ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ | ಮಾನವ ಕಳಕಳಿಯ ‘ಈದ್ ಉಲ್ ಫಿತ್ರ್’

ಜಿಲ್ಲೆಯ ಇತೆರೆಡೆ ನಾಳೆ ಹಬ್ಬ: ಮನೆಯಲ್ಲೇ ಆಚರಿಸಲು ಸಿದ್ಧತೆ
Last Updated 23 ಮೇ 2020, 19:45 IST
ಅಕ್ಷರ ಗಾತ್ರ

ಕಾರವಾರ:ಸಾಮಾನ್ಯವಾಗಿ ‘ರಂಜಾನ್ ಹಬ್ಬ’ ಎಂದೇ ‍ಪ್ರಸಿದ್ಧವಾಗಿರುವ ಈದ್ ಉಲ್ ಫಿತ್ರ್ ಹಬ್ಬವು ಮನುಷ್ಯ ಪ್ರೇಮ, ಮಾನವ ಸಮಾನತೆಯ ಪ್ರತೀಕವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಬ್ಬದ ದಿನವನ್ನು ಅತ್ಯಂತ ಸಂತಸ ಸಡಗರದೊಂದಿಗೆ ಆಚರಿಸಲು ‘ಝಕಾತ್ ಉಲ್ ಫಿತ್ರ್’ ಎಂಬ ವ್ಯವಸ್ಥೆಯಿದ್ದು,ಇದನ್ನು ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಲಾಗಿದೆ.

ತನ್ನ ನೆರೆಹೊರೆಯಲ್ಲಿ ವಾಸಿಸುತ್ತಿರುವ ಯಾರೊಬ್ಬರು ಕೂಡ ಹಬ್ಬದ ಸಂತಸದಿಂದ ವಂಚಿತರಾಗಬಾರದು ಎಂದು ಉದ್ದೇಶದೊಂದಿಗೆ ‘ಫಿತ್ರ್ ಝಕಾತ್’ ಎಂಬ ಕಡ್ಡಾಯದಾನ ನೀಡಲಾಗುತ್ತದೆ. ಪ್ರವಾದಿ (ಸ) ಹೇಳಿರುವಂತೆ, ರಂಜಾನ್ ಭೂಮಿ– ಆಕಾಶದ ನಡುವೆ ಇರುತ್ತದೆ. ಫಿತ್ರ್ ಝಕಾತ್ ಮೂಲಕ ಅದು ಸ್ವೀಕೃತವಾಗುತ್ತದೆ.

ಒಂದು ಕುಟುಂಬದ ಯಜಮಾನನು ತನಗೆ ಮತ್ತು ಪತ್ನಿಗೆ, ದುಡಿಯಲು ಯೋಗ್ಯವಲ್ಲದ ಮಕ್ಕಳಿಗೆ, ಖರ್ಚು ಕೊಡಲು ಕಡ್ಡಾಯವಿರುವ ತನ್ನ ತಂದೆ ತಾಯಿಗೆ ಮತ್ತು ವೇತನ ರಹಿತವಾಗಿ ತನ್ನ ಅಧೀನದಲ್ಲಿ ದುಡಿಯುವಕಾರ್ಮಿಕರಿಗೆಫಿತ್ರ್ ಝಕಾತ್ ಕೊಡುವುದು ಕಡ್ಡಾಯವಾಗಿದೆ. ‘ಝಕಾತ್ ಉಲ್ ಫಿತ್ರ್’ ಎಂದರೆ ಹಬ್ಬದ ದಿನ ಬೆಳಿಗ್ಗೆ ಪ್ರಾರ್ಥನೆಗೆ ಹೊರಡುವ ಮುನ್ನ ಕೊಡಬೇಕಾದ ಕಡ್ಡಾಯವಾದ ದಾನವಾಗಿದೆ. ದಾನ ಮಾಡಿದ ಬಳಿಕ ಈದ್ ನಮಾಜ್ ನಿರ್ವಹಿಸಲು ಈದ್ಗಾ ಅಥವಾ ಮಸೀದಿಗೆ ಹೋಗಬೇಕು.

ರಂಜಾನ್ ತಿಂಗಳಲ್ಲಿ ಮಾಡುವ ದಾನ, ಧರ್ಮ ಮತ್ತು ಎಲ್ಲ ಸತ್ಕಾರ್ಯಗಳಿಗೆ 70ರಿಂದ700ಪಟ್ಟು ಹೆಚ್ಚು ಪುಣ್ಯವಿದೆ ಎಂದು ಪ್ರವಾದಿ ವಚನದಲ್ಲಿ ಹೇಳಲಾಗಿದೆ. ಇದು ಜಗತ್ತಿನಲ್ಲಿರುವ ಎಲ್ಲ ಮುಸ್ಲಿಮರನ್ನು ದಾನ, ಧರ್ಮ, ಸದಕಾಗಳನ್ನು ಮಾಡಲು ಪ್ರೇರೇಪಿಸುತ್ತದೆ.

ಶುಭ್ರ ವಸ್ತ್ರ,ಸುಗಂಧ ದ್ರವ್ಯ:ಹಬ್ಬದ ದಿನ ಪ್ರತಿಯೊಬ್ಬ ಮುಸ್ಲಿಮನೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ತನ್ನಲ್ಲಿರುವ ಉತ್ತಮವಾದ ಬಟ್ಟೆಗಳನ್ನು ಧರಿಸುತ್ತಾನೆ. ಸುಗಂಧಪೋಷಿತನಾಗಿ ಅಲ್ಲಾಹುವಿನಗುಣಗಾನ ಮಾಡುತ್ತ ಪ್ರಾರ್ಥನೆಗೆ ತೆರಳುತ್ತಾನೆ. ಅಲ್ಲಿ 30ದಿನಗಳ ಉಪವಾಸಕ್ಕಾಗಿ ಕೃತಜ್ಞತೆ ಸಲ್ಲಿಸಿ ತನ್ನ, ಕುಟುಂಬದ ಮತ್ತು ದೇಶದ ಹಿತಕ್ಕಾಗಿ ಪ್ರಾರ್ಥಿಸುತ್ತಾನೆ.

ಈದ್ಗಾಕ್ಕೆ ಹೋಗುವಾಗ ಒಂದು ಕಡೆಯಿಂದ ಹೋಗಿ ಮತ್ತೊಂದು ಕಡೆಯಿಂದ ಮರಳಿ ಮನೆ ಸೇರುತ್ತಾನೆ. ಏಕೆಂದರೆ ಹೋಗುವಾಗ ರಸ್ತೆಯಲ್ಲಿ ಸಿಕ್ಕವರಿಗೆ ಈದ್ ಶುಭಾಶಯಗಳನ್ನು ಹೇಳಿ,ಬೇರೆ ರಸ್ತೆಯಿಂದ ಬರುವಾಗಲೂ ಅಲ್ಲಿದ್ದವರಿಗೆ ಶುಭವನ್ನು ಕೋರಲಾಗುತ್ತದೆ.

ರೈತನು ತನ್ನ ಹೊಲವನ್ನು ಊಳಿದ ನಂತರ ಫಸಲನ್ನು ಕೊಯ್ಲು ಮಾಡುತ್ತಾನೆ. ಆ ಫಸಲು ದೊರೆಯುವ ದಿನವೇ ‘ಈದ್ ಉಲ್ ಫಿತ್ರ್’ ಹಬ್ಬ. ಅದಕ್ಕಾಗಿ 30 ದಿನಗಳವರೆಗೆ ತನ್ನ ದೇಹಾಕಾಂಕ್ಷೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುತ್ತನೆ.ಉತ್ತಮವಾಗಿ ಬದುಕಿ ತೋರಿಸಿದವನು ತಾನು ಬೆಳೆದ ಬೆಳೆ ಉತ್ತಮ ಫಸಲು ನೀಡುತ್ತದೆ ಎಂದಾದರೆ ಅತನಿಗಿಂತ ಪುಣ್ಯವಂತನು ಯಾರಿರಬಹುದು? ಈದ್ ಉಲ್ ಫಿತ್ರ್ ನಮ್ಮೆಲ್ಲರ ಬದುಕಿನಲ್ಲಿ ಉತ್ತಮ ಫಸಲನ್ನು ಕೊಯ್ಲು ಮಾಡುವ ದಿನವಾಗಲಿ ಎಂಬುದೇ ಪ್ರತಿಯೊಬ್ಬ ಮುಸ್ಲಿಮನ ಹಾರೈಕೆಯಾಗಿದೆ.

– ಎಂ.ಆರ್.ಮಾನ್ವಿ, ಭಟ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT