ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕ, ರೈತರ ಸೇವೆ ಪರಿಚಯ

680ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಪ್ರಯತ್ನ
Last Updated 6 ಏಪ್ರಿಲ್ 2022, 15:57 IST
ಅಕ್ಷರ ಗಾತ್ರ

ಶಿರಸಿ: ‘ಗಡಿಯಲ್ಲಿ ದೇಶ ಕಾಯುವ ಸೈನಿಕ, ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರೆ ಇಡೀ ಸಮಾಜಕ್ಕೆ ಸಂದೇಶ ತಲುಪುತ್ತದೆ. ಅದಕ್ಕಾಗಿ ನಿರಂತರ ಕಾರ್ಯಕ್ರಮ ಮಾಡುತ್ತಿದ್ದೇವೆ’

ಹೀಗೆ ಮಾತಿಗಿಳಿದವರು ತಾಲ್ಲೂಕಿನ ವದ್ದಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮನೋಜ್ ಪಾಲೇಕರ್. ಇವರು ನಗರದ ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸುರೇಶ್ ಭಟ್ ಅವರೊಡನೆ ಸೇರಿ ಕಳೆದ ಹದಿನೈದಕ್ಕೂ ಹೆಚ್ಚು ವರ್ಷದಿಂದ ಯೋಧ–ರೈತರ ಕುರಿತ ರೂಪಕ ಪ್ರದರ್ಶಿಸುತ್ತಿದ್ದಾರೆ. ಈವರೆಗೆ 688 ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆ ನೀಡಿದ್ದಾರೆ.

‘ಸೋದರ ಮಾವ ಭಾರತೀಯ ಸೇನೆಯಲ್ಲಿದ್ದರು. ಭಾರತ–ಚೀನಾ ಯುದ್ಧದಲ್ಲಿ ಕೈ ಮತ್ತು ಕಾಲಿನ ಕೆಲವು ಬೆರಳುಗಳನ್ನು ಕಳೆದುಕೊಂಡಿದ್ದರು. ಅವರನ್ನುನೀಡಿದಾಗಲೆಲ್ಲ ಮರುಕ ಹುಟ್ಟುತ್ತಿತ್ತು. ಸೈನ್ಯಕ್ಕೆ ಸೇರುವ ನನ್ನ ಕನಸು ಈಡೇರಲಿಲ್ಲ. ಅದರ ಬದಲು ಶಾಲಾ ಶಿಕ್ಷಕನಾದೆ. ಈ ಹುದ್ದೆಯಿಂದಲಾದರೂ ಸೈನ್ಯದ ಬಗ್ಗೆ ಪ್ರಚಾರ ಮಾಡಬೇಕು ಎಂಬ ಕನಸಿನೊಂದಿಗೆ ಕಲಾ ಭಾರತಿ ಸಾಂಸ್ಕೃತಿಕ ಸಂಘ ರಚಿಸಿಕೊಂಡು ಸೈನಿಕರ ಕುರಿತು ಮಕ್ಕಳಿಗೆ ತಿಳಿಸುವ ಕೆಲಸ ಆರಂಭಿಸಿದೆ’ ಎಂದರು ಮನೋಜ್.

‘ಯೋಧ–ರೈತ ನಮನ’ ಎಂಬ ನಾಲ್ಕೂವರೆ ನಿಮಿಷದ ರೂಪಕ ರಚಿಸಿದ್ದೇವೆ. ಯೋಧನ ಪಾತ್ರದಲ್ಲಿ ನಾನು, ರೈತನ ಪಾತ್ರದಲ್ಲಿ ಸುರೇಶ್ ಅಭಿನಯಿಸುತ್ತೇವೆ. ಯುವ ಜನತೆಯನ್ನೇ ಗುರಿಯಾಗಿಟ್ಟು ಕಾರ್ಯಕ್ರಮ ನೀಡುತ್ತೇವೆ. ದೊಡ್ಡ ಮಟ್ಟದ ಉತ್ಸವಗಳಿದ್ದಲ್ಲಿ 22 ಜನರ ತಂಡದೊಂದಿಗೆ ತೆರಳುತ್ತೇವೆ’ ಎಂದು ವಿವರಿಸಿದರು.

‘ಆರಂಭಿಕ ದಿನಗಳಲ್ಲಿ ಯುವಕರು ರೂಪಕ ವೀಕ್ಷಣೆಗೆ ನಿರಾಸಕ್ತಿ ತೋರುತ್ತಿದ್ದರು. ಈಚೆಗೆ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಸೈನ್ಯಕ್ಕೆ ಸೇರಬೇಕು. ಕೃಷಿ ಮಾಡಬೇಕು ಎಂಬ ತಮ್ಮ ಹಂಬಲವನ್ನು ನಮ್ಮ ಬಳಿ ಹಂಚಿಕೊಳ್ಳುತ್ತಾರೆ. ಆಗ ನಮಗೆ ಸಾರ್ಥಕ ಭಾವ ಮೂಡುತ್ತದೆ’ ಎಂದರು.

ಹಣದ ಅಪೇಕ್ಷೆ ಇಲ್ಲ:

‘ದುಡಿಮೆಗೆ ನಮಗೆ ಉದ್ಯೋಗವಿದೆ. ರೂಪಕದ ಮೂಲಕ ಸಮಾಜಕ್ಕೆ ಯೋಧರು, ರೈತರ ಕರ್ತವ್ಯದ ಬೆಲೆ ತಿಳಿಸುವದಷ್ಟೆ ನಮ್ಮ ಗುರಿ. ಕೆಲವು ಕಾರ್ಯಕ್ರಮಗಳಲ್ಲಿ ನಮಗೆ ಗೌರವಧನ ನೀಡುತ್ತಾರೆ. ಇನ್ನೂ ಕೆಲವು ಕಡೆ ಸಂಘಟಕರು ನೀಡಿದ್ದ ಹಣವನ್ನು ನಾವೇ ಮರಳಿಸಿದ ಉದಾಹರಣೆಯೂ ಇದೆ. ಕಳೆದ ವರ್ಷ ಕಾರ್ಯಕ್ರಮಗಳಿಂದ ಸಂಗ್ರಹವಾಗಿದ್ದ ಹಣದಲ್ಲಿ 83 ಬಡ ಕುಟುಂಬಗಳಿಗೆ ನೆರವು ಒದಗಿಸಿದ್ದೆವು’ ಎನ್ನುತ್ತಾರೆ ಮನೋಜ್ ಪಾಲೇಕರ್.

---------

ಸೈನಿಕ ಮತ್ತು ರೈತ ದೇಶದ ಎರಡು ಕಣ್ಣುಗಳಿದ್ದಂತೆ. ಅವರ ಕರ್ತವ್ಯದ ಬಗ್ಗೆ ಯುವಕರಿಗೆ ತಿಳಿಸಲು ಉಚಿತವಾಗಿ ಕಾರ್ಯಕ್ರಮ ಮಾಡುತ್ತೇವೆ.

ಮನೋಜ್ ಪಾಲೇಕರ್

ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT