್ಯದವರೆಗೂ ಸಮಸ್ಯೆ ತಲೆದೋರುವುದಿಲ್ಲ ಎಂಬ ವಿಶ್ವಾಸವಿದೆ. ಕುಡಿಯುವ ನೀರು ಪೂರೈಕೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಅನುದಾನದ ಕೊರತೆಯೂ ಇಲ್ಲ. ಸಮಸ್ಯೆ ಗಂಭೀರವಾದರೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.
ನೀರಿನ ಕೊರತೆ ಇರುವ ಕಾರಣ ಜನರು ಮಿತವಾಗಿ ನೀರು ಬಳಸಬೇಕು. ಉದ್ಯಾನಕ್ಕೆ, ವಾಹನ ತೊಳೆಯಲು ಕುಡಿಯುವ ನೀರನ್ನು ಬಳಸಬೇಡಿ. ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.