ಗುರುವಾರ , ಜೂನ್ 30, 2022
21 °C
ಅಹವಾಲು ಆಲಿಸದ ಮೀನುಗಾರಿಕೆ ಸಚಿವ ಎಸ್‌.ಅಂಗಾರ

ಸಮುದ್ರಕ್ಕೆ ಹಾರ, ಮನವಿಪತ್ರ ಹಾಕಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾವರ: ಮೀನುಗಾರಿಕೆ ಹಾಗೂ ಬಂದರು ಸಚಿವ ಎಸ್.ಅಂಗಾರ, ತಮ್ಮ ಅಹವಾಲು ಆಲಿಸಲು ಬರದಿರುವುದನ್ನು ಖಂಡಿಸಿದ ಮೀನುಗಾರ ಮುಖಂಡರು, ಸಚಿವರಿಗೆ ಹಾಕಲು ತಂದಿದ್ದ ಹಾರವನ್ನು ಹಾಗೂ ಮನವಿ ಪತ್ರವನ್ನು ಸಮುದ್ರಕ್ಕೆ ಅರ್ಪಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದರು.

ಪೂರ್ವ ನಿಗದಿತ ಕಾರ್ಯಕ್ರಮದ ವೇಳಾಪಟ್ಟಿಯಂತೆ ಸಚಿವ ಎಸ್.ಅಂಗಾರ, ಇಲ್ಲಿನ ಕಾಸರಕೋಡ ಬಂದರಿಗೆ ಮಂಗಳವಾರ ಬೆಳಿಗ್ಗೆ 10ಕ್ಕೆ ಭೇಟಿ ನೀಡಬೇಕಿತ್ತು. ಕಾಸರಕೋಡ ಟೊಂಕದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಕೈಬಿಡುವ ಬೇಡಿಕೆ ಸೇರಿದಂತೆ ತಮ್ಮ ಇನ್ನಿತರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸಚಿವರಿಗೆ ಮನವಿ ಮಾಡಲು ಮೀನುಗಾರರ ವಿವಿಧ ಸಂಘಟನೆಗಳ ಮುಖಂಡರು ಬಂದರಿನಲ್ಲಿ ಸೇರಿದ್ದರು.

ಆದರೆ, ಸಚಿವರು ತಾಲ್ಲೂಕಿನ ಮೂಲಕ ರಸ್ತೆ ಮಾರ್ಗದಲ್ಲಿ ಹೋದರಾದರೂ ಬಂದರಿಗೆ ಭೇಟಿ ನೀಡಲಿಲ್ಲ. ಸಚಿವರು ಏಕಾಏಕಿ ಹೀಗೆ ತಮ್ಮ ಪೂರ್ವ ನಿಗದಿತ ಭೇಟಿಯನ್ನು ರದ್ದುಗೊಳಿಸಿದ್ದು ಊಹಾಪೋಹಗಳಿಗೆ ಕಾರಣವಾಯಿತು.

ಸಚಿವರಿಗೆ ತಮ್ಮ ಮನವಿಯನ್ನು ಅರ್ಪಿಸಲಾಗದೆ ನಿರಾಶರಾದ ಮೀನುಗಾರರ ಸಂಘಟನೆಗಳ ಮುಖಂಡರು ವಿನೂತನ ರೀತಿಯಲ್ಲಿ ಪ್ರತಿಭಟಿಸಲು ಮುಂದಾದರು. ಸಾಗರ ದಿನಾಚರಣೆಯ ಅಂಗವಾಗಿ ಮೊದಲು ಸಮುದ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಸಚಿವರಿಗೆ ನೀಡಬೇಕಾಗಿದ್ದ ಮನವಿ ಪತ್ರ ಹಾಗೂ ಅವರನ್ನು ಗೌರವಿಸಲು ತಂದಿದ್ದ ಹಾರ, ಹೂಗುಚ್ಛಗಳನ್ನು ಸಮುದ್ರದ ನೀರಿನಲ್ಲಿ ತೇಲಿಬಿಟ್ಟರು.

ಈ ಬಗ್ಗೆ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಸಚಿವರು, ‘ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯೂ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಸಭೆ ಹಮ್ಮಿಕೊಳ್ಳಲಾಗಿದ್ದು, ಸಮಯದ ಅಭಾವದಿಂದ ಭೇಟಿ ನೀಡಲಾಗಿಲ್ಲ’ ಎಂದರು.

ವಿವಿಧ ಸಂಘಟನೆಗಳ ಪ್ರಮುಖರಾದ ಹಮ್ಜಾ ಪಟೇಲ, ಗಣಪತಿ ತಾಂಡೇಲ, ದಾಮೋದರ ಮೇಸ್ತ, ರಾಜೇಶ ತಾಂಡೇಲ, ರಾಜು ತಾಂಡೇಲ, ಅಬ್ಬಾಸ್ ಸಾಬ್, ವಿವನ್ ಫರ್ನಾಂಡೀಸ್‌, ಪಾರ್ವತಿ ತಾಂಡೇಲ, ಪ್ರೀತಿ ಗಣೇಶ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು