ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ವೇದಿಕೆಯಾದ ಕೈಗಾ– ಇಳಕಲ್ ಹೆದ್ದಾರಿ

ಮುಂಡಗೋಡ: ಬೈಪಾಸ್ ನಿರ್ಮಾಣದ ಬಗ್ಗೆ ಪರ, ವಿರೋಧ ಅಭಿಪ್ರಾಯ
Last Updated 6 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮುಂಡಗೋಡ:ಕಾರವಾರ–ಕೈಗಾ–ಇಳಕಲ್‌ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಬೇಕೇಅಥವಾ ಬೈಪಾಸ್‌ ಬೇಕೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ನಡೆದಿದೆ.

ದಶಕಕ್ಕಿಂತ ಹೆಚ್ಚು ವರ್ಷಗಳಿಂದ ಕೇಳಿಬರುತ್ತಿದ್ದ ಹೆದ್ದಾರಿ ನಿರ್ಮಾಣದ ಊಹಾಪೋಹಗಳಿಗೆ ಪೂರ್ಣವಿರಾಮ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಪ್ರಸ್ತಾವಿತ 318 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿದೆ.

ಹೆದ್ದಾರಿಯು ಪಟ್ಟಣದಲ್ಲಿ ಹಾದು ಹೋದರೆ ಅಥವಾ ಬೈಪಾಸ್‌ ನಿರ್ಮಿಸಿದರೆ ಆಗುವ ಸಾಧಕ–ಬಾಧಕಗಳ ಬಗ್ಗೆ ಜನಪ್ರತಿನಿಧಿಗಳ ಹತ್ತಿರ ಯೋಜನೆಯಸಲಹಾ ಎಂಜಿನಿಯರ್‌ ಚರ್ಚಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯು ಸಾರ್ವಜನಿಕರನ್ನು ಮಾತನಾಡಿಸಿದಾಗ ಕೆಲವರು ಬೈಪಾಸ್‌ ಆಗಬೇಕೆಂದರೆ, ಮತ್ತೆ ಕೆಲವರು ಪಟ್ಟಣದಲ್ಲಿಯೇ ಹಾದು ಹೋಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

‘ಎಷ್ಟು ದಿನ ರಾಜಕಾರಣ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ. ಜನರ ಹಿತವನ್ನು ಗಮನದಲ್ಲಿಟ್ಟು, ಮುಂದಿನ ದಿನಗಳಲ್ಲಿ ಆಗುವ ಟ್ರಾಫಿಕ್‌ ಸಮಸ್ಯೆ, ಜನರಿಗಾಗುವ ತೊಂದರೆ ಎಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೈಪಾಸ್‌ ನಿರ್ಮಿಸಿದರೆ ಉತ್ತಮ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ರವಿಗೌಡ ಪಾಟೀಲ ಹೇಳಿದರು.

‘ಪರಿಹಾರ ಕೊಟ್ಟರೂ ಈಗಿರುವ ಮಾರುಕಟ್ಟೆಯನ್ನು ಪಡೆಯಲು ಆಗುವುದಿಲ್ಲ. ಸಣ್ಣ ಜಾಗದಲ್ಲಿಯೇ ಒಂದು ಕುಟುಂಬ ದುಡಿಮೆ ಮಾಡುತ್ತಿರುತ್ತದೆ. ಇಂತಹ ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿ ರಸ್ತೆ ನಿರ್ಮಿಸುವ ಬದಲು, ಊರ ಹೊರಗೆ ಮಾಡಿದರೆ ಒಳ್ಳೆಯದಾಗುತ್ತದೆ’ ಎಂದು ವಕೀಲರ ಸಂಘದ ಅಧ್ಯಕ್ಷ ಗುಡ್ಡಪ್ಪ ಕಾತೂರ ಹೇಳಿದರು.

‘ಹತ್ತಿಪ್ಪತ್ತು ವರ್ಷಗಳಿಂದ ಹೆದ್ದಾರಿ ಆಗುತ್ತದೆ ಎಂದು ಕೇಳುತ್ತಿದ್ದೇವೆ. ಊರ ಹೊರಗೆ ರಸ್ತೆ ಮಾಡಿದರೆ ಲಾಭವಿಲ್ಲ. ಬೈಪಾಸ್‌ ಆಸುಪಾಸಿನಲ್ಲಿ ಹೊಸದಾಗಿ ಊರು ಬೆಳೆದು, ಅಲ್ಲೊಂದು ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಇದರಿಂದ ಹೊಸ ಊರು, ಹಳೆಯ ಊರು ನಿರ್ಮಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದು ಯುವ ರೈತ ಶಿವಜ್ಯೋತಿ ಹುದ್ಲಮನಿ ಹೇಳಿದರು.

‘ಈಗಿರುವ ರಸ್ತೆಯಿಂದ 70 ಅಡಿ ದೂರದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳು ಸೂಚಿಸುತ್ತಿದ್ದರು. ಆಗಿಂದಲೇ ಊರೊಳಗೆಹೆದ್ದಾರಿಬರುತ್ತದೆ ಎಂದು ತಿಳಿಯಲಾಗಿದೆ’ ಎಂದು ಯುವಕ ಅಮಿತ್‌ ದೇಸಾಯಿ ಹೇಳಿದರು.

‘ಊರೊಳಗೆ ರಸ್ತೆ ನಿರ್ಮಿಸಿದರೆ ಈಗಿನ ಮುಂಡಗೋಡ ಉಳಿಯುವುದಿಲ್ಲ. ಹೊಸದಾಗಿ ನಿರ್ಮಿಸಬೇಕಾಗುತ್ತದೆ’ ಎಂದು ಉದ್ಯಮಿ ರಮೇಶ್ ರಾವ್‌ ಹೇಳಿದರು.

‘ಊರಿನಲ್ಲಿ ಹೆದ್ದಾರಿ ಹೋದರೆ ಬೆಂಗಳೂರು–ಗೋವಾ ಪ್ರವಾಸಿಗರಿಂದ ಇಲ್ಲಿನ ವ್ಯಾಪಾರಸ್ಥರಿಗೆ ಲಾಭವಾಗಲಿದೆ’ ಎಂದು ರೈತ ಪರುಶುರಾಮ ರಾಣಿಗೇರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT