ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಯಂತಿ’ಯಲ್ಲೂ ತೂರಿದ ತರತಮ

ಬಿಜೆಪಿ ನಡೆಗೆ ಕಾಂಗ್ರೆಸ್ ಅಸಮಾಧಾನ
Last Updated 2 ಅಕ್ಟೋಬರ್ 2019, 13:43 IST
ಅಕ್ಷರ ಗಾತ್ರ

ಶಿರಸಿ: ಮಹಾತ್ಮ ಗಾಂಧಿ ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಬುಧವಾರ ಬೆಳಿಗ್ಗೆ ಬಿಜೆಪಿ ಯುವ ಮೋರ್ಚಾ ಘಟಕ ಹಾಗೂ ಹನುಮಾನ್ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಇಲ್ಲಿನ ರಾಘವೇಂದ್ರ ವೃತ್ತದಲ್ಲಿ ಲಾಲ್‌ ಬಹಾದ್ದೂರ್ ಶಾಸ್ತ್ರಿ ಭಾವಚಿತ್ರವಿಟ್ಟು ಅವರ ಜನ್ಮ ದಿನವನ್ನು ಆಚರಿಸಲಾಗಿತ್ತು. ನಗರಸಭೆ ಸದಸ್ಯೆ ದೀಪಾ ಮಹಾಲಿಂಗಣ್ಣನವರ್, ಪ್ರಮುಖರಾದ ವಿಜು ಭಟ್ಟ, ರಾಜೇಶ ಶೆಟ್ಟಿ ಇದ್ದರು. ಎಲ್ಲೆಡೆ ಗಾಂಧೀಜಿ ಸ್ಮರಣೆ ಮಾಡುವಾಗ ಇಲ್ಲಿ ಕೇವಲ ಶಾಸ್ತ್ರಿಯವರ ಜಯಂತಿ ಆಚರಿಸಿದ್ದು, ಅನೇಕರ ಗಮನ ಸೆಳೆದಿತ್ತು.

ವಿಷಯ ತಿಳಿದ ಕಾಂಗ್ರೆಸ್ ಕಾರ್ಯಕರ್ತರು, ಮಧ್ಯಾಹ್ನ ಇದೇ ವೃತ್ತದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಇಬ್ಬರ ಭಾವಚಿತ್ರವನ್ನು ಇಟ್ಟು, ಇಬ್ಬರೂ ನಾಯಕರ ಜನ್ಮದಿನ ಆಚರಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರೇ ಗಾಂಧೀಜಿಯವರ ‘ಸ್ವಚ್ಛ ಭಾರತ’ ಸಾಕಾರಗೊಳಿಸುವಂತೆ ಕರೆ ನೀಡಿದ್ದರೆ, ಅವರದೇ ಪಕ್ಷದ ಕಾರ್ಯಕರ್ತರು ಗಾಂಧೀಜಿಗೆ ಅಗೌರವ ತೋರಿದ್ದಾರೆ. ಶಾಸ್ತ್ರಿ ಜಯಂತಿ ಆಚರಿಸಿದ್ದಕ್ಕೆ ನಮ್ಮ ತಕರಾರಿಲ್ಲ, ಆದರೆ, ಗಾಂಧಿಯನ್ನು ಕಡೆಗಣಿಸಿದ್ದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಮಾತನಾಡಿ, ‘ಕೆಲವು ಅವಿವೇಕಿಗಳು ದೇಶದ ಇತಿಹಾಸ ತಿರುಚಿ ಮಹಾತ್ಮರ ಹೆಸರಿಗೆ ಮಸಿ ಬಳಿಯುವ ಕುತಂತ್ರ ನಡೆಸುತ್ತಿದ್ದಾರೆ’ ಎಂದು ಮಾರ್ಮಿಕವಾಗಿ ಹೇಳಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಶೆಟ್ಟಿ, ಪ್ರಮುಖರಾದ ಸೂರ್ಯಪ್ರಕಾಶ ಹೊನ್ನಾವರ, ರಾಚಪ್ಪ ಜೋಗಳೇಕರ, ಸತೀಶ ನಾಯ್ಕ ಮಧುರವಳ್ಳಿ, ಶೈಲೇಶ ಜೋಗಳೇಕರ್, ಪ್ರಸನ್ನ ಶೆಟ್ಟಿ, ವಕೀಲ ಎಂ.ಎನ್.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT