ಶನಿವಾರ, ಅಕ್ಟೋಬರ್ 23, 2021
21 °C

ಹವ್ಯಕ ಕನ್ನಡದಲ್ಲಿ ಛಂದೋಬದ್ಧ ಯಕ್ಷಗಾನ ಪ್ರಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಈಚೆಗೆ ಅದಮಾರು ಮಠದ ಆಶ್ರಯದಲ್ಲಿ ತಾಮರಸ ಕೂಟ ಬಾರಕೂರು ಹಾಗೂ ಯಕ್ಷಕುಟೀರ ಟ್ರಸ್ಟ್ ಸಹಯೋಗದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಹವ್ಯಕ ಕನ್ನಡ ಭಾಷೆಯಲ್ಲಿ ರಚಿಸಿರಯವ ‘ಬಾಣದ್ ಸೇತ್ವೆ’ ಯಕ್ಷಗಾನ ಪ್ರಸಂಗ ಕೃತಿಯನ್ನು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥ ಶ್ರೀಗಳು ಅನಾವರಣಗೊಳಿಸಿದರು.

‘ಶರಸೇತು ಬಂಧನದ ಕಥೆ ಮಹಾಭಾರತದಲ್ಲಿ ಇದೆಯೋ ಇಲ್ಲವೋ, ಆದರೆ ಕಥೆಯಲ್ಲಿ, ಕಿರಿಯರನ್ನು ಎತ್ತರಕ್ಕೆ ತರುವಾಗ ಹಿರಿಯರು ತ್ಯಾಗ ಮಾಡಬೇಕೆಂಬ ಬಹಳ ಉತ್ತಮವಾದ ಸಂದೇಶವಿದೆ. ಆಂಜನೇಯ, ಅರ್ಜುನನಿಗಿಂತ ದೊಡ್ಡ ಭಕ್ತ. ಆದರೂ ಕೃಷ್ಣ, ಅರ್ಜುನನ್ನು ಎತ್ತರಕ್ಕೆ ಏರಿಸುವ ಸಂದರ್ಭದಲ್ಲಿ ಅರ್ಜುನನಿಗಿಂತಲೂ ಎತ್ತರದಲ್ಲಿರುವ ಆಂಜನೇಯ ಗೆಲುವನ್ನು ತ್ಯಾಗ ಮಾಡಿದ ಎಂಬುದು ಇಲ್ಲಿಯ ಸಂದೇಶ ಎಂದರು.

ಶಿವಕುಮಾರ್ ಬರೆದ ‘ಬಾಣದ ಸೇತುವೆ’ ‘ಬಾಡದ ಸೇತುವೆ’ ಆಗಿರಲಿ. ಅವರ ಪುಸ್ತಕಕ್ಕೆ ಸರ್ಕಾರ ಪ್ರಶಸ್ತಿ ನೀಡಿರುವುದು ಅಭಿನಂದನಾರ್ಯ. ಶಿವಕುಮಾರ್ ಪೂರ್ಣಪ್ರಜ್ಞ ಸಂಸ್ಥೆಯ ಅಧ್ಯಾಪಕನಾಗಿರುವುದು ಹೆಮ್ಮೆಯ ವಿಷಯ ಎಂದು ಶ್ರೀಗಳು ಹೇಳಿದರು.

ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕೃತಿಯ ಕುರಿತು ಮಾತನಾಡಿ, ‘ಶಿವಕುಮಾರ ಅಳಗೋಡು ಹವ್ಯಕ ಕನ್ನಡ ಭಾಷೆಯಲ್ಲಿ ರಚಿಸಿರುವ ‘ಬಾಣದ್ ಸೇತ್ವೆ’ ಪ್ರಸಂಗಕ್ಕೆ ಕ್ರಿ.ಶ. 1794-1854ರ ಅವಧಿಯಲ್ಲಿ ಜೀವಿಸಿದ್ದ ಹಟ್ಟಿಯಂಗಡಿ ರಾಮಭಟ್ಟರು ಬರೆದ ಸುಭದ್ರಾ ಕಲ್ಯಾಣ ಪ್ರಸಂಗದೊಳಗಿನ ‘ಶರಸೇತು ಬಂಧನ’ ಪ್ರಸಂಗವು ಮೂಲ ಆಕರವಾಗಿದೆ ಎಂದರು.

ಸಾಗರ, ಶಿವಮೊಗ್ಗ, ಸಿದ್ಧಾಪುರ, ಯಲ್ಲಾಪುರ ಭಾಗದ ಹವ್ಯಕ ಕನ್ನಡವನ್ನು ಛಂದೋಬದ್ಧವಾದ ಪದ್ಯಕ್ಕೆ ಹೊಂದಿಸಿ ಆದಿ, ಅಂತ್ಯ ಪ್ರಾಸವಿರಿಸಿ  ಪದ್ಯಗಳನ್ನು ರಚಿಸುವುದು ಕಷ್ಟದ ಕೆಲಸವಾಗಿದ್ದರೂ, ಅದನ್ನು ಕನ್ನಡದ ಉಪಭಾಷೆಯಲ್ಲಿ ಸುಲಲಿತವಾಗಿ ಬರೆಯಲಾಗಿದೆ ಎಂದರು.

ವಕೀಲರಾದ ಪ್ರದೀಪ್ ಕುಮಾರ್, ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ, ಕೃತಿಕಾರ ಶಿವಕುಮಾರ ಅಳಗೋಡು, ಸುಹಾಸ್ ಭಟ್, ಜಟ್ಟೀಮನೆ ಇದ್ದರು. ಕೃತಿ ಅನಾವರಣದ ಬಳಿಕ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಆಶ್ರಯದಲ್ಲಿ ಪ್ರಸಿದ್ಧ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಕ್ಯಾದಗಿ ಮಹಾಬಲೇಶ್ವರ ಭಟ್, ಲಂಬೋದರ ಹೆಗಡೆ, ಶ್ರೀನಿವಾಸ ಪ್ರಭು, ರವಿ ಮೋತಿಗುಡ್ಡೆ, ಬಂಗಾರಮಕ್ಕಿ ರಾಮಚಂದ್ರ ಭಟ್, ಆದಿತ್ಯ ಹೆಗಡೆ, ಕಿರಣ್ ಹಾಡಿಕೈ ಅವರಿಂದ ಹವ್ಯಕ ಭಾಷೆಯಲ್ಲಿಯೇ ‘ಬಾಣದ್ ಸೇತ್ವೆ’ ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು