ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಸ್ತಕ್ಷೇಪ; ಪ್ರಾಣಿಗಳ ಆವಾಸಸ್ಥಾನ ಕ್ಷೀಣ

ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕುತ್ತಿರುವ ಪ್ರಾಣಿಗಳು; ಹೆಚ್ಚಾಯ್ತು ವನ್ಯಜೀವಿ–ಮಾನವ ಸಂಘರ್ಷ
Last Updated 14 ಫೆಬ್ರುವರಿ 2021, 16:46 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಈಚೆಗೆ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಾಣಿಗಳು ಈಗ ಜನವಸತಿ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಕಾಡುಬಿಟ್ಟು ನಾಡಿಗೆ ಬಂದ ಪ್ರಾಣಿಗಳಲ್ಲಿ ಕೆಲವು ಸುರಕ್ಷಿತವಾಗಿ ಮರಳಿದರೆ, ಹಲವು ಅವಘಡಗಳಿಂದ ಬಲಿಯಾಗುತ್ತಿವೆ. ಇದೇ ತಿಂಗಳು ಬೈಂದೂರು ತಾಲ್ಲೂಕಿನ ಬಡಾಕೆರೆಯಲ್ಲಿ ರೈಲು ಹಳಿಗೆ ಸಿಕ್ಕು ಅಪರೂಪದ ಕಪ್ಪು ಚಿರತೆ ಬಲಿಯಾಗಿದೆ. ಕಳೆದ ಐದಾರು ವರ್ಷಗಳಲ್ಲಿ ಹತ್ತಾರು ಚಿರತೆಗಳು, ವನ್ಯಜೀವಿಗಳು ಜಿಲ್ಲೆಯಲ್ಲಿ ಮೃತಪಟ್ಟಿವೆ.

ಮತ್ತೊಂದೆಡೆ, ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ಹಾನಿಯೂ ಹೆಚ್ಚಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಕ್ಕೆಲ್ಲ ವನ್ಯಜೀವಿ ಹಾಗೂ ಮಾನವನ ನಡುವಿನ ಸಂಘರ್ಷ ಕಾರಣ ಎಂಬ ಮಾತುಗಳು ದಟ್ಟವಾಗಿವೆ. ಆದರೆ, ಈ ಬಗ್ಗೆ ವನ್ಯಜೀವಿ ತಜ್ಞರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವುದು ಬೇರೆ.

ವನ್ಯಜೀವಿ ಹಾಗೂ ಮಾನವನ ನಡುವೆ ಸಂಘರ್ಷ ಎಂಬುದು ತಪ್ಪು ಕಲ್ಪನೆ. ಸಂಘರ್ಷ ಮನುಷ್ಯನ ಹುಟ್ಟುಗುಣವೇ ಹೊರತು, ಪ್ರಾಣಿಗಳದ್ದಲ್ಲ. ವನ್ಯಜೀವಿಗಳ ಆವಾಸ ಸ್ಥಾನ ಹೊಕ್ಕಿ ಪ್ರಾಣಿಗಳನ್ನು ಬೀದಿಪಾಲು ಮಾಡಿರುವ ಮನುಷ್ಯ, ಈಗ ಕಾಡು ಪ್ರಾಣಿಗಳು ನಾಡಿಗೆ ನುಗ್ಗಿ ತೊಂದರೆ ಕೊಡುತ್ತಿವೆ ಎಂದು ಬೊಬ್ಬೆ ಹಾಕುತ್ತಿದ್ದಾನೆ. ಇಲ್ಲಿ ನೆಲೆ ಕಳೆದುಕೊಂಡ ಪ್ರಾಣಿಗಳು ಬದುಕಿಗಾಗಿ ಹೋರಾಟ ಮಾಡುತ್ತಿವೆ. ಇದಕ್ಕೆ ಪ್ರಾಣಿ–ಮಾನವ ಸಂಘರ್ಷದ ಬಣ್ಣ ಬಳಿಯಲಾಗಿದೆ ಎನ್ನುತ್ತಾರೆ ಹಿರಿಯ ವನ್ಯಜೀವಿ ತಜ್ಞ ಎನ್‌.ಎ.ಮಧ್ಯಸ್ಥ.

ಜಿಲ್ಲೆಯ, ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರರ್ಥ ಚಿರತೆಗಳ ಸಂಖ್ಯೆ ಹೆಚ್ಚಾಗಿಲ್ಲ. ಬದಲಾಗಿ, ಮಾನವನ ಹಸ್ತಕ್ಷೇಪದಿಂದ ಚಿರತೆಗಳ ಆವಾಸ ಪ್ರದೇಶ ಕ್ಷೀಣವಾಗುತ್ತಿದೆ. ಚಿರತೆಗಳಿಗೆ ಮೀಸಲಾದ ಆಹಾರ ಕಳ್ಳಬೇಟೆಯಾಗುತ್ತಿದೆ. ಚಿರತೆಗಳಿಗೆ ಜಾಗ ಸಾಲುತ್ತಿಲ್ಲ. ಪರಿಣಾಮ, ಕಾಡಂಚಿನ ಗ್ರಾಮಗಳಿಗೆ ನುಗ್ಗಿ, ನಾಯಿ, ದನ ಕರುಗಳನ್ನು ಹೊತ್ತೊಯ್ಯುತ್ತಿವೆ. ಇಲ್ಲಿ ಸಂಘರ್ಷವಲ್ಲ; ಪ್ರಾಣಿಗಳ ಬದುಕಿನ ಪ್ರಶ್ನೆ ಮುಖ್ಯವಾಗಿ ಕಾಣುತ್ತದೆ ಎನ್ನುತ್ತಾರೆ ಅವರು.

ಅವ್ಯಾಹತ ಕಾಡುಗಳ ನಾಶ, ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ಯೋಜನೆಗಳ ಅನುಷ್ಠಾನ, ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಾಣಿಗಳ ಆವಾಸಸ್ಥಾನ ಒತ್ತುವರಿ, ಅಣೆಕಟ್ಟುಗಳ ನಿರ್ಮಾಣ, ವಿದ್ಯುತ್ ಯೋಜನೆಗಳಿಂದ ಪ್ರಾಣಿಗಳು ನೆಲೆ ಕಳೆದುಕೊಳ್ಳುತ್ತಿವೆ ಎನ್ನುತ್ತಾರೆ.

ಆಗುಂಬೆ ಘಾಟಿಯಲ್ಲಿ ಅತಿ ಹೆಚ್ಚು ಕಾಣಸಿಗುವ ಸಿಂಗಳೀಕಗಳು ಕಾಡಿನ ಮಧ್ಯೆ ವಾಸಮಾಡುವ ಅಪರೂಪದ ಪ್ರಬೇಧ. ಮನುಷ್ಯ ಅವುಗಳ ಬದುಕಿನ ಸ್ವರೂಪ ಬದಲಿಸಿದ್ದು, ಸ್ವಚ್ಛಂದವಾಗಿ ಕಾಡಿನಲ್ಲಿ ಸಿಗುತ್ತಿದ್ದ ಹೆಬ್ಬಲಸು ಹಾಗೂ ಇತರೆ ಜಾತಿಯ ಹಣ್ಣುಗಳನ್ನು ತಿಂದು ಬದುಕುತ್ತಿದ್ದ ಸಿಂಗಳೀಕಗಳು ಇಂದು ಘಾಟಿಯಲ್ಲಿ ಸಂಚರಿಸುವ ವಾಹನಗಳಿಂದ ಮನುಷ್ಯರು ತೂರುವ ಆಹಾರಗಳಿಗೆ ಕೈವೊಡ್ಡುತ್ತಿವೆ. ವಾಹನಗಳ ಚಕ್ರಕ್ಕೆ ಸಿಕ್ಕು ಬಲಿಯಾಗುತ್ತಿವೆ.

ಸಿಂಗಳೀಕಗಳ ಇಂದಿನ ಪರಿಸ್ಥಿತಿಗೆ ಕಾರಣ ಈ ಭಾಗದಲ್ಲಿ ಟಿಂಬರ್ ಲಾಬಿ ಹೆಚ್ಚಾಗಿದ್ದು, ಕಾಡಿನಲ್ಲಿದ್ದ ಹೆಬ್ಬಲಸಿನ ಮರಗಳು ದಂಧೆಕೋರರ ಪಾಲಾಗುತ್ತಿವೆ. ಕಾಡಿನಲ್ಲಿ ಆಹಾರ ಸಿಗದೆ ಸಿಂಗಳೀಕಗಳು ಮಂಗಗಳಂತೆ ಮನುಷ್ಯನ ಮುಂದೆ ಆಹಾರಕ್ಕಾಗಿ ಅಂಗಲಾಚುತ್ತಿವೆ. ಘಾಟಿಯಲ್ಲಿ ಸಿಂಗಳೀಕಗಳಿಗೆ ಆಹಾರ ಎಸೆದರೆ ದಂಡ ಹಾಕುವುದಾಗಿ ಹೇಳುವ ಅರಣ್ಯ ಇಲಾಖೆ ಅಧಿಕಾರಿಗಳು, ‌ಅವುಗಳ ಆಹಾರ ಸಮಸ್ಯೆ ನೀಗಿಸಲು ತೆಗೆದುಕೊಂಡಿರುವ ಪರ್ಯಾಯ ಕ್ರಮಗಳು ಏನು ಎಂದು ಪ್ರಶ್ನಿಸುತ್ತಾರೆ ಮದ್ಯಸ್ಥ.

ಆದರೆ, ಅರಣ್ಯ ಇಲಾಖೆಯ ವಾದವೇ ಬೇರೆ. ವನ್ಯಜೀವಿ–ಮಾನವ ಸಂಘರ್ಷ ತಡೆಗೆ ಇಲಾಖೆ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ರೈತರ ಬೆಳೆಗೆ ಹೆಚ್ಚು ಹಾನಿಯಾಗುತ್ತಿರುವುದು ಮಂಗಗಳು ಹಾಗೂ ಕಾಡು ಕೋಣಗಳಿಂದ. ಇದಕ್ಕೆ ಪರಿಹಾರವಾಗಿ, ಕಾಡಿನಲ್ಲಿ ಸ್ಥಳೀಯ ಜಾತಿಯ ಹಣ್ಣಿನ ಗಿಡಗಳಾದ ಹೆಬ್ಬಲಸು, ಮಾವು, ನೇರಳೆ, ಪುನರ್ಪುಳಿ, ಹಾಲ, ಹತ್ತಿ ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದರು.

ಕಾಡಂಚಿನ ಗ್ರಾಮಗಳ ರೈತರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಸೋಲಾರ್ ತಂತಿಬೇಲಿ ಅಳವಡಿಕೆಗೆ ಶೇ 50ರಷ್ಟು ಅನುದಾನ ನೀಡಲಾಗುತ್ತಿದೆ. ಹೆಚ್ಚು ರೈತರ ಬೆಳೆಗಳಿರುವ ಕಡೆಯ ಕಾಡಿನ ಸುತ್ತಲೂ ಟ್ರಂಚ್‌ಗಳನ್ನು ತೋಡಿ ಪ್ರಾಣಿಗಳು ನುಗ್ಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಾಣಿಗಳಿಂದ ಬೆಳೆ ಕಳೆದುಕೊಂಡರೆ ಪರಿಹಾರ ನೀಡಲಾಗುತ್ತಿದೆ. ಕಳೆದ ವರ್ಷ ₹ 22 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು ಡಿಎಫ್‌ಒ.

‘ಕಾಡಿರುವುದೇ ಪ್ರಾಣಿಗಳಿಗೆ’

ದೇಶದಲ್ಲಿ ವನ್ಯಜೀವಿಗಳಿಗೆ ಮೀಸಲಿಟ್ಟಿರುವ ಅರಣ್ಯ ಪ್ರದೇಶ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಅವ್ಯಾಹತ ಅರಣ್ಯ ಅತಿಕ್ರಮಣ ನಡೆದರೆ, ನಾಡಿಗೆ ಬರುವ ಪ್ರಾಣಿಗಳು ಮನುಷ್ಯನ ಕ್ರೋಧಕ್ಕೆ ಬಲಿಯಾಗಬೇಕಾಗುತ್ತವೆ. ಮನುಷ್ಯ ಎಲ್ಲಿ ಬೇಕಾದರೂ ಬದುಕಬಲ್ಲ; ಆದರೆ, ಪ್ರಾಣಿಗಳು ಕಾಡಿನಲ್ಲಿ ಮಾತ್ರ ಬದುಕುತ್ತವೆ. ಅವುಗಳ ಆವಾಸಸ್ಥಾನ ಅತಿಕ್ರಮಣ ಸಲ್ಲದು, ಕಾಡಿರುವುದೇ ಪ್ರಾಣಿಗಳಿಗೆ. ವನ್ಯಜೀವಿಗಳು ತುಂಬಿರುವ ಕಾಡುಗಳು ಇರುವವರೆಗೂ, ಮನುಷ್ಯ ಕೂಡ ಸುಖವಾಗಿ ಬದುಕಬಲ್ಲ, ಕಾಡುಗಳು ನಾಶ, ಮನುಷ್ಯನ ವಿನಾಶಕ್ಕೆ ಮುನ್ನುಡಿ ಎಂದು ವನ್ಯಜೀವಿ ತಜ್ಞ ಎನ್‌.ಎ.ಮಧ್ಯಸ್ಥ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT