ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನೂರು ಉಡುಪಿಯಲ್ಲಿ ಸರಳ ವಿಟ್ಲಪಿಂಡಿ ಉತ್ಸವ

ಭಕ್ತರ ಅನುಪಸ್ಥಿತಿಯಲ್ಲಿ ಆಚರಣೆ; ಚಿನ್ನದ ರಥದಲ್ಲಿ ಕೃಷ್ಣನ ಮೆರವಣಿಗೆ
Last Updated 11 ಸೆಪ್ಟೆಂಬರ್ 2020, 15:46 IST
ಅಕ್ಷರ ಗಾತ್ರ
ADVERTISEMENT
""
""
""
""
""

ಉಡುಪಿ: ಕೃಷ್ಣಮಠದಲ್ಲಿ ಪ್ರತಿವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ವಿಟ್ಲಪಿಂಡಿ ಉತ್ಸವ ಈ ವರ್ಷ ಸರಳವಾಗಿ ನೆರವೇರಿತು. ಕೋವಿಡ್‌ ಸೋಂಕಿನ ಕಾರಣದಿಂದ ಉತ್ಸವದಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ಇರಲಿಲ್ಲ. ಮಠದ ಸಿಬ್ಬಂದಿ ಹಾಗೂ ಯತಿಗಳ ಉಪಸ್ಥಿತಿಯಲ್ಲಿ ಸಂಪ್ರದಾಯದಂತೆ ಆಚರಣೆಗಳು ಮಾತ್ರ ನಡೆದವು.

ಹೀಗಿತ್ತು ವಿಟ್ಲಪಿಂಡಿ ಉತ್ಸವ:ಮಧ್ಯಾಹ್ನ ಕೃಷ್ಣನಿಗೆ ಮಹಾಪೂಜೆ ನೆರವೇರಿಸಿದ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳು ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ರಥಬೀದಿಗೆ ತಂದು ಚಿನ್ನದ ರಥದಲ್ಲಿ ಪ್ರತಿಷ್ಠಾಪಿಸಿದರು. ಈ ಸಂದರ್ಭ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು,ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಉಪಸ್ಥಿತರಿದ್ದರು.

ಚಿನ್ನದ ರಥದಲ್ಲಿ ವಿರಾಜಮಾನನಾಗಿದ್ದ ಕೃಷ್ಣನಿಗೆ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು. ಮತ್ತೊಂದು ಕನಕ ನವರತ್ನ ರಥದಲ್ಲಿ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಸುರಿಯುತ್ತಿದ್ದ ಜೋರು ಮಳೆಯ ನಡುವೆಯೇ ಎರಡೂ ರಥಗಳನ್ನು ಮಠದ ಸಿಬ್ಬಂದಿ ಒಂದು ಸುತ್ತು ರಥಬೀದಿಯಲ್ಲಿ ಮೆರವಣಿಗೆ ಹಾಕಿಸಿದರು.

ಕೃಷ್ಣಮಠದ ರಥಬೀದಿಯಲ್ಲಿ ಶುಕ್ರವಾರ ವಿಟ್ಲಪಿಂಡಿ ಉತ್ಸವ ನಡೆಯಿತು.

ಮೊಸರು ಕುಡಿಕೆ ಒಡೆದ ಗೊಲ್ಲರು

ಪ್ರತಿವರ್ಷದಂತೆ ಈ ವರ್ಷವೂ ಗೊಲ್ಲರು ರಥಬೀದಿಯ 14 ಕಡೆಗಳಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಒಡೆದರು. ಆಕರ್ಷಕ ವೇಷ ಧರಿಸಿ ಉದ್ದನೆಯ ಕೋಲುಗಳನ್ನು ಹಿಡಿದು ಮೊಸರು ಕುಡಿಕೆ ಒಡೆಯಲು ಮುಗಿಬೀಳುತ್ತಿದ್ದ ದೃಶ್ಯ ಆಕರ್ಷಕವಾಗಿತ್ತು.

ಕೃಷ್ಣಮಠದ ಎದುರು ಮೊಸರು ಕುಡಿಕೆ ಒಡೆದ ಗೊಲ್ಲರು

ರಥಬೀದಿಯಲ್ಲಿ ಗೋವುಗಳು:ಗೋಪಾಲನಿಗೆ ಸ್ವಾಗತ ಕೋರಲು ಈ ವರ್ಷ ರಥಬೀದಿಯಲ್ಲಿ ಕೃಷ್ಣಮಠದ ಗೋಶಾಲೆಗಳಲ್ಲಿದ್ದ ಗೋವುಗಳನ್ನು ಕಟ್ಟಲಾಗಿತ್ತು.ಮೆರವಣಿಗೆಯ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ಅದಮಾರು ಶ್ರೀಗಳು ಮಧ್ವಸರೋವರದಲ್ಲಿ ವಿಸರ್ಜಿಸಿದರು. ಈ ಮೂಲಕ ವಿಟ್ಲಪಿಂಡಿ ಉತ್ಸವ ಸಂಪನ್ನವಾಯಿತು.

ಮಧ್ವಸರೋವರದಲ್ಲಿ ಕೃಷ್ಣನ ಮಣ್ಣಿನ ಮೂರ್ತಿಯನ್ನು ವಿಸರ್ಜಿಸುತ್ತಿರುವ ಈಶಪ್ರಿಯ ತೀರ್ಥ ಸ್ವಾಮೀಜಿ

‘ಭಕ್ತರಿಲ್ಲದ ಅಷ್ಟಮಿ ನೀರಸ’

ಉಡುಪಿಯ ವಿಟ್ಲಪಿಂಡಿ ಉತ್ಸವದ ದಿನ ರಥಬೀದಿ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಕಣ್ಣು ಹಾಯಿಸಿದಷ್ಟು ದೂರ ಭಕ್ತರು ತುಂಬಿರುತ್ತಿದ್ದರು. ಕೃಷ್ಣನ ವೇಷಧಾರಿಗಳು, ಹುಲಿ ಕುಣಿತ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿತ್ತು. ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳು ಉತ್ಸವದಲ್ಲಿ ಭಾಗವಹಿಸಿ ಪ್ರದರ್ಶನ ನೀಡುತ್ತಿದ್ದವು. ವೇಷಧಾರಿಗಳು ಸಾರ್ವಜನಿಕರನ್ನು ರಂಜಿಸುತ್ತಿದ್ದರು. ಈ ವರ್ಷ ಕೊರೊನಾ ಪರಿಣಾಮದಿಂದ ಅಷ್ಟಮಿ ಬಹಳ ನೀರಸವಾಗಿತ್ತು. ಭಕ್ತರು ಉತ್ಸವದಲ್ಲಿ ಭಾಗವಹಿಸುವುದನ್ನು ತಡೆಯಲು ರಥಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಖಾಕಿ ಸರ್ಪಗಾವಲು ಹಾಕಲಾಗಿತ್ತು. ಪ್ರತಿವರ್ಷದಂತೆ ಸಾಂಪ್ರದಾಯಿಕ ಆಚರಣೆಗಳು ನಡೆದರೂ ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೆ ಜನ್ಮಾಷ್ಟಮಿ ಕಳೆಗುಂದಿದಂತೆ ಕಾಣುತ್ತಿತ್ತು.

ವಿಟ್ಲಪಿಂಡಿಉತ್ಸವದಲ್ಲಿ ಗಮನ ಸೆಳೆದ ಗೊಲ್ಲ ವೇಷಧಾರಿಗಳು

ಒಂದು ಲಕ್ಷ ಉಂಡೆ, ಚಕ್ಕುಲಿ

ವಿಟ್ಲಪಿಂಡಿಗೆ ಭಕ್ತರಿಗೆ ಪ್ರಸಾದವಾಗಿ ಹಂಚಲು ಒಂದು ಲಕ್ಷ ಉಂಡೆ ಹಾಗೂ ಚಕ್ಕುಲಿಗಳನ್ನು ತಯಾರಿಸಲಾಗಿತ್ತು. ಕೋವಿಡ್‌ನಿಂದ ಭಕ್ತರು ಉತ್ಸವದಲ್ಲಿ ಭಾಗವಹಿಸಲು ಅವಕಾಶ ಇಲ್ಲದ್ದರಿಂದ, ಭಕ್ತರಿಗೆ ಪ್ರಸಾದ ತಲುಪಿಸಲು ಅದಮಾರು ಶ್ರೀಗಳುಸಂಘ ಸಂಸ್ಥೆಗಳ ಮುಖಂಡರಿಗೆ ಪ್ರಸಾದ ಹಂಚಿದರು.

ಭಕ್ತರಿಗೆ ಚಕ್ಕುಲಿ ಉಂಡೆ ಪ್ರಸಾದ ಹಂಚುತ್ತಿರುವ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ
ಉತ್ಸವದಲ್ಲಿ ಕಂಡುಬಂದ ವೇಷಧಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT