ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಾರುಕಟ್ಟೆ ಅನಿಶ್ಚಿತ, ಅಡಿಕೆ ಬೆಳೆಗಾರರಿಗೆ ಆತಂಕ

ಅಡಿಕೆ ಹೊರ ರಾಜ್ಯ ಸಾಗಾಟಕ್ಕೆ ಅನುಮತಿ ಸಿಗುವುದು ಅನುಮಾನ
Last Updated 9 ಏಪ್ರಿಲ್ 2020, 5:37 IST
ಅಕ್ಷರ ಗಾತ್ರ

ಶಿರಸಿ: ಅತಿ ಹೆಚ್ಚು ಅಡಿಕೆ ವಿಕ್ರಿಯಾಗುವ ಹಂಗಾಮಿನ ಹೊತ್ತಿಗೇ ಕೊರೊನಾ ವೈರಸ್‌ ಸೋಂಕು ಹರಡುವ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾದ ಪರಿಣಾಮ, ಅಡಿಕೆ ಬೆಳೆಗಾರರು ಭವಿಷ್ಯದ ಮಾರುಕಟ್ಟೆಯ ಬಗ್ಗೆ ಚಿಂತತರಾಗಿದ್ದಾರೆ.

ವರ್ಷವಿಡೀ ಮಾರುಕಟ್ಟೆಯಲ್ಲಿ ಅಡಿಕೆ ವಹಿವಾಟು ನಡೆಯುತ್ತಿದ್ದರೂ, ಮಾರ್ಚ್‌ನಿಂದ ಮೇವರೆಗೆ, ಅತಿಹೆಚ್ಚು ಉತ್ಪನ್ನ ಮಾರುಕಟ್ಟೆಗೆ ಬರುತ್ತದೆ. ಮಳೆಗಾಲದ ಸಿದ್ಧತೆ, ತೋಟದ ಅಭಿವೃದ್ಧಿ, ಸಾಲ ಭರಣ ಮೊದಲಾದ ಕಾರಣಗಳಿಂದಾಗಿ ರೈತರು, ಸಿದ್ಧಪಡಿಸಿಟ್ಟುಕೊಂಡಿರುವ ಕೆಂಪಡಿಕೆ ಹಾಗೂ ಚಾಲಿಯನ್ನು ಮಾರಾಟಕ್ಕೆ ತರುತ್ತಾರೆ. ಈ ಬಾರಿ ಏರುಮುಖದಲ್ಲಿ ಸಾಗಿರುವ ಅಡಿಕೆ ದರವನ್ನು ಕಂಡು, ಬೆಳೆಗಾರರು ಸಂತಸದಲ್ಲಿರುವಾಗಲೇ, ಕೊರೊನಾ ವೈರಸ್‌ನ ಭೂತ, ಆ ಖುಷಿಯನ್ನು ಕಸಿದುಕೊಂಡಿದೆ.

ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದ ಮೇಲೆ ಅಡಿಕೆ ವಹಿವಾಟು ಸ್ಥಗಿತಗೊಂಡಿದೆ. ಹೊರ ರಾಜ್ಯಗಳಿಗೆ ಹೋಗುತ್ತಿದ್ದ ಅಡಿಕೆ ಸಾಗಾಟ ವಾಹನಗಳು ಶೆಡ್‌ನಲ್ಲಿ ನಿಂತಿವೆ. ಇದೇ ವೇಳೆಗೆ, ಕೋವಿಡ್–19 ವ್ಯಾಪಕವಾಗಿ ಹರಡುತ್ತಿರುವ ಕಾರಣ ದೆಹಲಿ, ಉತ್ತರ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸಿರುವ ಆದೇಶ ಹೊರಬಿದ್ದಿದೆ. ಇದು ಅಡಿಕೆ ಬೆಳೆಗಾರರನ್ನು ಇನ್ನಷ್ಟು ಚಿಂತೆಗೀಡುಮಾಡಿದೆ.

‘ಉಗುಳುವಿಕೆ ನಿಷೇಧ ತಾತ್ಕಾಲಿಕ ಆದೇಶವಾಗಿರಬಹುದು. ಆದರೆ, ಉತ್ತರ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ, ನಮ್ಮಲ್ಲಿ ಅಡಿಕೆ ಮಾರುಕಟ್ಟೆ ಆರಂಭವಾದರೂ, ಅಲ್ಲಿ ಖರೀದಿಗೆ ಪ್ರಕ್ರಿಯೆ ವಿಳಂಬವಾಗಬಹುದು. ಅಂತರ ರಾಜ್ಯ ಸಾಗಣೆಗೆ ಅನುಮತಿ ನೀಡುವುದು ಸರ್ಕಾರದ ಕೈಯಲ್ಲಿದೆ. ಹೀಗಾಗಿ, ಆರಂಭಿಕ ದಿನಗಳಲ್ಲಿ ಕೊಂಚ ವ್ಯತ್ಯಯವಾದರೂ, ವ್ಯವಸ್ಥೆ ಸರಿಯಾದರೆ, ಅಡಿಕೆ ದರದಲ್ಲಿ ತೀರಾ ವ್ಯತ್ಯಾಸ ಆಗಲಾರದು. ಅಡಿಕೆ ಬಳಕೆ ಮಾಡುವ ಪ್ರದೇಶಗಳಲ್ಲಿ ಸಂಗ್ರಹ ಖಾಲಿಯಾಗಿದೆ. ಇರುವ ಅಲ್ಪಸ್ವಲ್ಪ ಸಂಗ್ರಹವು ಕಾಳಸಂತೆಯಲ್ಲಿ ದುಪ್ಪಟು ದರಕ್ಕೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

‘ಕಳೆದ ವರ್ಷ ಮಾರ್ಚ್‌ನಲ್ಲಿ ಸುಮಾರು 15 ಸಾವಿರ ಕ್ವಿಂಟಲ್ ಅಡಿಕೆ ವಿಕ್ರಿಯಾಗಿತ್ತು. ಈ ವರ್ಷ ಮಾರ್ಚ್ ಆರಂಭದಲ್ಲಿ 5000 ಕ್ವಿಂಟಲ್ ಮಾತ್ರ ವಿಕ್ರಿಯಾಗಿದೆ. ಮಾರ್ಚ್ ಹಾಗೂ ಏಪ್ರಿಲ್ ಸೇರಿ ಸುಮಾರು 20ಸಾವಿರ ಕ್ವಿಂಟಲ್ ಅಡಿಕೆಯ ಶಿಲ್ಕು ರೈತರ ಬಳಿಯಿದೆ. ರೈತರು ಉತ್ಪನ್ನ ಸಿದ್ಧಪಡಿಸಿಟ್ಟುಕೊಂಡು, ಮಾರುಕಟ್ಟೆ ಆರಂಭವಾಗುವುದನ್ನು ಕಾಯುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ ವ್ಯವಸ್ಥಾಪಕ ರವೀಶ ಹೆಗಡೆ.

‘ಈ ವರ್ಷ ಶೇ 25ರಷ್ಟು ಬೆಳೆ ಕಡಿಮೆಯಿರುವುದರಿಂದ ಅಡಿಕೆ ದರ ಇಳಿಕೆ ಆಗುವ ಸಾಧ್ಯತೆ ಕಡಿಮೆ, ರೈತರು ಆತಂಕಪಡಬೇಕಾಗಿಲ್ಲ. ಈಗಾಗಲೇ ಹೊರ ರಾಜ್ಯಗಳಲ್ಲಿ ಅಡಿಕೆಯ ಸಂಗ್ರಹ ಖಾಲಿಯಾಗಿರುವುದರಿಂದ, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ದರ ಹೆಚ್ಚಳವಾಗಬಹುದೆಂದು ರೈತ ಅಡಿಕೆ ಸಂಗ್ರಹಿಸಿಟ್ಟುಕೊಂಡಿದ್ದಾನೆ. ಆದಷ್ಟು ಶೀಘ್ರ ಮಾರುಕಟ್ಟೆ ಆರಂಭವಾದರೆ ಚಿಂತೆಯಿಲ್ಲ. ಒಮ್ಮೆ ಲಾಕ್‌ಡೌನ್ ಮುಂದುವರಿದರೆ, ಬೆಳೆಗಾರ ಒತ್ತಡಕ್ಕೆ ಸಿಲುಕುತ್ತಾನೆ. ಮಾಧ್ಯಮಿಕ ಸಾಲ, ಬೆಳೆಸಾಲ ತುಂಬಲು ರೈತನಿಗೆ ಹಣದ ಅವಶ್ಯಕತೆ ಇರುತ್ತದೆ. ಸೊಸೈಟಿಗೆ ತಂದು ಶಿಲ್ಕು ಮಾಡಲು, ವಾಹನ ಸಂಚಾರಕ್ಕೆ ಅನುಮತಿ ಸಿಗುತ್ತಿಲ್ಲ. ಹೀಗಾಗಿ, ಅಡಿಕೆ ಬೆಳೆಗಾರನಿಗೆ ಹಣದ ಅಡಚಣೆಯಾಗುತ್ತಿದೆ’ ಎನ್ನುತ್ತಾರೆ ಬೆಳೆಗಾರ ಸಂದೇಶ ಭಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT