ಗುರುವಾರ , ಅಕ್ಟೋಬರ್ 21, 2021
21 °C

ಶಿರಸಿ: ಮೆಕ್ಕೆ ಜೋಳಕ್ಕೆ ಪಕ್ಷಿ ಕಾಟ, ಬೆಳೆ ತಿನ್ನುತ್ತಿರುವ ಗಿಳಿ, ಅಳಿಲು

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಸುರಕ್ಷಿತವಾಗಿ ಬೆಳೆ ಬೆಳೆಯುವ ರೈತರ ಆಸೆ ಒಂದಲ್ಲ ಒಂದು ಹಂತದಲ್ಲಿ ಕಮರುತ್ತಿದೆ. ಇದಕ್ಕೆ ಬನವಾಸಿ ಭಾಗದಲ್ಲಿ ಮೆಕ್ಕೆಜೋಳಕ್ಕೆ ಪಕ್ಷಿಗಳು ಕಾಟ ಕೊಡುತ್ತಿರುವುದೇ ಸಾಕ್ಷಿ.

ಬಿತ್ತನೆ ಮುಗಿದು ಗಿಡಗಳು ಬೆಳೆಯುತ್ತಿದ್ದಂತೆ ಅವುಗಳಿಗೆ ರೋಗಬಾಧೆ ಕಾಡದಂತೆ ಪ್ರತಿ ಹಂತದಲ್ಲಿ ರೈತರು ಎಚ್ಚರ ವಹಿಸುತ್ತಿದ್ದಾರೆ. ಇದರ ಹೊರತಾಗಿ ಎದುರಾಗುವ ಮಂಗ, ಕಾಡುಹಂದಿ ಉಪಟಳಕ್ಕೂ ಕಡಿವಾಣ ಹಾಕಲು ಹಲವು ರೀತಿಯ ತಂತ್ರ ಅನುಸರಿಸಿದ್ದಾರೆ.

ಹೀಗೆ ಬೆಳೆ ರಕ್ಷಿಸುವ ಹಂತದಲ್ಲಿ ಗಿಳಿ, ಬುಲ್‍ಬುಲ್ ಜಾತಿಯ ಪಕ್ಷಿಗಳು ಬೆಳೆ ತಿನ್ನಲು ಗದ್ದೆಗೆ ದಾಳಿ ಇಡುತ್ತಿರುವುದನ್ನು ತಪ್ಪಿಸುವುದೇ ಕಷ್ಟವಾಗಿದೆ. ಇದರ ಜತೆಗೆ ಅಳಿಲು ಕಾಟವೂ ಹೆಚ್ಚುತ್ತಿದೆ. ಆಗಷ್ಟೆ ಬೆಳವಣಿಗೆ ಹಂತ ಕಾಣುತ್ತಿರುವ ಜೋಳದ ತೆನೆಗಳನ್ನು ತಿನ್ನುತ್ತಿವೆ. ಕಿರವತ್ತಿ, ಬಂಕನಾಳ ಭಾಗದಲ್ಲಿ ಹತ್ತಾರು ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾದ ಮೆಕ್ಕೆಜೋಳ ಇವುಗಳಿಗೆ ಆಹಾರವಾಗಿದೆ. ಹೀಗಾಗಿ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ರೈತರು ನಷ್ಟ ಎದುರಿಸುವುದು ಅನಿವಾರ್ಯವಾಗಿದೆ.

‘ಪ್ರತಿ ಎಕರೆ ಭತ್ತ ಬೆಳೆಯಲು ಕನಿಷ್ಠ ₹15 ಸಾವಿರದಿಂದ ರಿಂದ 20 ಸಾವಿರ ವೆಚ್ಚವಾಗುತ್ತದೆ. ಕಾಡುಪ್ರಾಣಿಗಳ ಉಪಟಳ ತಡೆಗೆ ಮಾಡುವ ಖರ್ಚು ಪ್ರತ್ಯೇಕ. ಇಷ್ಟೆಲ್ಲ ಮಾಡಿದರೂ ಸದ್ಯ ಎದುರಾಗಿರುವ ಪಕ್ಷಿಗಳ ಉಪಟಳ ತಡೆಯಲು ಯಾವ ಮಾರ್ಗೋಪಾಯವೂ ಕಾಣುತ್ತಿಲ್ಲ. ವಾರದೊಳಗೆ ಮೂರು ಎಕರೆಗೂ ಹೆಚ್ಚು ಪ್ರದೇಶದ ಬೆಳೆಯನ್ನು ಅವು ಹಾಳುಗೆಡವಿದೆ’ ಎನ್ನುತ್ತಾರೆ ಮೆಕ್ಕೆಜೋಳ ಬೆಳೆದ ಕಿರವತ್ತಿಯ ತಬ್ರೇಜ್ ಶೇಖ್.

‘ಮೆಕ್ಕೆಜೋಳ ರೋಗಬಾಧೆ ಇಲ್ಲದ ಬೆಳೆ ಎಂದು ಮೊದಲು ರೈತರು ಹೆಚ್ಚು ಬೆಳೆಯುತ್ತಿದ್ದರು. ಈಗ ಪ್ರತಿ ಹಂತದಲ್ಲೂ ರೋಗ, ಪ್ರಾಣಿ ಕಾಟ ಎದುರಿಸುತ್ತಿದ್ದೇವೆ. ಹೀಗಾಗಿ ಇದನ್ನು ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಗದ್ದೆಯಲ್ಲಿ ಅಲ್ಲಲ್ಲಿ ಮಾತ್ರವೇ ಬೆಳೆದ ಜೋಳದತ್ತ ಪಕ್ಷಿಗಳು ದೃಷ್ಟಿ ನೆಟ್ಟಿದ್ದರಿಂದ ಹಾನಿ ಹೆಚ್ಚಿದೆ’ ಎನ್ನುತ್ತಾರೆ ರೈತ ದನಗನಹಳ್ಳಿಯ ಎಲ್ಲಪ್ಪ ಬಾರ್ಕೇರ.

‘ಜೋಳದ ಕುಂಡಿಗೆಗಳು ಬೆಳೆದ ಮೇಲೆ ಮಳೆ ಬಿದ್ದ ನಂತರ ಅವುಗಳ ಮೇಲ್ಪದರ ಒಡೆಯುವುದರಿಂದ ಹಕ್ಕಿಗಳು ತಿನ್ನಲು ಅವಕಾಶವಾಗಿರಬಹುದು. ಈ ಸಮಸ್ಯೆ ಬಗ್ಗೆ ರೈತರಿಂದ ದೂರು ಬಂದಿಲ್ಲ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಪ್ರತಿಕ್ರಿಯಿಸಿದರು.

ಬಲೆ ಬೀಸುವ ಪ್ರಯತ್ನ ಕೈಬಿಟ್ಟೆವು: ‘ಮೆಕ್ಕೆಜೋಳಕ್ಕೆ ಕಾಡುವ ಪಕ್ಷಿಗಳ ಕಾಟ ತಪ್ಪಿಸಲು ಕೆಲವು ರೈತರು ಕಳೆದ ವರ್ಷ ಬಲೆ ಹಾಕಿ ಬೆಳೆ ರಕ್ಷಣೆಗೆ ಮುಂದಾದರು. ಕೆಲವು ಪಕ್ಷಿಗಳ ಬಲೆಯಲ್ಲಿ ಸಿಕ್ಕಿ ಸತ್ತವು. ಹಾವುಗಳು ಸಿಲುಕಿಕೊಂಡು ತೊಂದರೆ ಅನುಭವಿಸಿದೆವು. ಹೀಗಾಗಿ ಈ ವರ್ಷ ಅಂತಹ ಪ್ರಯತ್ನಕ್ಕೆ ಮುಂದಾಗಿಲ್ಲ’ ಎನ್ನುತ್ತಾರೆ ರೈತ ರಾಘವೇಂದ್ರ ನಾಯ್ಕ.

‘ಜೂನ್‍ನಲ್ಲಿ ಬಿತ್ತಿದರೆ ನಾಲ್ಕು ತಿಂಗಳಲ್ಲಿ ಬೆಳೆ ಕೈಗೆ ಸಿಗುತ್ತದೆ. ಜೋಳ ಮಾರಿ ದೀಪಾವಳಿ ಹಬ್ಬ ಆಚರಿಸುವ ರೈತರು ಹಲವರಿದ್ದಾರೆ. ಪಕ್ಷಿಕಾಟದಿಂದ ಬೆಳೆ ಕಳೆದುಕೊಂಡವರು ಹಬ್ಬಕ್ಕೆ ಸಾಲ ಮಾಡಬೇಕಾದ ಸ್ಥಿತಿ ಬಂದಿದೆ’ ಎಂದು ಅವರು ಬೇಸರ ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು