ಸೋಮವಾರ, ಆಗಸ್ಟ್ 10, 2020
23 °C
ಕೊರೊನಾ ನಿಯಂತ್ರಣದ ಸಲಕರಣೆ ಖರೀದಿಯಲ್ಲಿ ಭ್ರಷ್ಟಾಚಾರ

ಹೆಣದ ಮೇಲೆ ಹಣ ಮಾಡುವ ಬಿಜೆಪಿ: ಹರಿಪ್ರಸಾದ್ ಲೇವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‌‘ಕೊರೊನಾ ನಿಯಂತ್ರಣದ ನೆಪದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡುತ್ತಿದ್ದಾರೆ, ಶವದ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಿ.ಜೆ.ಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕಿನ ನಿಯಂತ್ರಣಕ್ಕೆ ಅಗತ್ಯವಿರುವ ಉಪಕರಣಗಳ ಖರೀದಿಯಲ್ಲಿ ಸುಮಾರು ₹ 2,000 ಕೋಟಿಯ ಹಗರಣವನ್ನು ಯಾವುದೇ ನಾಚಿಕೆ, ಮಾನ ಮರ್ಯಾದೆ ಇಲ್ಲದೇ ಮಾಡಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಈ ಆರೋಪಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಹಗರಣದ ತನಿಖೆ ಮಾಡಬೇಕು ಎಂದು ಕಾಂಗ್ರೆಸ್‌ನಿಂದ ಒತ್ತಾಯಿಸಲಾಗಿದೆ. ಹಗರಣದ ಆರೋಪ ಎದುರಿಸುತ್ತಿರುವವರು ಸಚಿವ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

‘ಕೊರೊನಾ ನಿಯಂತ್ರಣ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಪಾಲನೆ ಮಾಡದ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿ.ಬಿ.ಎಂ.ಪಿ) ಹೈಕೋರ್ಟ್ ಕಟುವಾಗಿ ತರಾಟೆಗೆ ತೆಗೆದದುಕೊಂಡಿದೆ. ಇದಾದ ಬಳಿಕ ಬಿ.ಬಿ.ಎಂ.ಪಿಯ ಆಯುಕ್ತರ ಬದಲಾವಣೆ ಮಾಡಲಾಯಿತು’ ಎಂದರು.

‘ಸಾಬೀತು ಮಾಡಬೇಕು’: ಜೆಡಿಎಸ್ ಮುಖಂಡರು ರಾಜ್ಯ ಕಾಂಗ್ರೆಸ್ ವಿರುದ್ಧ ಟೀಕಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್– ಕಾಂಗ್ರೆಸ್ ಪಕ್ಷಗಳ ನಡುವಿನ ಮಧುಚಂದ್ರದ ಅವಧಿ ಮುಗಿದಿದೆ. ಕಾಂಗ್ರೆಸ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ,  ಎಚ್.ಡಿ.ದೇವೇಗೌಡ ಅವರು ಮಾಡಿದ ಆರೋಪಗಳನ್ನು ಸಾಬೀತು ಮಾಡಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರ ರಹಿತವಾಗಿ ಆಡಳಿತ ಮಾಡಿದ್ದು ರಾಜ್ಯದ ಜನರಿಗೆ ಗೊತ್ತಿದೆ’ ಎಂದು ಹೇಳಿದರು.

‘ಹೋರಾಟಗಾರರು ಎಲ್ಲಿದ್ದಾರೆ?’: ‘ಈ ಹಿಂದೆ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಎಂಬ ಅಭಿಯಾನದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದ ಅಣ್ಣಾ ಹಜಾರೆ ಅವರನ್ನು ನಾನು ಒಬ್ಬ ಹಿಟ್ಲರ್ ಎಂದು ಹೇಳಿದ್ದೆ. ಈಗ ಅವರು ಆರಾಮಾಗಿ ನಿದ್ದೆ ಮಾಡ್ತಿದ್ದಾರೆ. ಅವರು ಎಲ್ಲಿದ್ದಾರೆ ಎಂದೂ ಗೊತ್ತಿಲ್ಲ’ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

‘ಕೇಜ್ರಿವಾಲ್ ಎಂದು ಹೇಳುತ್ತಿದ್ದವರು ಅವರ ಬಗ್ಗೆಯೂ ಮಾತನಾಡುತ್ತಿಲ್ಲ. ಕಿರಣ್ ಬೇಡಿ ಲೆಫ್ಟಿನೆಂಟ್ ಗವರ್ನರ್ ಆದರು. ಆಗ ಹೋರಾಟವನ್ನು ಹೊರ ಗುತ್ತಿಗೆ ಕೊಟ್ಟಾಗ, ಹೋರಾಟಗಾರರು ಏನೋ ಹೇಳುತ್ತಿದ್ದಾರೆ ಎಂದು ಅವರನ್ನು ಜನ ನಂಬಿದ್ದರೇ ವಿನಾ ಬಿಜೆಪಿಯನ್ನಲ್ಲ. 2ಜಿ ಸ್ಪೆಕ್ಟ್ರಂ, ವ್ಯಾಪಂ ಮುಂತಾದ ಹಗರಣಗಳ ಬಗ್ಗೆ ಹೊರಿಸಲಾಗಿದ್ದ ಆರೋಪಗಳು ಸುಳ್ಳು ಎಂದು ಸಾಬೀತಾಗಿವೆ. ಹಾಗಾಗಿ, ಕಾಂಗ್ರೆಸ್ ಪಕ್ಷ ಬಿ.ಜೆ.ಪಿ.ಯ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡುವುದಿಲ್ಲ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸತೀಶ ಸೈಲ್, ಮಾಜಿ ಶಾಸಕಿ ಶಾರದಾ ಶೆಟ್ಟಿ, ಪಕ್ಷದ ಜಿಲ್ಲಾ ಉಸ್ತುವಾರಿ ಆರಾಧ್ಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು