ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ಚಾವಣಿ ಕುಸಿಯುವ ಭೀತಿ: ತರಗತಿ ರದ್ದು

ಕುಮಟಾ ಸರ್ಕಾರಿ ಪದವಿ ಕಾಲೇಜಿನ ಹಳೆಯ ಕಟ್ಟಡದ ದುರವಸ್ಥೆ
Last Updated 30 ಜೂನ್ 2022, 19:30 IST
ಅಕ್ಷರ ಗಾತ್ರ

ಕುಮಟಾ: ಪಟ್ಟಣದ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಬಹುತೇಕ ತರಗತಿ ಕೊಠಡಿಗಳು ಸೋರುತ್ತಿವೆ. ರಭಸದ ಮಳೆಗೆ ಚಾವಣಿ ಕುಸಿದರೆ ಅಪಾಯ ಎಂಬ ಆತಂಕದಿಂದ ತರಗತಿ ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳಿಸುವಂಥ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭ ಆದಾಗಿನಿಂದಲೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಹಳೆಯ ಕಟ್ಟಡವನ್ನೇ ಬಳಕೆ ಮಾಡಲಾಗುತ್ತಿದೆ. ಕಾಲೇಜಿಗೆ ಸರ್ಕಾರದಿಂದ ಸುಮಾರು ₹ 4 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ಹೊಸ ಕಟ್ಟಡದಲ್ಲಿ ಸಿದ್ಧಗೊಂಡ ತರಗತಿಗಳನ್ನು ಆಗಲೇ ಬಳಸಿಕೊಳ್ಳಲಾಗುತ್ತಿದೆ. ಹಳೆಯ ಕಟ್ಟಡದಲ್ಲಿ ಉಳಿದ ವಿದ್ಯಾರ್ಥಿಗಳ ತರಗತಿ ನಡೆಸುವುದು ಈಗ ಸವಾಲಾಗಿ ಪರಿಣಮಿಸಿದೆ.

ಮಾಹಿತಿ ನೀಡಿದ ಪ್ರಾಚಾರ್ಯೆ ವಿಜಯಾ ನಾಯ್ಕ, ‘ಹೊಸ ಕಟ್ಟಡದಲ್ಲಿ ಸಿದ್ಧಗೊಂಡಿರುವ ಎಲ್ಲ ಕೊಠಡಿಗಳನ್ನು ಬಳಸಿಕೊಂಡು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಸುಮಾರು 800 ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಕಲಾ ಹಾಗೂ ಬಿ.ಬಿ.ಎ ವಿಭಾಗದ ಸುಮಾರು 450 ವಿದ್ಯಾರ್ಥಿಗಳು ಹಳೆಯ ಕಟ್ಟಡದಲ್ಲಿಯೇ ಪಾಠ ಕೇಳಬೇಕಾಗಿದೆ. ಇದರ ಹೆಚ್ಚಿನ ಕೊಠಡಿಗಳು ಸೋರುತ್ತಿದ್ದು, ತರಗತಿ ನಡೆಸುವುದು ಕಷ್ಟಕರವಾಗಿದೆ’ ಎಂದರು.

‘ಗುರುವಾರ ಸುರಿದ ವಿಪರೀತ ಮಳೆಗೆ ಎಲ್ಲಿ ಕೊಠಡಿ ಚಾವಣಿ ಕುಸಿಯುತ್ತದೆಯೋ ಎನ್ನುವ ಭಯದಿಂದ ಕೆಲವು ತರಗತಿಗಳನ್ನು ಅರ್ಧಕ್ಕೆ ನಿಲ್ಲಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಬೇಕಾಯಿತು. ಹೊಸ ಕಟ್ಟಡದಲ್ಲಿ ಇನ್ನಷ್ಟು ಕೊಠಡಿಗಳು ನಿರ್ಮಾಣವಾಗುವ ತನಕ ಹಳೆಯ ಕಟ್ಟಡದಲ್ಲಿಯೇ ಕಲಾ ಹಾಗೂ ಬಿ.ಬಿ.ಎ ತರಗತಿಗಳನ್ನು ನಡೆಸುವುದು ಅನಿವಾರ್ಯ’ ಎಂದರು.

‘ಸಮಸ್ಯೆ ಬಗ್ಗೆ ಶಾಸಕರಿಗೆ, ತಹಶೀಲ್ದಾರ್, ಉಪವಿಭಾಗಾಧಿಕಾರಿ ಅವರಿಗೆ ತಿಳಿಸಲಾಗಿದೆ. ಮಳೆ ನೀರು ಸೋರುವುದನ್ನು ತುರ್ತಾಗಿ ನಿಲ್ಲಿಸದಿದ್ದರೆ ತರಗತಿ ನಡೆಸಲು ತೀವ್ರ ತೊಂದರೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಾಮಗಾರಿ ವೇಗವರ್ಧನೆಗೆ ಕ್ರಮ’
‘ಕಾಲೇಜಿನ ಹಳೆಯ ಕಟ್ಟಡವನ್ನು ತಕ್ಷಣ ದುರಸ್ತಿ ಮಾಡುವುದು ಕಷ್ಟ ಸಾಧ್ಯ. ಆದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಮಳೆ ನಿಂತ ತಕ್ಷಣ ಸೋರುವ ಕೊಠಡಿಗಳನ್ನು ದುರಸ್ತಿ ಮಾಡಿಸಲಾಗುವುದು. ಹೊಸ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕೈಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪ್ರಾಚಾರ್ಯರ ಜೊತೆ ಮಾತಾಡುತ್ತೇನೆ’ ಎಂದು ಶಾಸಕ ದಿನಕರ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT