ಸೋಮವಾರ, ನವೆಂಬರ್ 23, 2020
23 °C
ಪಾಳುಬಿದ್ದ ಜಮೀನು ಮಾಲೀಕರ ಮನವೊಲಿಸಿ ಕೃಷಿ ಮಾಡಿದ ಯಶ್ವಂತ

ಕಾರವಾರ: 32 ಎಕರೆಯಲ್ಲಿ ಭತ್ತದ ಬೇಸಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ತಾಲ್ಲೂಕಿನ ಹಳಗಾ ಸಮೀಪದ ದೋಲದಲ್ಲಿ ರೈತರೊಬ್ಬರು 32 ಎಕರೆಯಲ್ಲಿ ಭತ್ತದ ಕೃಷಿ ಮಾಡಿದ್ದಾರೆ. ಈ ಬಾರಿ 50ರಿಂದ 60 ಟನ್‌ಗಳಷ್ಟು ಇಳುವರಿ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಸ್ಥಳೀಯ ರೈತ ಯಶ್ವಂತ ಬಾಬುರಾಯ ಉಂಡೇಕರ್ ಯಶಸ್ವಿಯಾಗಿ ಕೃಷಿಯಲ್ಲಿ ತೊಡಗಿಕೊಂಡಿರುವವರು. ಕರಾವಳಿಯಲ್ಲಿ ಚಿಕ್ಕ ಮತ್ತು ಅತಿ ಚಿಕ್ಕ ಜಮೀನುಗಳೇ ಅಧಿಕ. ಕಾರವಾರದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕೃಷಿಯಲ್ಲೇ ಸಾಧನೆ ಮಾಡುವ ಹಂಬಲವಿದ್ದ ಕಾರಣ ಅವರು, ಸುತ್ತಮುತ್ತ ಪಾಳುಬಿದ್ದ ಜಮೀನುಗಳನ್ನು ಗಮನಿಸಿದ್ದರು. ಅವುಗಳ ಮಾಲೀಕರನ್ನು ಸಂಪರ್ಕಿಸಿ ಮನವೊಲಿಸಿ ಬೇಸಾಯ ಮಾಡಿದರು.

ಕಳೆದ ವರ್ಷವೂ ಇದೇ ರೀತಿ ವ್ಯವಸಾಯ ಮಾಡಿದ್ದರು. ಆದರೆ, ಕಾಳಿ ನದಿಯಲ್ಲಿ ಪ್ರವಾಹ ಉಂಟಾಗಿ ಅಪಾರ ನಷ್ಟವಾಗಿತ್ತು. 36 ಟನ್‌ಗಳಷ್ಟು ಭತ್ತದ ಇಳುವರಿ ದೊರೆತಿತ್ತು. ಆಗ ಉಂಟಾದ ಸಮಸ್ಯೆಯಿಂದ ಧೃತಿಗೆಡದೇ ಈ ಬಾರಿಯೂ ಸುಮಾರು ₹ 3 ಲಕ್ಷ ಖರ್ಚು ಮಾಡಿ ಬಿತ್ತನೆ ಮಾಡಿದರು. ಈಗ ಫಸಲು ಬಲಿತಿದ್ದು, ಕಟಾವಿನಲ್ಲಿ ತೊಡಗಿಕೊಂಡಿದ್ದಾರೆ.

ಯಶ್ವಂತ ಅವರು ‘ಬಲರಾಮ’, ‘ಎಂ.ಒ.4’ ಮುಂತಾದ ಹೈಬ್ರೀಡ್ ತಳಿಗಳ ಭತ್ತವನ್ನು ಬಿತ್ತನೆ ಮಾಡಿದ್ದರು. ಪ್ರಸ್ತುತ ಬಿಳಿ ಅಕ್ಕಿಯ ಭತ್ತಕ್ಕೆ ಕ್ವಿಂಟಲ್‌ಗೆ ₹ 1,500 ಹಾಗೂ ಕೆಂಪು ಅಕ್ಕಿಯ ಭತ್ತಕ್ಕೆ ಕ್ವಿಂಟಲ್‌ಗೆ ₹ 1,600 ದರವಿದೆ. ಇದರ ಪ್ರಕಾರ ಅವರು ₹ 9 ಲಕ್ಷದಿಂದ ₹ 10 ಲಕ್ಷದ ಆದಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಗದ್ದೆಗೆ ಗೊಬ್ಬರಕ್ಕೆ ಅನುಕೂಲವಾಗುವಂತೆ ಅವರು ಹೈನಗಾರಿಕೆಯಲ್ಲೂ ತೊಡಗಿಕೊಂಡಿದ್ದಾರೆ. 32 ದನಗಳು ಮತ್ತು 12 ಎಮ್ಮೆಗಳನ್ನೂ ಸಾಕುತ್ತಿದ್ದಾರೆ. ಅವುಗಳಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಗದ್ದೆಗಳಿಗೆ ಪೂರೈಸಿದರೆ, ಹಾಲನ್ನು ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಾರೆ. ಈ ಮೂಲಕ ಆದಾಯಕ್ಕೆ ಮತ್ತೊಂದು ಮೂಲವನ್ನು ಕಂಡುಕೊಂಡಿದ್ದಾರೆ.

‘ಬಂಜರಾಗಲು ಬಿಡಬೇಡಿ’: ‘ಸುತ್ತಮುತ್ತ ನೂರಾರು ಎಕರೆಗಳಷ್ಟು ಹೊಲಗದ್ದೆಗಳು ಪಾಳುಬಿದ್ದಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಅವುಗಳನ್ನು ಕೃಷಿ ಮಾಡಿದರೆ ಭೂಮಿಯು ಎಂದಿಗೂ ನಮ್ಮ ಕೈಬಿಡುವುದಿಲ್ಲ. ನನ್ನ ಕೃಷಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದಾರೆ’ ಎಂದು ಯಶ್ವಂತ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು