ಬುಧವಾರ, ಜನವರಿ 27, 2021
16 °C

ಅಗಸೂರು ಕಿಂಡಿ ಅಣೆಕಟ್ಟೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅಂಕೋಲಾ ತಾಲ್ಲೂಕಿನ ಅಗಸೂರು ಬಳಿಯ ಹೊನ್ನಳ್ಳಿಯಲ್ಲಿ ಗಂಗಾವಳಿ ನದಿಗೆ 11 ಮೀಟರ್ ಎತ್ತರ ಕಿಂಡಿ ಅಣೆಕಟ್ಟೆ ನಿರ್ಮಾಣವನ್ನು ಗಂಗಾಮಾತೆ ರೈತ ಸಮಿತಿ ಬಳಕೆದಾರರ ಸಂಘದ ಪದಾಧಿಕಾರಿಗಳು ವಿರೋಧಿಸಿದ್ದಾರೆ. ಅದರ ಬದಲು ಬ್ಯಾರೇಜ್‌ಗಳನ್ನು ನಿರ್ಮಿಸುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘಟನೆಯ ಪ್ರಮುಖರು, ‘ಸೈನಿಕರು, ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಇದಕ್ಕೆ ಕಿಂಡಿ ಅಣೆಕಟ್ಟೆಯೊಂದೇ ಪರಿಹಾರವಲ್ಲ. ಭಟ್ಕಳದ ವೆಂಕಟಾಪುರ ನದಿಗೆ ಎರಡರಿಂದ ಎರಡೂವರೆ ಮೀಟರ್ ಎತ್ತರದ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಅದೇ ಮಾದರಿಯನ್ನು ಗಂಗಾವಳಿ ನದಿಯಲ್ಲೂ ಮಾಡಬಹುದಾಗಿದೆ’ ಎಂದು ಹೇಳಿದರು.

‘ಹೊನ್ನಳ್ಳಿ, ಸಂತೆಪೇಟೆ ಮತ್ತು ಕೊಡ್ಸಣಿ ಸಮೀಪ ಮೂರು ಬ್ಯಾರೇಜ್‌ಗಳನ್ನು ನಿರ್ಮಿಸಿ ಸಮುದ್ರದ ನೀರು ನದಿಯಲ್ಲಿ ಬಾರದಂತೆ ತಡೆಯಲು ಸಾಧ್ಯವಿದೆ. ಇವುಗಳಲ್ಲಿ ಒಂದು ಬ್ಯಾರೇಜ್‌ನ ನೀರನ್ನು ಅಂಕೋಲಾ ತಾಲ್ಲೂಕಿಗೆ ಪೂರೈಕೆ ಮಾಡಬೇಕು. ಬೆಳಂಬಾರ, ಪೂಜಗೇರಿ, ಸೂರ್ವೆ, ಶೆಟಗೇರಿ, ಕಣಗಿಲ್ ಮುಂತಾದ 25 ಹಳ್ಳಿಗಳಿಗೆ ಬೇಸಿಗೆಯಲ್ಲಿ ಇದರಿಂದ ಅನುಕೂಲವಾಗಲಿದೆ’ ಎಂದು ಒತ್ತಾಯಿಸಿದರು.

‘ಈ ರೀತಿಯ ಕಾಮಗಾರಿಯಿಂದ ಅರಣ್ಯ ಹಾಗೂ ಕೃಷಿಭೂಮಿ ನಾಶವಾಗುವುದಿಲ್ಲ. ಕಿಂಡಿ ಅಣೆಕಟ್ಟೆಯನ್ನು ನಿರ್ಮಾಣ ಮಾಡುವುದರಿಂದ ನೆರೆಯ ಭೀತಿ ಹೆಚ್ಚುತ್ತದೆ. ನೂರಾರು ಹೆಕ್ಟೇರ್ ಅರಣ್ಯ ಹಾಗೂ ಕೃಷಿ ಭೂಮಿಗೆ ಹಾನಿಯಾಗುತ್ತದೆ. ಜಲಚರ ಜೀವವೈವಿಧ್ಯಕ್ಕೂ ತೊಂದರೆಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೇವರಾಯ ನಾಯಕ, ಹಮ್ಮಣ್ಣ ನಾಯಕ, ಸುಭಾಸ ನಾಯಕ, ಚಂದ್ರು ನಾಯಕ, ದೇವಣ್ಣ ನಾಯಕ, ಚಂದ್ರಹಾಸ ನಾಯಕ, ಶಿವಾನಂದ ನಾಯಕ, ನಾರಾಯಣ ನಾಯಕ, ಕೇಶವ ನಾಯಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು